Dana Effect: ಬೆಂಗಳೂರಿನಲ್ಲಿ ವರುಣಾರ್ಭಟ: ಪವರ್ ಕಟ್, ನೋ ಇಂಟರ್‌ನೆಟ್- ಮನೆಯಿಂದಲೇ ಕೆಲಸ ಮಾಡುವವರ ಕಥೆ ಹರೋಹರ..
ಬೆಂಗಳೂರು ಅಕ್ಟೋಬರ್ 22: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಕೆಲ ತಿಂಗಳುಗಳ ಹಿಂದೆ ಕಂಡು ಕೇಳರಿಯದಷ್ಟು ಧಾರಾಕಾರ ಮಳೆ ಸುರಿಯುತ್ತಿದೆ. ವರುಣನ ಅರ್ಭಟಕ್ಕೆ ಉದ್ಯಾನ ನಗರಿ ತತ್ತರಿಸಿ ಹೋಗಿದೆ. ರಾಜಾಜಿನಗರ, ವಿಜಯನಗರ, ರಾಜರಾಜೇಶ್ವರಿ ನಗರದಲ್ಲಿ ಇಂದು ಮಧ್ಯಾಹ್ನದಿಂದಲೇ ತೀವ್ರ ಮಳೆಯಾಗಲಾರಂಭಿಸಿದೆ. ಅಲ್ಲದೆ ರಸ್ತೆಗಳಲ್ಲಿ ಅಡಿಗಳಷ್ಟು ನೀರು ನಿಂತಿದ್ದು ವಾಹನ ಸವಾರರು ಸುಸ್ತಾಗಿ ಹೋಗಿದ್ದಾರೆ.
ಹೌದು... ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಧಾರಾಕಾರವಾಗಿ ಮಳೆಯಾಗುತ್ತಿದ್ದು ಜನ ಹೈರಾಣಾಗಿ ಹೋಗಿದ್ದಾರೆ. ರಸ್ತೆಗಳು, ಫುಟ್‌ಪಾತ್‌ಗಳು ಹಾಗೂ ಮನೆಗಳು ನದಿಗಳಾಗಿ ಪರಿವರ್ತನೆಗೊಂಡಿವೆ. ಬೈಕ್, ಕಾರು, ಸೈಕಲ್ ಆಟಿಕೆಯಂತೆ ತೇಲಾಡುತ್ತಿವೆ.

ಕೆಲಸ ಕಾರ್ಯಗಳಿಗೆ ಮನೆಯಿಂದ ಹೊರ ಬಂದ ಜನ ಮಳೆರಾಯನ ರೌದ್ರನರ್ತನಕ್ಕೆ ನಲುಗಿ ಹೋಗಿದ್ದಾರೆ.
ಪವರ್ ಕಟ್, ನೋ ಇಂಟರ್‌ನೆಟ್
ಬಿಟ್ಟು ಬಿಡದೆ ನಿರಂತವಾಗಿ ಸುರಿಯುತ್ತಿರುವ ಮಳೆಗೆ ಜನ ನಡುಗುತ್ತಿದ್ದಾರೆ. ಅದ್ರಲ್ಲೂ ವಿಜಯನಗರ, ರಾಜಾಜಿನಗರ, ರಾಜರಾಜೇಶ್ವರಿ ನಗರದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದ್ದು ಹಲವೆಡೆ ವಿದ್ಯುತ್ ಕಡಿತಗೊಂಡಿದೆ. ಕೆಲವೆಡೆ ಇಂಟರ್‌ನೆಟ್ ಸಹ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಮನೆಯಿಂದಲೇ ಕೆಲಸ ಮಾಡುವವರ ಕಥೆ ಹೇಳತೀರದ್ದಾಗಿದೆ.
ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು ಜೋರು ಮಳೆಯಿಂದ ಗಾಳಿ ಕೂಡ ಬೀಸುತ್ತಿದೆ. ಗುಡುಗು ಮಿಂಚಿನೊಂದಿಗೆ ಧಾರಾಕಾರ ಮಳೆಯಾಗುತ್ತಿದ್ದು, ಕಿಟಕಿ, ಬಾಗಿಲು ಸೇರಿದಂತೆ ಕೆಲ ಮನೆಗಳಲ್ಲಿ ಗೋಡೆಗಳಿಂದಲೂ ನೀರು ಮನೆ ಪ್ರವೇಶಿಸುತ್ತಿದೆ. ಹೀಗಾಗಿ ಜನ ಮನೆಯಲ್ಲಿದ್ದರೂ ನಡುಗುವಂತಹ ಸ್ಥಿತಿ ನಿರ್ಮಾಣವಾಗಿದೆ.

