22 ವರ್ಷದ ಯುವಕನಿಂದ ನೂರಾರು ಕೋಟಿ ರೂಪಾಯಿ ಅಕ್ರಮ, ಬೆಚ್ಚಿಬಿದ್ದ ಬೆಂಗಳೂರು! Cybercrime
ಬೆಂಗಳೂರು: ರಾಜಧಾನಿ ಬೆಳೆದಂತೆಲ್ಲಾ ಅಪರಾಧಗಳ ಸಂಖ್ಯೆ ಕೂಡ ಏರಿಕೆ ಕಾಣುತ್ತಿದ್ದು, ವಂಚನೆ ಜಾಲಗಳು ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಸೈಬರ್ ಕ್ರೈಂ ಹೆಡೆಮುರಿ ಕಟ್ಟಲು ಖಾಕಿ ಪಡೆ ಎಲ್ಲಾ ರೀತಿ ಪ್ರಯತ್ನ ಮಾಡುತ್ತಿದ್ದು, ಅಗತ್ಯ ಕ್ರಮಗಳನ್ನು ಕೈಗೊಂಡು ಜಾಗೃತಿಯನ್ನು ಕೂಡ ಮೂಡಿಸುತ್ತಿದ್ದಾರೆ ಪೊಲೀಸರು. ಇಷ್ಟೆಲ್ಲಾ ಮಾಡಿದರೂ ಸೈಬರ್ ಕ್ರೈಂಗೆ ಬ್ರೇಕ್ ಬೀಳುತ್ತಿಲ್ಲ, ಇಷ್ಟೆಲ್ಲಾ ಸಮಸ್ಯೆಗಳ ನಡುವೆ 22 ವರ್ಷದ ಯುವಕನೊಬ್ಬ ಮಾಡಿರುವ ನೂರಾರು ಕೋಟಿ ರೂಪಾಯಿ ವಂಚನೆ ಕಂಡು ಬೆಂಗಳೂರು ಬೆಚ್ಚಿಬಿದ್ದಿದೆ.
ಸೈಬರ್ ಅಪರಾಧ ಕಾರ್ಯಾಚರಣೆ ವೇಳೆ, ಬೆಂಗಳೂರಲ್ಲಿ ಕಾಲೇಜು ಬಿಟ್ಟ 22 ವರ್ಷದ ಯುವಕನೊಬ್ಬ ಬರೋಬ್ಬರಿ ನೂರಾರು ಕೋಟಿ ರೂಪಾಯಿ ವಂಚನೆ ನಡೆಸಿರುವುದು ಬಯಲಾಗಿದೆ. ಬಿಕಾಂ ಅರ್ಧಕ್ಕೇ ಬಿಟ್ಟಿದ್ದ ಆರೋಪಿ ತನ್ನ ತಾಯಿ ಜೊತೆಗೆ ಸೇರಿಕೊಂಡು ಈ ರೀತಿಯ ಕೃತ್ಯ ಎಸಗಿದ್ದಾನೆ. ನೂರಾರು ಕೋಟಿ ರೂಪಾಯಿ ಹಣವನ್ನು ಬ್ಯಾಂಕ್ ಖಾತೆಗಳ ಮೂಲಕ ಅಕ್ರಮವಾಗಿ ವರ್ಗಾವಣೆ ಮಾಡಿರುವ ಆರೋಪ ಇದಾಗಿದೆ. ಆನ್‌ಲೈನ್ ವಂಚನೆಗಳ ಮೂಲಕ ಕದ್ದ ಹಣ ವರ್ಗಾವಣೆ ಮಾಡಲು ಬಳಸುತ್ತಿದ್ದ ಸಾವಿರಾರು ಬ್ಯಾಂಕ್ ಅಕೌಂಟ್‌ಗಳನ್ನು ಬೆಂಗಳೂರಿನಲ್ಲಿ ನಿರ್ವಹಣೆ ಮಾಡಲಾಗುತ್ತಿತ್ತು. ಈ ಬ್ಯಾಂಕ್ ಅಕೌಂಟ್ ನಿರ್ವಹಣೆ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಈಗ ಬಂಧಿಸಿದ್ದಾರೆ.

