ಜಯಾ ಬೇಲ್ ಕೇಸ್: ಕರ್ನಾಟಕ ಸರ್ಕಾರಕ್ಕೆ ನೋಟಿಸ್
ಬೆಂಗಳೂರು, ಸೆ.30: ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಜಾಮೀನು ಕೋರಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಪ್ರತಿವಾದಿ ಯಾರು ಎಂಬುದು ಇನ್ನೂ ಗೊಂದಲವಾಗಿರುವ ಕಾರಣ ಜಾಮೀನು ಅರ್ಜಿ ವಿಚಾರಣೆಯನ್ನು ರಜಾ ಕಾಲದ ನ್ಯಾಯಪೀಠ ಮುಂದೂಡಿದೆ.
ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರಶ್ನಿಸಿ ಜಯಲಲಿತಾ ಪರ ವಕೀಲರು ಕರ್ನಾಟಕ ಹೈಕೋರ್ಟ್‌ಗೆ ಸೋಮವಾರ ಮೇಲ್ಮನವಿ ಸಲ್ಲಿಸಿದ್ದರು. ಸಿಬಿಐ ನ್ಯಾಯಾಲಯದ ತೀರ್ಪು ರದ್ದುಪಡಿಸಬೇಕು ಹಾಗೂ ನನ್ನ ಕಕ್ಷಿದಾರರಿಗೆ ಜಾಮೀನು ನೀಡಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ಮಂಗಳವಾರ ಬೆಳಗ್ಗೆ ಹೈಕೋರ್ಟಿನಲ್ಲಿ ನಡೆಯಿತು. [ಜಯಾ, ಶಶಿಕಲಾ, ಸುಧಾಕರ್ ಎಲ್ರೂ ಪೇಷಂಟ್ಸ್]
ಜಯಲಲಿತಾ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ರಜಾಕಾಲದ ನ್ಯಾಯಪೀಠದ ನ್ಯಾ. ಸುಧಾಕರ್ ಅವರು ಪ್ರತಿವಾದಿ ಇಲ್ಲದ ಕಾರಣ ಇಂದು ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದರು. ಇದಕ್ಕೆ ಪ್ರತಿಯಾಗಿ ಜಯಲಲಿತಾ ಪರ ವಕೀಲ ರಾಮ್ ಜೇಠ್ಮಲಾನಿ ಅವರು ವಾದ ಮಂಡಿಸಿದರು. ಸಿಆರ್ ಪಿಎಫ್ ಪ್ರಕಾರ ನನ್ನ ಕಕ್ಷಿದಾರರಿಗೆ 10 ವರ್ಷಕ್ಕಿಂತ ಕಡಿಮೆ ಶಿಕ್ಷೆ ಆಗಿದೆ. ಹೀಗಾಗಿ ಈ ಹಂತದಲ್ಲಿ ಪ್ರತಿವಾದಿ ಅಥವಾ ಸರ್ಕಾರದ ಅಭಿಯೋಜಕರ ನೇಮಕಾತಿ ಗೊಂದಲಕ್ಕಿಂತ ನನ್ನ ಕಕ್ಷಿದಾರರ ಅರ್ಜಿ ವಿಚಾರಣೆ ಆಲಿಸಬೇಕೆಂದು ಮನವಿ ಮಾಡಿದರು.

ಆದರೆ, ಸರ್ಕಾರಿ ವಕೀಲರು ಯಾರು ಎಂದು ತಿಳಿಯದ ಹೊರತೂ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಜಾಮೀನು ಅರ್ಜಿಯನ್ನು ಸೋಮವಾರ(ಅ.6)ಕ್ಕೆ ಮುಂದೂಡಲಾಗಿದೆ ಎಂದು ನ್ಯಾ. ಸುಧಾಕರ್ ಹೇಳಿದರು. [ಹೈಕೋರ್ಟ್ ಮೊರೆ ಹೋದ ಜಯಲಲಿತಾ]
ಸರ್ಕಾರಕ್ಕೆ ನೋಟಿಸ್: ಕೂಡಲೇ ಸರ್ಕಾರಿ ಅಭಿಯೋಜಕರನ್ನು ನೇಮಿಸುವಂತೆ ಕರ್ನಾಟಕ ಸರ್ಕಾರಕ್ಕೆ ನ್ಯಾ. ಸುಧಾಕರ್ ನೋಟಿಸ್ ಜಾರಿಗೊಳಿಸಿದರು. ಈ ಹಿಂದೆ ಜಯಲಲಿತಾ ಅವರ ಆಸ್ತಿ ಪ್ರಕರಣದಲ್ಲಿ ಬಿ.ವಿ ಆಚಾರ್ಯ ಹಾಗೂ ಭವಾನಿ ಸಿಂಗ್ ಅವರು ಸರ್ಕಾರದ ಪರ ವಾದಿಸಿದ್ದರು.
ಜಯಲಲಿತಾ ಅವರಿಗೆ 4 ವರ್ಷ ಜೈಲು ಶಿಕ್ಷೆ ಹಾಗೂ 100 ಕೋಟಿ ರು ದಂಡ ವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶವನ್ನು ಭವಾನಿ ಸಿಂಗ್ ಅವರೇ ಮಾಧ್ಯಮಗಳ ಮುಂದಿಟ್ಟಿದ್ದರು. ಆದರೆ, ನಂತರ ಈ ಕೇಸಿನಲ್ಲಿ ವಾದಿಸುವುದಿಲ್ಲ ಎಂದು ಮಾಧ್ಯಮಗಳ ಜೊತೆ ಮಾತನಾಡುತ್ತಾ ಹೇಳಿದ್ದರು. ಹೀಗಾಗಿ ಸರ್ಕಾರಿ ಅಭಿಯೋಜಕರ ನೇಮಕಾತಿ ಗೊಂದಲ ಮುಂದುವರೆದಿದೆ. ಸೋಮವಾರ ಜಯಾ ಅವರ ಜಾಮೀನು ಅರ್ಜಿ ವಿಚಾರಣೆ ನಡೆದರೂ ಸರ್ಕಾರಿ ವಕೀಲರು ಕೋರ್ಟಿಗೆ ಹಾಜರಾಗದಿದ್ದರೆ ಜಯಾ ಅವರ ಜೈಲುವಾಸ ಇನ್ನಷ್ಟು ದಿನಗಳ ಕಾಲ ಮುಂದುವರೆಯುವ ಸಾಧ್ಯತೆಯಿದೆ.











Click it and Unblock the Notifications