ಬೆಂಗಳೂರು & ಕರ್ನಾಟಕದಲ್ಲಿ ವಲಸೆ ನೀತಿಗೆ ಕನ್ನಡಿಗರ ಆಗ್ರಹದ ನಡುವೆ ಡಿಸಿಎಂ ಡಿ.ಕೆ ಶಿವಕುಮಾರ್ ಎಡವಟ್ಟು!
DK Shivakumar: ಬೆಂಗಳೂರು ಹಾಗೂ ಕರ್ನಾಟಕಕ್ಕೆ ವಲಸಿಗರ ಸಂಖ್ಯೆ ಹೆಚ್ಚಳವಾಗುತ್ತಿದೆ. ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ಅವಶ್ಯಕತೆ ಇದೆ. ಅದರಲ್ಲೂ ಬಿಹಾರ ಸೇರಿದಂತೆ ದೇಶದ ಪ್ರಮುಖ ಆರು ರಾಜ್ಯಗಳಿಂದ ಬೆಂಗಳೂರು ಹಾಗೂ ಕರ್ನಾಟಕಕ್ಕೆ ಬರುವವರ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ ವಲಸೆ ನೀತಿ ರೂಪಿಸಬೇಕು. ಬೆಂಗಳೂರು ಸೇರಿದಂತೆ ಕರ್ನಾಟಕಕ್ಕೆ ವಿವಿಧ ರಾಜ್ಯಗಳಿಂದ ಬರುತ್ತಿರುವವರಿಗೆ ಕಡಿವಾಣ ಹಾಕಬೇಕು ಎನ್ನುವ ಒತ್ತಾಯ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಈ ರೀತಿ ಇರುವಾಗ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಎಡವಟ್ಟೊಂದನ್ನು ಮಾಡಿದ್ದಾರೆ.
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು. ಅಲ್ಲದೇ ಕರ್ನಾಟಕ ಸರ್ಕಾರವು ವಲಸೆ ನೀತಿ ರೂಪಿಸಬೇಕು ಎನ್ನುವ ಒತ್ತಾಯಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಈ ರೀತಿ ಇರುವಾಗ ಬಿಹಾರ ವಿಧಾನಸಭೆ ಚುನಾವಣೆ ನೆಪದಲ್ಲಿ ಡಿ.ಕೆ ಶಿವಕುಮಾರ್ ಅವರು ಬಿಹಾರಿಗರ ಪರವಾಗಿ ಬ್ಯಾಟಿಂಗ್ ಮಾಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಅಮರನಾಥ್ ಶಿವಶಂಕರ್ ಅವರು, ಬಿಹಾರಿಗಳನ್ನು ಒಂದು ಕಡೆ ಗುಡ್ಡೆ ಹಾಕಿ, ಅವರಿಗೆ ತಮ್ಮ ಊರಿಗೆ ಹೋಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ಹುರಿದುಂಬಿಸಿ ಅವರಿಗೆ ಸಕಲ ಸೇವೆಗಳನ್ನು ಒದಗಿಸಿ ಅವರಿಗೆ ರಜೆ ಕೊಡುವಂತೆ ಮನವಿ ಮಾಡುವ ಕರ್ನಾಟಕ ಉಪಮುಖ್ಯಮಂತ್ರಿಗಳಿದ್ದಾರೆ. ರಾಷ್ಟ್ರೀಯ ಪಕ್ಷಗಳು ನಮ್ಮನಾಳುವಾಗ ವಲಸೆ ತಡೆ ಸಾಧ್ಯವೇ? ಹೈ ಕಮಾಂಡ್ ಮೆಚ್ಚಿಸಲು ಏನೇನು ಆಟಗಳು ಎಂದು ವ್ಯಂಗ್ಯವಾಡಿದ್ದಾರೆ.
