Renukaswamy Post-Mortem Report: ಮರಣೋತ್ತರ ಪರೀಕ್ಷೆ ವರದಿ ಬಹಿರಂಗ- ಚಿತ್ರಹಿಂಸೆಯಿಂದ ರೇಣುಕಾಸ್ವಾಮಿ ಸಾವು!
ಬೆಂಗಳೂರು ಜೂನ್ 14: ಕನ್ನಡದ ಖ್ಯಾತ ನಟ ದರ್ಶನ್ ತೂಗುದೀಪ ಅವರು ಚಿತ್ರಹಿಂಸೆ ನೀಡಿ ಹತ್ಯೆಗೈದಿದ್ದಾರೆ ಎನ್ನಲಾದ ರೇಣುಕಾಸ್ವಾಮಿ ಅವರ ಮರಣೋತ್ತರ ಪರೀಕ್ಷೆಯ ವರದಿ ಬಂದಿದೆ.
ರೇಣುಕಾಸ್ವಾಮಿ ಅವರು ಆಘಾತ, ಚಿತ್ರಹಿಂಸೆ ಮತ್ತು ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ಶವಪರೀಕ್ಷೆ ವರದಿ ತಿಳಿಸಲಾಗಿದೆ. ಶವಪರೀಕ್ಷೆಯಲ್ಲಿ ರೇಣುಕಾ ಸ್ವಾಮಿ ಅವರ ದೇಹದ ಮೇಲೆ 15 ಗಾಯಗಳು ಕಂಡುಬಂದಿವೆ.

ರೇಣುಕಾ ಸ್ವಾಮಿ ಅವರ ದೇಹದ ತಲೆ, ಹೊಟ್ಟೆ, ಎದೆ ಮತ್ತು ಇತರ ಭಾಗಗಳಲ್ಲಿ ಗಾಯದ ಗುರುತುಗಳಿವೆ. ರೇಣುಕಾಸ್ವಾಮಿ ಮೈ ಮೇಲೆ ಇರುವ ಗಾಯದ ಗುರುತುಗಳು ಮರದ ಕೋಲು, ಚರ್ಮದ ಬೆಲ್ಟ್ ಹಾಗೂ ಹಗ್ಗದಿಂದ ಹೊಡೆದ ಗುರುತುಗಳಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ರೇಣುಕಾಸ್ವಾಮಿ ಅವರ ತಲೆಯನ್ನು ಶೆಡ್ಡಿನಲ್ಲಿ ನಿಂತಿದ್ದ ಮಿನಿ ಟ್ರಕ್‌ಗೆ ಹೊಡೆಯಲಾಗಿದೆ ಎಂದು ಶವಪರೀಕ್ಷೆ ವರದಿ ಹೇಳಲಾಗಿದೆ. ಈ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರೇಣುಕಾ ಸ್ವಾಮಿಗೆ ಚಿತ್ರಹಿಂಸೆ ನೀಡಲು ಬಳಸಿದ ಮರದ ಕೋಲುಗಳು, ಚರ್ಮದ ಬೆಲ್ಟ್ ಮತ್ತು ಹಗ್ಗವನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ದರ್ಶನ್ ತೂಗುದೀಪ ಅವರ ಗೆಳತಿ ಪವಿತ್ರಾ ಗೌಡ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಮಾಡಿದ ಕಾಮೆಂಟ್‌ಗಳಿಗಾಗಿ ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಅಪಹರಿಸಿ ಹಲ್ಲೆ ಮಾಡಿ ಕೊಲ್ಲಲಾಗಿದೆ. ಈ ಹಲ್ಲೆಯಲ್ಲಿ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದರೆ ನಟ ದರ್ಶನ್ ಎ2 ಆರೋಪಿಯಾಗಿದ್ದಾರೆ. ದರ್ಶನ್ ತೂಗುದೀಪ ಅವರು ಕೊಲೆಯ ಹೊಣೆ ಹೊರಲು ಮೂವರನ್ನು ನೇಮಕ ಮಾಡಿದ್ದರು. ಆ ಮೂವರಿಗೆ ತಲಾ 5 ಲಕ್ಷ ನೀಡುವುದಾಗಿ ಹೇಳಿದ್ದರು ಎಂದು ತಿಳಿದು ಬಂದಿದೆ.

ಏನಿದು ಘಟನೆ?
ಶನಿವಾರ (ಜೂನ್ 8) ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಅವರನ್ನು ನಟ ದರ್ಶನ್ ಗ್ಯಾಂಗ್ ಅಪಹರಿಸಿತ್ತು. ಚಿತ್ರದುರ್ಗದಿಂದ ವಾಹನದಲ್ಲಿ ಬೆಂಗಳೂರಿನಲ್ಲಿರುವ ಪಟ್ಟಣಗೆರೆ ಶೆಡ್ಡಿಗೆ ಕರೆತಂದಿತ್ತು. ಅಲ್ಲಿಗೆ ಮಧ್ಯಾಹ್ನದ ವೇಳೆ ಪ್ರೇಯಸಿಯೊಂದಿಗೆ ಬಂದ ದರ್ಶನ್ ಮನಬಂದಂತೆ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದರು. ಅಲ್ಲದೆ ದರ್ಶನ್ ಗ್ಯಾಂಗ್ ಕೂಡ ಹಲ್ಲೆ ಮಾಡಿದೆ. ಇದರಿಂದ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾರೆ.
ಬಳಿಕ ಅಲ್ಲಿಂದ ದರ್ಶನ್ ಗ್ಯಾಂಗ್ ಅವರ ಮೃತ ದೇಹವನ್ನು ಕಾಮಾಕ್ಷಿಪಾಳ್ಯ ಮೋರಿಯಲ್ಲಿ ಎಸೆದು ಹೋಗಿದ್ದಾರೆ. ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದೊಯ್ದಿದ್ದ ಚಾಲಕ ರವಿ ಎಂಬಾತ ಪೊಲೀಸರ ಮುಂದೆ ಶರಣಾಗಿದ್ದಾನೆ. ಮತ್ತೊಬ್ಬ ಆರೋಪಿ ರಘು ಅಲಿಯಾಸ್ ರಾಘವೇಂದ್ರ ಇತರರೊಂದಿಗೆ ಸೇರಿ ಪೊಲೀಸರಿಗೆ ಶರಣಾಗಿ ಕೊಲೆ ಮಾಡಿದ್ದು ತಾವೇ ಎಂದು ಒಪ್ಪಿಕೊಂಡಿದ್ದಾರೆ.

ಆದರೆ ಒಬ್ಬೊಬ್ಬರ ಹೇಳಿಕೆ ಒಂದೊಂದು ರೀತಿ ಇದ್ದರಿಂದ ಅನುಮಾನ ಬಂದು ಪೊಲೀಸರು ಬಾಯಿ ಬಿಡಿಸಿದಾಗ ಕೊಲೆ ಹಿಂದೆ ದರ್ಶನ್ ಕೈವಾಡವಿರುವುದು ಬಹಿರಂಗವಾಗಿದೆ. ದರ್ಶನ್ ಪ್ರೇಯಸಿ ಪವಿತ್ರಾಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ರೇಣುಕಾ ಸ್ವಾಮಿ ಕೊಲೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳೀಯ ಸಿಸಿಟಿವಿ ಫೂಟೇಜ್ ಗಳು ದರ್ಶನ್ ಕಾರು ಕೊಲೆಯಾದ ಸ್ಥಳಕ್ಕೆ ಆಗಮಿಸಿರುವುದು ಕಂಡು ಬಂದಿದೆ.












Click it and Unblock the Notifications