'ದರ್ಶನ್‌ಗೆ ಜೀವಾವಧಿ ಅಲ್ಲ.. ಸಾರ್ವಜನಿಕವಾಗಿ ಕಲ್ಲಿನಿಂದ ಹೊಡೆದು ಸಾಯಿಸಬೇಕು'
ಚಿತ್ರದುರ್ಗ, ಜೂನ್ 23: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಆರೋಪಿಗಳು ಜೈಲು ಪಾಲಾಗಿದ್ದಾರೆ. ಈ ಬಗ್ಗೆ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಚಿತ್ರದುರ್ಗದಲ್ಲಿ ಪ್ರತಿಕ್ರಿಯಿಸಿದ್ದು ಆರೋಪಿಗಳಿಗೆ ಜೈಲು ಶಿಕ್ಷೆ, ಜೀವಾವಧಿ ಶಿಕ್ಷೆಗೂ ಹೊರತಾದ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ನನ್ನ ಮಗನ ಕೊಲೆ ಆರೋಪಿಗಳಿಗೆ ಜೈಲು ಶಿಕ್ಷೆಯಾಗಿದೆ ಎಂದು ನೀವೆಲ್ಲಾ ಹೇಳಿದ್ದೀರಿ. ನಾವಂತೂ ಟಿವಿ, ಪೇಪರ್ ಏನೂ ನೋಡುವುದಿಲ್ಲ. ಅದೆನೆಲ್ಲಾ ನೋಡುವುದಕ್ಕೆ ನಮಗೆ ಹಿಂಸೆ ಆಗುತ್ತದೆ. ತಮ್ಮ ಮೂಲಕ ನಮಗೆ ಕೆಲವು ವರದಿ ಸಿಗುತ್ತಿದೆ. ಈಗ ಜೈಲಾಗಿರುವುದು ನಮ್ಮ ಪೊಲೀಸರ ಹಾಗೂ ನ್ಯಾಯವಾದಿಗಳ ಪರಿಶ್ರಮದಿಂದ. ಅವರಿಗೆ ಶಿಕ್ಷೆ ಆಗಲೇಬೇಕು ಎಂದು ಒತ್ತಾಯಿಸಿದ್ದಾರೆ.

ಶಿಕ್ಷೆ ಯಾವ ರೀತಿ ಆಗಬೇಕು ಎಂದರೆ ನನ್ನ ಮಗ ಏನು ನೋವು ಅನುಭವಿಸಿದನೋ ಕಿರುಚಾಡಿದನೋ ಅದರ ಅನುಭವ ಅವರಿಗೆ ಆಗಬೇಕು. ಆ ಹುಡುಗನಿಗೆ ಹೇಗೆ ಹಿಂಸೆ ಕೊಟ್ಟಿದ್ದಲ್ಲಾ ಅವರಿಗೂ ಅದೇ ರೀತಿ ಹಿಂಸೆ ಕೊಟ್ಟು ಶಿಕ್ಷೆಯಾಗಬೇಕು. ಜೈಲು, ಜೀವಾವಧಿ ಅಲ್ಲ. ಅದರ ಜೊತೆಗೆ ದಿನ ನಿತ್ಯ ಅವರಿಗೆ ಈ ರೀತಿಯ ಶಿಕ್ಷೆ ಕೊಡಬೇಕು. ನನ್ನ ಮಗನಿಗೆ ಯಾವ ರೀತಿ ಮಾಡಿದ್ದಾರೆ. ಯಾವ ರೀತಿ ಗಾಯವಾಗಿದೆ. ಅದೇ ರೀತಿ ಅವರಿಗೆ ಗಾಯ ಆಗಬೇಕು..ಕರೆಂಟ್ ಶಾಕ್ ಕೊಡಬೇಕು ಎಂದಿದ್ದಾರೆ.
ನನ್ನ ಮಗನಿಗೆ ಯಾವುದರಿಂದ ಹೊಡೆದಿದ್ದಾರೆ ಅಲ್ಲಿದ್ದವರಿಗೂ ಅದೇ ತೆಗೆದುಕೊಂಡು ಹೊಡೆಯಬೇಕು. ಜನ ಸಾಮಾನ್ಯರ ಮುಂದೆ ಹೊಡೆಯಬೇಕು. ಅವರನ್ನು ಸಾರ್ವಜನಿಕವಾಗಿ ಕಲ್ಲಿನಿಂದ ಹೊಡೆದು ಸಾಯಿಸಬೇಕು. ಅಂತಹ ಶಿಕ್ಷೆ ಕೊಡಬೇಕು. ಯಾಕೆಂದರೆ ಅಂತಹ ನೋವು ನಮಗೆ ಆಗಿದೆ. ನಾವು ಮನುಷ್ಯತ್ವ ಕಳೆದುಕೊಳ್ಳಲು ಆಗುವುದಿಲ್ಲ. ಹಾಗಂತ ನಮಗಾದ ನೋವಿಗೆ ಬೆಲೆ ಕಟ್ಟಲು ಆಗುವುದಿಲ್ಲ ಎಂದಿದ್ದಾರೆ.

ಮಾಧ್ಯಮ ಹಾಗೂ ಸರ್ಕಾರ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಆರೋಪಿಗಳಿಗೆ ಶಿಕ್ಷೆ ಆಗುತ್ತದೆ ಎನಿಸುತ್ತಿದೆ. ಈ ಮೂಲಕ ಪೊಲೀಸರಿಗೆ, ಸರ್ಕಾರಕ್ಕೆ ಹಾಗೂ ಮಾಧ್ಯಮಗಳಿಗೆ..ನನ್ನ ಪರ ನ್ಯಾಯಕ್ಕಾಗಿ ಹೋರಾಡಿ ಎಲ್ಲರಿಗೂ ನನ್ನ ಕಳಕಳಿಯ ನಮಸ್ಥಾರ ಎಂದು ಕಾಶಿನಾಥಯ್ಯ ಕಣ್ಣೀರು ಹಾಕಿದ್ದಾರೆ.












Click it and Unblock the Notifications