ಕರ್ನಾಟಕ ಚುನಾವಣೆ ಬಂದಾಗ ಕನ್ನಡ ಪ್ರೇಮ. ಬಿಹಾರ ಚುನಾವಣೆ ಬಂದಾಗ ಕರ್ನಾಟಕದಲ್ಲಿ ಇರುವ ಬಿಹಾರಿಗಳ ಮೇಲೆ ಪ್ರೇಮ. ಇದರ ನಡುವಲ್ಲಿ ಕನ್ನಡ ಬರದೇ ಇರುವ ನಾಲ್ಕು ಪಾಪದವರು ಸಿಕ್ಕಿದರೆ ಅವರ ಮೇಲೆ ದರ್ಪ ತೋರಿಸುವ ಹೋರಾಟಗಾರರು. ಇದರ ನಡುವಲ್ಲಿ ಮಂಗ ಆಗೋದು ಕನ್ನಡಿಗರು ಮಾತ್ರ. ಗೊತ್ತಿದ್ರೆ ಕನ್ನಡ ಮಾತಾಡಿ, ಆದರೆ ಕೊನೆಗೆ ಇಂಥವರನ್ನ ನಂಬಬೇಡಿ 🙏 ಎಂದು ನೆಟ್ಟಿಗರೊಬ್ಬರು ರಿಯಾಕ್ಟ್ ಮಾಡಿದ್ದಾರೆ.
ಮೋಹನ್ ಬೀರಸಂದ್ರ ಎನ್ನುವವರು, ಮೊದಲು ಕರ್ನಾಟಕದ ಜನಸಾಮಾನ್ಯರ ಹಿತಾಸಕ್ತಿ ಕಾಪಾಡಿ,ಬರೀ ಮಲೆಯಾಳಿ, ಹಿಂದಿ ಪರಭಾಷಿಕರ ಓಲೈಕೆ ಮಾಡಿ ನಿಮ್ಮ ಪಕ್ಷ ಬೆಳಸೋಕಲ್ಲ ಅಧಿಕಾರ ಇರೋದು. ವಲಸಿಗರ ಬಗ್ಗೆ ನಿಮಗಿರುವ ಕಾಳಜಿ ,ನೆಲದ ಮಕ್ಕಳ ಬಗ್ಗೆ ಇಲ್ಲ,ಇಂತಹ ಆಡಳಿತ ಬೇಕಿಲ್ಲ.ಕಾಲ ಉತ್ತರಿಸುತ್ತೆ ಎಂದಿದ್ದಾರೆ. ಪ್ರದೀಪ್ ಸಾಗರ್ ಎನ್ನುವವರು, ಅವರ ಜೊತೆ ಯಾವ ಭಾಷೆಲಿ ಮಾತಾಡುದ್ರಿ ಡಿ.ಕೆ ಶಿವಕುಮಾರ್ ಅವರೇ ನಾಚಿಕೆ ಆಗಬೇಕು ನಿಮಗೆಲ್ಲ. ಕರ್ನಾಟಕ ಬಿಹಾರ್ ಸಮಾಜ ಅಂತೆ. ಬಿಹಾರಕ್ಕೆ ಹೋದರೆ ಮದ್ರಾಸಿ ಅಂತ ಅತೀ ಕೆಟ್ಟದಾಗಿ ಕಾಣ್ತಾರೆ. ನೀವು ಇಲ್ಲಿ ಅವರಿಗೆ ರತ್ನಗಂಬಳಿ ಹಾಸಿ ವ್ಯವಸ್ಥೆ ಮಾಡ್ತಿದ್ದೀರಿ. ಧಿಕ್ಕಾರವಿರಲಿ ನಿಮ್ಮ ಈ ಹೊಲಸು ರಾಜಕಾರಣಕ್ಕೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಕರ್ನಾಟಕ ರಾಜ್ಯೋತ್ಸವದ ಎರಡನೇ ದಿನವೇ ಇಂತಹ ಪೋಸ್ಟ್ ನೋಡಿ ತುಂಬಾ ಖುಷಿ ಆಗಿದೆ ಎಂದೂ ಕೆಲವು ಕನ್ನಡಿಗರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಒಟ್ಟಾರೆ ಬಿಹಾರ ವಿಧಾನಸಭೆ ಚುನಾವಣೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ನಾಯಕರು ತೆಗೆದುಕೊಳ್ಳುತ್ತಿರುವ ಒಂದೊಂದು ನಿರ್ಧಾರಗಳೂ ಸಹ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.












Click it and Unblock the Notifications