Darshan Bail: ದರ್ಶನ್, ಪವಿತ್ರಾ ಗೌಡ ಜಾಮೀನು ಅರ್ಜಿ; ಸರ್ಕಾರಕ್ಕೆ ನೋಟಿಸ್ ಕೊಟ್ಟ ನ್ಯಾಯಾಲಯ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 102 ದಿನಗಳಿಂದ ಜೈಲಿನಲ್ಲಿರುವ ನಟ ದರ್ಶನ್ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಕೂಡ ಜಾಮೀನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಜಾಮೀನು ಅರ್ಜಿಯನ್ನು ಸ್ವೀಕರಿಸಿರುವ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಸೆಪ್ಟೆಂಬರ್ 19 ರಂದು ಪವಿತ್ರಾ ಗೌಡ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಮತ್ತು ಸೆಪ್ಟೆಂಬರ್ 21ರಂದು ಶನಿವಾರ ದರ್ಶನ್ ಜಾಮೀನು ಅರ್ಜಿಗೆ ಸಂಬಂಧಪಟ್ಟಂತೆ ವಿಶೇಷ ಸರ್ಕಾರಿ ಅಭಿಯೋಜಕರಿಗೆ (ಎಸ್‌ಪಿಪಿ) 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶ ಜೈಶಂಕರ್ ನೋಟಿಸ್ ಜಾರಿ ಮಾಡಿದ್ದಾರೆ. ದರ್ಶನ್ ಮತ್ತು ಪವಿತ್ರಾ ಗೌಡ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎಸ್‌ಪಿಪಿ ಪ್ರಸನ್ನ ಕುಮಾರ್ ಸಮಯಾವಕಾಶ ಕೇಳಿದ್ದು, ಸೋಮವಾರಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.

ಪವಿತ್ರಾ ಗೌಡ ಪರವಾಗಿ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ಅರ್ಜಿ ಸಲ್ಲಿಸಿದರೆ, ನಟ ದರ್ಶನ್ ಪರವಾಗಿ ವಕೀಲ ಸುನಿಲ್ ಕುಮಾರ್ ಜಾಮೀನು ಅರ್ಜಿ ಸಲ್ಲಿಸಿದ್ದು ಸೋಮವಾರ ವಕಾಲತ್ತು ವಹಿಸಿ ವಾದ ಮಾಡಲಿದ್ದಾರೆ.
ಎ1 ಆರೋಪಿ ಪವಿತ್ರಾ ಗೌಡ ಈ ಮೊದಲೇ ಜಾಮೀನು ಅರ್ಜಿ ಸಲ್ಲಿಸಿದ್ದರು ಆದರೆ ವಿಚಾರಣಾ ನ್ಯಾಯಾಲಯ ಅವರಿಗೆ ಜಾಮೀನು ತಿರಸ್ಕರಿಸಿತ್ತು, ಬಳಿಕ ಪವಿತ್ರಾ ಗೌಡ ಹೈಕೋರ್ಟ್‌ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು, ಆದರೆ ವಿಚಾರಣೆಗೆ ಬರುವ ವೇಳೆಗೆ ಪ್ರಾಸಿಕ್ಯೂಷನ್ ಆರೋಪ ಪಟ್ಟಿ ಸಲ್ಲಿಸಿದ್ದರಿಂದ ವಿಚಾರಣಾ ನ್ಯಾಯಾಲಯದಲ್ಲೇ ಜಾಮೀನು ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ಜಡ್ಜ್ ಸೂಚನೆ ಕೊಟ್ಟಿದ್ದರಿಂದ, ಜಾಮೀನು ಅರ್ಜಿ ವಾಪಸ್ ಪಡೆಯಲಾಗಿತ್ತು.
ದರ್ಶನ್ ಬಿಡುಗಡೆ ಯಾವಾಗ?
ದರ್ಶನ್ ಪರ ವಕೀಲರು ಎಚ್ಚರಿಕೆಯಿಂದ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ 18 ದಿನಗಳ ಬಳಿಕ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದು ವಿಶೇಷ, ಆರೋಪ ಪಟ್ಟಿಯಲ್ಲಿರುವ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ದರ್ಶನ್ ಪರ ವಕೀಲರು ಸೋಮವಾರ ಜಾಮೀನು ನೀಡುವಂತೆ ಬಲವಾಗಿ ವಾದ ಮಂಡಿಸುವ ಸಾಧ್ಯವಿದೆ.
ಸೆಪ್ಟೆಂಬರ್ 4 ರಂದು ಆರೋಪ ಪಟ್ಟಿ ಸಲ್ಲಿಕಯಾಗುತ್ತಿದ್ದಂತೆ ಜಾಮೀನಿಗೆ ಅರ್ಜಿ ಸಲ್ಲಿಸುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು, ಆದರೆ ವಕೀಲರು ಸಾಕಷ್ಟು ಸಮಯ ತೆಗೆದುಕೊಂಡು ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಪವಿತ್ರಾ ಗೌಡ ಮತ್ತು ಇತರ ಆರೋಪಿಗಳು ಈಗಾಗಲೇ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ಅದು ತಿರಸ್ಕೃತವಾಗಿದೆ. ಈಗ ಆರೋಪ ಪಟ್ಟಿ ಸಲ್ಲಿಕೆಯಾಗಿದ್ದು, ವಿವಿಧ ಜೈಲಿನಲ್ಲಿರುವ ಉಳಿದ 15 ಆರೋಪಿಗಳು ಕೂಡ ಜಾಮೀನಿಗಾಗಿ ಅರ್ಜಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.












Click it and Unblock the Notifications