ಐಟಿ ತಲೆನೋವಿನ ನಡುವೆಯೂ ಅಧಿಕಾರಿಗಳ ಸಭೆ ನಡೆಸಿದ ಡಿಕೆಶಿ
ಬೆಂಗಳೂರು, ಜೂನ್ 20: ಐಟಿ ರೇಡ್, ಐಟಿ ಇಲಾಖೆ ಸಮನ್ಸ್, ಡೈರಿ ಪತ್ತೆ ಆರೋಪ ಇನ್ನೂ ಹಲವು ತಲೆನೋವುಗಳ ನಡುವೆಯೂ ನೀರಾವರಿ ಹಾಗೂ ಉನ್ನತ ವೈದ್ಯಕೀಯ ಸಚಿವ ಡಿಕೆ ಶಿವಕುಮಾರ್ ಅವರು ಇಂದು ಅಧಿಕಾರಿಗಳ ಸಭೆ ನಡೆಸಿದರು.
ವಿಧಾನಸೌಧದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿಯ ಪುರ್ವಭಾವಿ ಸಭೆ ನಡೆಸಿದ ಡಿ.ಕೆ.ಶಿವಕುಮಾರ್ ಅವರು ಕೆಂಪೇಗೌಡ ಜಯಂತಿ ಆಚರಣೆ ಬಗ್ಗೆ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನಿಡಿದರು.
ಎಲ್ಲಾ ಕಾರ್ಪೊರೇಟರ್‌ಗಳು ಕೆಂಪೇಗೌಡ ಜಯಂತಿ ಆಚರಣೆಗೆ ಸ್ವಪ್ರೇರಿತವಾಗಿ ಹಣ ನೀಡಲು ಮುಂದೆ ಬಂದಿದ್ದಾರೆ ಹಾಗಾಗಿ ಅದ್ಧೂರಿಯಾಗಿ ಜಯಂತಿ ಆಚರಣೆ ಮಾಡಬೇಕು ಎಂದು ಅವರು ಸೂಚಿಸಿದರು.

ಬೆಂಗಳೂರಿನ ನಾಲ್ಕು ಗಡಿ ಗೋಪುರಗಳಿಂದ ಬರುವ ಮೆರವಣಿಗೆ ಸ್ವಾತಂತ್ರ್ಯ ಉದ್ಯಾನವನವನದಲ್ಲಿ ಒಟ್ಟಾಗಿ ಆ ನಂತರ ಅರಮನೆ ಮೈದಾನದಲ್ಲಿ ಆಯೋಜಿತವಾಗುವ ವೇದಿಕೆ ಕಾರ್ಯಕ್ರಮಕ್ಕೆ ಬರುತ್ತದೆ ಎಂದು ಅವರು ಕಾರ್ಯಕ್ರಮದ ನೀಲ ನಕ್ಷೆ ವಿವರಿಸಿದರು.
ನಾಳೆಯಿಂದಲೇ ಕೆಂಪೇಗೌಡ ಜಯಂತಿಯ ಬಗ್ಗೆ ಜಾಹೀರಾತನ್ನು ನೀಡಬೇಕು. ಕಳೆದ ಬಾರಿ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದಾಗ ಸ್ಥಳದ ಅಭಾವ ಉಂಟಾಗಿತ್ತು ಹಾಗಾಗಿ ಈ ಬಾರಿ ಅರಮನೆ ಮೈದಾನದಲ್ಲಿ ಆಯೋಜಿಸುತ್ತಿದ್ದೇವೆ ಎಂದರು.
ಕವಿ ದೊಡ್ಡರಂಗೇಗೌಡ ಮಾತನಾಡಿ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ದೊಡ್ಡ ಕೆಂಪೇಗೌಡರ ಮೂರ್ತಿ ಸ್ಥಾಪಿಸಬೇಕು, ವಿದ್ಯಾರ್ಥಿಗಳಿಗೆ ಕೆಂಪೇಗೌಡರ ಪರಿಚಯ ಪುಸ್ತಕ ನೀಡಬೇಕು, ಬೆಂಗಳೂರು ವಿವಿಗೆ ಕೆಂಪೇಗೌಡರ ಹೆಸರಿಡಬೇಕು ಎಂದು ಅವರು ಒತ್ತಾಯಿಸಿದರು.












Click it and Unblock the Notifications