ದರ್ಶನ್ ವಶಕ್ಕೆ: ಕಾಮಾಕ್ಷಿಪಾಳ್ಯ ಮೋರಿಯಲ್ಲಿ ಸಿಕ್ಕಿತ್ತು ರೇಣುಕಾಸ್ವಾಮಿ ಶವ
ಬೆಂಗಳೂರು, ಜೂನ್ 11; ಕನ್ನಡ ನಟ, ಅಭಿಮಾನಿಗಳ ಪಾಲಿನ ಚಾಲೆಂಜಿಂಗ್ ಸ್ಟಾರ್ ದರ್ಶನ್‌ರನ್ನು ಕೊಲೆ ಆರೋಪದಲ್ಲಿ ವಶಕ್ಕೆ ಪಡೆಯಲಾಗಿದೆ. ಚಿತ್ರದುರ್ಗದ ಮೂಲದ ವ್ಯಕ್ತಿಯ ಹತ್ಯೆ ಪ್ರಕರಣದಲ್ಲಿ ದರ್ಶನ್ ಸೇರಿ 10 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ಚಿತ್ರದುರ್ಗದ ಲಕ್ಷ್ಮೀ ವೆಂಕಟೇಶ್ವರ ಬಡಾವಣೆಯ ನಿವಾಸಿ ರೇಣುಕಾಸ್ವಾಮಿ ಎಂದು ಗುರುತಿಸಲಾಗಿದೆ. ಜೂನ್ 1ರ ಶನಿವಾರ ಮನೆಯಿಂದ ಹೋದ ರೇಣುಕಾಸ್ವಾಮಿ ವಾಪಸ್ ಆಗಿರಲಿಲ್ಲ. ಜೂನ್ 10ರಂದು ಅವರ ಕುಟುಂಬ ಸದಸ್ಯರಿಗೆ ಪೊಲೀಸರು ಕೊಲೆಯಾಗಿರುವ ಮಾಹಿತಿ ನೀಡಿದ್ದಾರೆ.

ನಟ ದರ್ಶನ್ ಸೂಚನೆಯಂತೆ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆಸಿ, ಬೆಂಗಳೂರಿನ ಕಾಮಾಕ್ಷಿಪಾಳ್ಯದ ಶೆಡ್‌ವೊಂದರಲ್ಲಿ ಕೂಡಿ ಹಾಕಲಾಗಿತ್ತು. ಜೂನ್ 8ರಂದು ಹತ್ಯೆ ಮಾಡಿದ್ದು, ಜೂನ್ 9ರಂದು ಶವ ಮೋರಿಯಲ್ಲಿ ಪತ್ತೆಯಾಗಿತ್ತು.
ಅಪಾರ್ಟ್‌ಮೆಂಟ್ ಭದ್ರತಾ ಸಿಬ್ಭಂದಿ ಮಾಹಿತಿ: ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಿ ಸುಮನಹಳ್ಳಿ ಸಮೀಪದ ಅನುಗ್ರಹ ಅಪಾರ್ಟ್‌ಮೆಂಟ್ ಬಳಿಯ ಮೋರಿಗೆ ಶವ ಎಸೆಯಲಾಗಿತ್ತು. ಜೂನ್ 9ರ ಬೆಳಗ್ಗೆ ನಾಯಿಗಳು ಶವವನ್ನು ಎಳೆದಾಡುತ್ತಿದ್ದವು. ಈ ಕುರಿತು ಅಪಾರ್ಟ್‌ಮೆಂಟ್ ಭದ್ರತಾ ಸಿಬ್ಬಂದಿ ರಾಮ್ ದೋರ್ ಜೀ ಪೊಲೀಸರಿಗೆ ಮಾಹಿತಿ ನೀಡಿದ್ದರು.
ರೇಣುಕಾಸ್ವಾಮಿ ಶವವನ್ನು ವಶಕ್ಕೆ ಪಡೆದಿದ್ದ ಕಾಮಾಕ್ಷಿಪಾಳ್ಯ ಪೊಲೀಸರು ಅಪರಿಚಿತ ಶವ ಪತ್ತೆ ಎಂದು ಪ್ರಕರಣದ ತನಿಖೆ ಆರಂಭಿಸಿದ್ದರು, ಆರೋಪಿಗಳನ್ನು ಪತ್ತೆ ಹಚ್ಚಿದ್ದರು. ವಿಚಾರಣೆ ವೇಳೆ ಇಬ್ಬರು ಆರೋಪಿಗಳು ದರ್ಶನ್ ಸಂಚು ಇರುವ ಕುರಿತು ಒಪ್ಪಿಕೊಂಡಿದ್ದು, ಮಂಗಳವಾರ ಬೆಳಗ್ಗೆ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ದರ್ಶನ್ ವಶಕ್ಕೆ ಪಡೆದು, ಬೆಂಗಳೂರಿಗೆ ಕರೆದುಕೊಂಡು ಬರಲಾಗುತ್ತಿದೆ.
ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷರ ಮೂಲಕ ರೇಣುಕಾಸ್ವಾಮಿಯನ್ನು ಕರೆಸಿಕೊಂಡು ಬೆಂಗಳೂರು ನಗರದ ಕಾಮಾಕ್ಷಿಪಾಳ್ಯದ ಶೆಡ್‌ವೊಂದರಲ್ಲಿ ಕೂಡಿ ಹಾಕಲಾಗಿತ್ತು. ಬಳಿಕ ಅವರ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿ, ಬಳಿಕ ಶವವನ್ನು ಮೋರಿಗೆ ಎಸೆಯಲಾಗಿದೆ ಎಂಬುದು ಆರೋಪವಾಗಿದೆ.
ಪೊಲೀಸರ ಮಾಹಿತಿ: ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಪ್ರಕರಣದ ಕುರಿತು ಪತ್ರಿಕಾಗೋಷ್ಠಿ ನಡೆಸಿ ಪ್ರಾಥಮಿಕ ಮಾಹಿತಿ ನೀಡಿದರು. "ಜೂನ್ 9ರ ಬೆಳಗ್ಗೆ ಮೋರಿಯಲ್ಲಿ ಶವ ಸಿಕ್ಕ ಮಾಹಿತಿ ಆಧರಿಸಿ ತನಿಖೆ ಕೈಗೊಳ್ಳಲಾಗಿತ್ತು. ಆಗ ಕೊಲೆಯಾದ ವ್ಯಕ್ತಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂದು ಗುರುತಿಸಲಾಯಿತು" ಎಂದು ಹೇಳಿದರು.
"ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ವಿವಿಧ ಮಾಹಿತಿ ಆಧರಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ನಟ ದರ್ಶನ್, ಅವರ ಸಹಚರರ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ಬಳಿಕ ಹೆಚ್ಚಿನ ಮಾಹಿತಿ ತಿಳಿಯಲಿದೆ" ಎಂದು ಆಯುಕ್ತರು ಹೇಳಿದರು.
ಚಿತ್ರದುರ್ಗದಲ್ಲಿ ದರ್ಶನ್ ಅಭಿಮಾನಿಗಳ ಸಂಘ ಕಟ್ಟಿಕೊಂಡಿದ್ದ ರಾಘವೇಂದ್ರ ಮೂಲಕ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿ ವಿನಯ್ ಎಂಬುವವರಿಗೆ ಸೇರಿದ ಶೆಡ್‌ನಲ್ಲಿ ಇರಿಸಲಾಗಿತ್ತು. ದರ್ಶನ್ ಪ್ರೇಯಸಿಗೆ ಅಶ್ಲೀಲ, ಅವಹೇಳನಕಾರಿ ಮೆಸೇಜ್ ಮಾಡಿದ ಕಾರಣಕ್ಕೆ ಸಂಚು ನಡೆಸಿ ಹತ್ಯೆ ಮಾಡಿಸಲಾಗಿದೆ ಎಂಬುದು ಆರೋಪವಾಗಿದೆ.
ರೇಣುಕಾಸ್ವಾಮಿ ಶಿವನಗೌಡ ಮತ್ತು ರತ್ನಪ್ರಭಾ ದಂಪತಿ ಪುತ್ರ. ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಮತ್ತು ಅವರ ಸಹಚರರು ಸೇರಿದಂತೆ 10ಕ್ಕೂ ಹೆಚ್ಚು ಮಂದಿಯ ವಿಚಾರಣೆ ನಡೆಯುತ್ತಿದೆ. ರೇಣುಕಾಸ್ವಾಮಿ ಕುಟುಂಬ ಸದಸ್ಯರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ದರ್ಶನ್ ಪ್ರೇಯಸಿ ಪವಿತ್ರಾ ಗೌಡ ಅವರನ್ನು ಆರ್. ಆರ್. ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ಆರಂಭಿಸಿದ್ದಾರೆ.












Click it and Unblock the Notifications