ಮನೆಯಿಂದಲೇ ಕೆಲಸ ಮಾಡುವವರ ಕಥೆ ಹರೋಹರ..
ಅಕ್ಟೋಬರ್ ತಿಂಗಳ ಆರಂಭದಿಂದಲೂ ಬೆಂಗಳೂರಿನಲ್ಲಿ ಮಳೆ ತೀವ್ರಗೊಂಡಿದೆ. ಇದರಿಂದಾಗಿ ಹಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ತಿಳಿಸಿವೆ. ಆದರೆ ತೀವ್ರ ಮಳೆಗೆ ಬಹುತೇಕ ಪ್ರದೇಶಗಳಲ್ಲಿ ನಿರಂತರ ವಿದ್ಯುತ್ ವ್ಯತ್ಯಯವಾಗುತ್ತಿದ್ದು, ಇಂಟರ್‌ನೆಟ್ ಸಹ ಸರಿಯಾಗಿ ವರ್ಕ್ ಆಗುತ್ತಿಲ್ಲ. ಹೀಗಾಗಿ ಉದ್ಯೋಗಿಗಳು ಅತ್ತ ಕಚೇರಿಗಳಿಗೂ ತೆರಳಲಾಗದೇ, ಮನೆಯಲ್ಲೂ ಕೆಲಸ ಮಾಡಲಾಗದೇ ಅತಂತ್ರರಾಗಿದ್ದಾರೆ.
ಚಳಿ, ಮೋಡ, ಮಳೆ: ಜನರಲ್ಲಿ ನಡುಕ!
ಇನ್ನೂ ನಿರಂತರ ಮಳೆಯಿಂದಾಗಿ ನಗರದ ವಾತಾವರಣವೇ ಬದಲಾಗಿ ಹೋಗಿದೆ. ಜಿಟಿ ಜಿಟಿ ಮಳೆಗೆ ತಂಪಾದ ವಾತಾವರಣ ಆವರಿಸಿದ್ದು ಜಾಕೆಟ್, ರೇನ್ ಕೋರ್ಟ್ ಇದ್ಯಾವುದರಿಂದಲೂ ಜನ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲಾಗದಷ್ಟು ವಾತಾವರಣ ತಂಪಾಗಿದೆ. ಆಗಸದಲ್ಲಿ ಕಪ್ಪು ಕಾರ್ಮೋಡ ಆವರಿಸಿದ್ದು ಮಧ್ಯಾಹ್ನದ ಹೊತ್ತಲ್ಲೇ ಸಂಜೆಯಾದಂತೆ ಬಾಸವಾಗುತ್ತಿದೆ.
ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು
ಇನ್ನೂ ನಿತ್ಯ ಸುರಿಯುತ್ತಿರುವ ಮಳೆ ಉದ್ಯೋಗಿಗಳಿಗೆ ಮಾತ್ರವಲ್ಲದೆ ಮಕ್ಕಳ ಬಗ್ಗೆಯೂ ಚಿಂತೆಗೀಡು ಮಾಡಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟಾಕುತ್ತಿದ್ದಾರೆ. ಮಳೆಯಿಂದಾಗಿ ಮಕ್ಕಳ ಆರೋಗ್ಯದ ಬಗ್ಗೆ ಪೋಷಕರಿಗೆ ಚಿಂತೆ ಕಾಡತೊಡಗಿದೆ. ಹೀಗಾಗಿ ಕೆಲ ದಿನಗಳ ಮಟ್ಟಿಗೆ ಶಾಲೆಗಳಿಗೆ ರಜೆ ನೀಡಬೇಕು ಎಂದು ಪೋಷಕರು ಮನವಿ ಮಾಡುತ್ತಿದ್ದಾರೆ.
ಡಾನಾ ಚಂಡಮಾರುತದ ಎಫೆಕ್ಟ್
ಡಾನಾ ಚಂಡಮಾರುತದ ಪರಿಣಾಮ ರಾಜ್ಯದೆಲ್ಲೆಡೆ ಜೋರು ಮಳೆಯಾಗುತ್ತಿದ್ದು, ಮುಂದಿನ ಮೂರು ದಿನಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಅಕ್ಟೋಬರ್ 24ರವರೆಗೆ ಒಡಿಶಾ ಮತ್ತು ಪಶ್ಚಿಮ ಬಂಗಾಳಾದ ಕರಾವಳಿ ಪ್ರದೇಶಗಳಿಗೆ ಡಾನಾ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ.












Click it and Unblock the Notifications