ಬೆಂಗಳೂರಿಗರೆ, ಹುಡ್ ಹುಡ್ ಸೈಕ್ಲೋನ್ ಬರುತ್ತಿದೆ ಎಚ್ಚರ!
ಬೆಂಗಳೂರು, ಅ. 8: ಇನ್ನೇನು ಇವತ್ತಿನ ಕೆಲಸ ಮುಗೀತು. ಮನೆಗೆ ಹೋಗೋಣ ಎಂದು ಕಚೇರಿಯಿಂದ ಕೆಳಗಿಳಿದುಬಂದರೆ ಜೋರಾಗಿ ಬೀಳುತ್ತಿದ್ದ ಮಳೆ ಕಣ್ಣಿಗೆ ರಾಚಿತ್ತು. ವಾರದಿಂದ ಇದೇ ಪರಿಸ್ಥಿತಿ, ಬಸ್‌ನಲ್ಲಿ ಮನೆಗೆ ತೆರಳುವವರದ್ದು ಒಂದು ಗೋಳಾದರೆ, ಬೈಕ್ ಮತ್ತು ಕಾರು ತಂದವರದ್ದು ಇನ್ನೊಂದು ಗೋಳು.
ಅಯ್ಯಯ್ಯೋ... ನೆನೆದುಕೊಂಡು ಹೋಗಲಾರೆ ಎಂದು ಕೂತರೆ ಮನೆ ಮುಟ್ಟುವುದು ಮಧ್ಯರಾತ್ರಿಯೇ. ಒಂದು ವೇಳೆ ನಿಮ್ಮ ಕುದುರೆ ಏರಿ ಹೊರಟರೆ ಈ ಟ್ರಾಫಿಕ್ ಜಾಮ್, ಅಲ್ಲಲ್ಲಿ ಕಿತ್ತಿರುವ ರಸ್ತೆಗಳು, ಜಲಮಂಡಳಿಯವರ ಹೊಂಡ, ಸಿಗ್ನಲ್ ಗಮನಿಸಿದೆ ನುಗ್ಗುವ ಆಟೊಗಳು ಇವೆಲ್ಲದರ ನಡುವೆ ನಮ್ಮ ಪ್ರಾಣ ಉಳಿಸಿಕೊಂಡು ಸುರಕ್ಷಿತವಾಗಿ ಮನೆಗೆ ಸೇರುವುದು ಸಾಹಸ ಅಲ್ಲದೇ ಮತ್ತಿನ್ನೇನು?[ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಮಳೆ]

ಬಿಬಿಎಂಪಿ ಕೆಲಸ ಮಾಡಿಲ್ಲ, ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ, ಚರಂಡಿ ಸರಿ ಇಲ್ಲ, ರಾಜಕಾಲುವೆ ಒತ್ತುವರಿಯಾಗಿದ್ದೇ ಸಮಸ್ಯೆ ಮೂಲ ಎಂಬ ಅದೇ ಹಳೆ ಆರೋಪಗಳನ್ನು ಬದಿಗಿಡೋಣ. ನಮ್ಮ ಸುರಕ್ಷತೆಗೆ ನಾವೇನಾದರೂ ಮಾಡಿಕೊಂಡಿದ್ದೇವೆಯೇ ಎಂದು ನೋಡಿದರೆ ಉತ್ತರ ಶೂನ್ಯ.
ನಿನ್ನೆ ಮನೆಗೆ ನೆನೆದುಕೊಂಡೆ ಬಂದಿರುತ್ತೇವೆ, ಇವತ್ತು ಮಳೆ ಬರುತ್ತೆ ಎಂಬ ಆಲೋಚನೆ ಇದ್ದೇ ಇರುತ್ತೆ ಆದರೂ ಛತ್ರಿ ಇಲ್ಲವೇ ರೈನ್ ಕೋಟ್ ಬಿಟ್ಟೇ ಹೋಗಿರುತ್ತೇವೆ. ಕಚೇರಿಯಲ್ಲಿ ಇದೇನಿದು ಎಂದು ಯಾರಾದರೂ ಕೇಳಿದರೆ ನಮ್ಮ ಪ್ರತಿಷ್ಠೆಗೆ ಧಕ್ಕೆ ಎಂಬ ಒಣ ಜಂಭ ಸಂಜೆ ನೀರಲ್ಲಿ ತೊಯ್ಯುವಂತೆ ಮಾಡುತ್ತದೆ.
ಅಂಗಡಿಯ ಸಂದಿಯಲ್ಲೋ, ಮರದ ಅಡಿಯಲ್ಲೋ ಆಶ್ರಯ ಪಡೆದುಕೊಂಡು ಮನೆ ತಲುಪುವುದರಲ್ಲೇ ನಮಗೆ ಖುಷಿ ಇದೆ ಬಿಡಿ.
ಹಾಗಾದರೆ ಪ್ರತಿದಿನ ವಾರದಿಂದ ಬೆಂಗಳೂರಲ್ಲಿ ಮಳೆ ಬೀಳುತ್ತಲೇ ಇದೆ. ಮನೆಗಳಿಗೆ ನೀರು ನುಗ್ಗುವುದು, ಟ್ರಾಫಿಕ್ ಜಾಮ್ ಸಾಮಾನ್ಯವಾಗಿ ಹೋಗಿದೆ ಬಿಡಿ. ಅದರ ಬಗ್ಗೆ ಇನ್ನೇನು ಹೇಳಲಿಕ್ಕೆ ಸಾಧ್ಯ. ಆದರೆ ಮುಗ್ಧ ಜೀವಗಳು ಬಲಿಯಾದ ನೋವನ್ನು ಜನ ಮರೆತರೂ ಅವರ ಕುಟುಂಬಕ್ಕೆ ಅರಗಿಸಿಕೊಳ್ಳೋದು ಕಷ್ಟವೇ ಸರಿ.