4,200 ಬ್ಯಾಂಕ್ ಅಕೌಂಟ್ ನಿರ್ವಹಣೆ
ಬೆಂಗಳೂರು ಪೊಲೀಸರಿಂದ ಅರೆಸ್ಟ್ ಆಗಿರುವ ಆರೋಪಿಗಳನ್ನು ಮೊಹಮ್ಮದ್ ಉಜೈಫ್ ಮತ್ತು ಅವನ ತಾಯಿ ಸಬಾನಾ ಅಬ್ದುಲ್ ಬಾರಿ ಎಂದು ಗುರುತಿಸಲಾಗಿದೆ. ತನಿಖೆ ನಡೆಸಿದ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಬಿಕಾಂ ಪದವಿ ಅರ್ಧಕ್ಕೆ ಬಿಟ್ಟಿದ್ದ ಆರೋಪಿ ಉಜೈಫ್ ಹಣ ವರ್ಗಾವಣೆ ದಲ್ಲಾಳಿ ಆಗಿ ವಂಚನೆ ಮಾಡುತ್ತಿದ್ದ. ಹಾಗೇ ಮಗನ ಈ ಕೃತ್ಯಕ್ಕೆ ತಾಯಿಯೇ ಸಾಥ್ ಕೊಟ್ಟಿದ್ದು, ಸುಮಾರು 4,200 ಬ್ಯಾಂಕ್ ಅಕೌಂಟ್‌ಗಳನ್ನು ಆರೋಪಿ ನಿರ್ವಹಿಸುತ್ತಿದ್ದ. ಆರೋಪಿ ಜೊತೆಗೆ ಇದ್ದ ಗುಂಪುಗಳು ಸುಮಾರು 9,000 ಇದೇ ರೀತಿಯ ಬ್ಯಾಂಕ್ ಅಕೌಂಟ್‌ಗಳನ್ನು ಬಳಸಿ ಅಕ್ರಮವಾಗಿ ಹಣ ವರ್ಗಾವಣೆ ಮಾಡುತ್ತಿದ್ದರು ಎಂಬ ಆರೋಪ ಮಾಡಲಾಗಿದೆ.
25 ಲಕ್ಷ ರೂಪಾಯಿ ಸಂಪಾದನೆ!
ಸುಮಾರು 24 ಕೋಟಿ ರೂಪಾಯಿ ಹಣವನ್ನು ಪ್ರತಿವರ್ಷ ಅಕ್ರಮವಾಗಿ ವರ್ಗಾವಣೆ ಮಾಡಿ ನಿರ್ವಹಣೆ ಮಾಡುತ್ತಿದ್ದ ಆರೋಪಿ, ಇದಕ್ಕೆ ಪ್ರತಿಯಾಗಿ ವರ್ಷಕ್ಕೆ 25 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದ ಎಂಬುದು ತನಿಖೆಯಲ್ಲಿ ಬಯಲಿಗೆ ಬಂದಿದೆ. ದುಬೈ ಮೂಲದ ಭಾರತೀಯ ವ್ಯಕ್ತಿ ಜೊತೆಯಲ್ಲಿ ಸೇರಿ ಆರೋಪಿ ಉಜೈಫ್ ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿದ್ದ ಎಂದು ಆರೋಪಿಸಲಾಗಿದೆ.
ಈ ವೇಳೆ ಮತ್ತೊಂದು ಸ್ಫೋಟಕ ಸತ್ಯ ಬಯಲಾಗಿದ್ದು, ಆರೋಪಿಗಳು ಬ್ಯಾಂಕ್ ಅಕೌಂಟ್ ಪಡೆಯಲು ನಗರದಲ್ಲಿನ ಅಮಾಯಕರನ್ನೇ ಟಾರ್ಗೆಟ್ ಮಾಡುತ್ತಿದ್ದರಂತೆ. ಸರ್ಕಾರಿ ಆಸ್ಪತ್ರೆ ಹಾಗೂ ಕಾಲೇಜುಗಳ ಬಳಿ ಇವರು ಜನರನ್ನ ಪುಸಲಾಯಿಸಿ, ಬ್ಯಾಂಕ್ ಅಕೌಂಟ್ ತೆರೆಯುತ್ತಿದ್ದರು. ಅಲ್ಲದೇ ವಿದ್ಯಾರ್ಥಿಗಳು ಮತ್ತು ಕೆಲವು ಜನರು ಇವರ ಮೋಸದ ಜಾಲಕ್ಕೆ ಬಿದ್ದು ತಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್ & ಇತರ ದಾಖಲೆ ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದ್ದು, ಬೆಂಗಳೂರು ಪೊಲೀಸರು ಈ ಜಾಲ ಇನ್ನೆಷ್ಟು ಹಬ್ಬಿದೆ? ಎಂಬುದನ್ನು ಹುಡುಕುತ್ತಿದ್ದಾರೆ.












Click it and Unblock the Notifications