ಇಷ್ಟಾದರೂ ಮಾಡಬಹುದಲ್ಲವೇ?
* ಮನೆಯಿಂದ ಹೊರಡುವಾಗ ಛತ್ರಿ ಮತ್ತು ರೈನ್ ಕೋಟ್ ಜತೆಯಲ್ಲಿರಲಿ(ಆಫೀಸನವರು ನಿಮಗೆ ಛತ್ರಿ ಕೋಡಲ್ಲ)
* ಮಳೆ ಬರುತ್ತಿರುವಾಗ ಯಾವ ಕಾರಣಕ್ಕೂ ಸಿಗ್ನಲ್ ಜಂಪ್ ಮಾಡಬೇಡಿ(ನಿಮ್ಮದಲ್ಲದೇ ಇತರರ ಪ್ರಾಣವೂ ಹೋದೀತು)
* ಸಾಮಾನ್ಯವಾಗಿ ನೀರು ನುಗ್ಗುವ ರಸ್ತೆಯನ್ನು ಬದಲಿಸಿ(ಮಳೆ ಇಲ್ಲದೆಯೂ ಮನೆಗೆ ಹೋಗದೇ ಕೂರಬೇಕಾದೀತು)
* ಮಳೆ ನಿಂತ ತಕ್ಷಣ ಒಮ್ಮೆಲೆ ವಾಹನ ಚಲಾಯಿಸಬೇಡಿ(ಎಲ್ಲರೂ ಹೀಗೆ ಮಾಡೋದ್ರಿಂದ ಗುದ್ದಿಕೋಳ್ಳೊ ಛಾನ್ಸ್ ಜಾಸ್ತಿ)
* ಬೆಳಿಗ್ಗೆ ಬರುತ್ತಾ ರಸ್ತೆ ಸೂಕ್ಷ್ಮವಾಗಿ ಗಮನಿಸಿದ್ದರೆ ಒಳಿತು(ಹಗಲು ಕಂಡ ಮ್ಯಾನ್ ಹೋಲ್‌ಗೆ ರಾತ್ರಿ ಬೀಳಬೇಕಾದೀತು)
* ಸಂಜೆ ಮಕ್ಕಳನ್ನು ವಾಕಿಂಗ್ ಕರೆದುಕೊಂಡು ಹೋದ್ರೆ ಜಾಗರೂಕರಾಗಿರಿ

ಅಷ್ಟಕ್ಕೂ ಮಳೆಗೆ ಮೂಲ ಕಾರಣವೇನು?
ಇಷ್ಟಕ್ಕೂ ಮಳೆ ಹೀಗೆ ಜೋರಾಗಿ ಬೀಳಲು ಕಾರಣವೇನು ಎಂಬುದಕ್ಕೆ ಉತ್ತರ ಮಾತ್ರ ಸ್ಪಷ್ಟ. ಆಂಧ್ರ ಮತ್ತು ಒರಿಸ್ಸಾ ಸಮುದ್ರ ತೀರಕ್ಕೆ ಅಕ್ಟೋಬರ್ 12ಕ್ಕೆ ಅಪ್ಪಳಿಸಲಿರುವ 'ಹುಡ್‌ಹುಡ್' ಚಂಡಮಾರುತದ ಸೈಡ್ ಎಫೆಕ್ಟೆ ಬೆಂಗಳೂರಿನ ಪ್ರತಿದಿನದ ಮಳೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಕಡೆಯಿಂದ ಸುಮಾರು 155 ಕಿಮೀ ವೇಗದಲ್ಲಿ ಆಗಮಿಸುತ್ತಿರುವ ಚಂಡಮಾರುತವೇ ಮಳೆಯ ಮೂಲ ಬೀಜ.[ಬೆಂಗಳೂರಲ್ಲಿ ಬಂದಿತು ಭಾರೀ ಮಳೆ, ತಂದಿತು ಸಮಸ್ಯೆಗಳ ಹೊಳೆ]
ಹವಾಮಾನ ಇಲಾಖೆ ಈ ಬಗ್ಗೆ ಸೂಕ್ತ ಎಚ್ಚರಿಕೆ ನೀಡಿದ್ದು ಸಮುದ್ರ ತೀರದವರಿಗೆ ಜಾಗೃತರಾಗಿರುವಂತೆ ತಿಳಿಸಿದೆ. ಬೆಂಗಳೂರಿನಲ್ಲೂ ಈ ವೀಕೆಂಡ್ ಅಂದರೆ ಭಾನುವಾರ ಸಖತ್ ಮಳೆಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.












Click it and Unblock the Notifications