ಎಟಿಎಂನಲ್ಲೇ ಬ್ಯಾಂಕ್ ಡಾಟಾ ಹ್ಯಾಕ್ ಮಾಡಿ ಬೆಂಗಳೂರಲ್ಲಿ ಸೈಬರ್ ದೋಖಾ
ಬೆಂಗಳೂರು, ಡಿ. 07: ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರೇ ಎಚ್ಚರ! ಸ್ವಲ್ಪ ಯಾಮಾದರಿದರೂ ನಿಮ್ಮ ಖಾತೆಯಲ್ಲಿರುವ ಹಣ ಸೈಬರ್ ವಂಚಕರ ಪಾಲಾಗಬಹುದು.
ರಾಜಧಾನಿ ಬೆಂಗಳೂರಿನಲ್ಲಿ ಇದೀಗ ಹೊಸ ಸೈಬರ್ ವಂಚನೆ ವರದಿಯಾಗಿದೆ. ಬ್ಯಾಂಕ್ ಅಧಿಕಾರಿಗಳೇ ಈ ವಂಚನೆ ಶೈಲಿ ನೋಡಿ ಬೆಚ್ಚಿ ಬಿದ್ದಿದ್ದಾರೆ. ಈ ಕುರಿತ ಸಮಗ್ರ ವರದಿ ಇಲ್ಲಿದೆ ನೋಡಿ..
ಸಾಮಾನ್ಯವಾಗಿ ಎಟಿಎಂ ಕೇಂದ್ರಗಳಲ್ಲಿ ಸ್ಕಿಮ್ಮಿಂಗ್ ಉಪಕರಣ ಬಳಿಸಿ ಎಟಿಎಂ ಕಾರ್ಡ್ ಬಳಕೆದಾರರ ಡಾಟಾ ಕದಿಯುತ್ತಿದ್ದರು. ಅದರ ಡಾಟಾ ಆಧಾರದ ಮೇಲೆ ನಕಲಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ತಯಾರಿಸಿ ವಂಚನೆ ಮಾಡುತ್ತಿದ್ದರು. ಇದೀಗ ಸೈಬರ್ ವಂಚಕರು ಹೊಸ ರೀತಿಯ ವಂಚನೆ ಹುಟ್ಟು ಹಾಕಿದ್ದಾರೆ. ಈ ವಂಚನೆ ಶೈಲಿ ಇಡೀ ಬ್ಯಾಂಕ್ ಸಿಬ್ಬಂದಿಯನ್ನೇ ಬೆಚ್ಚಿ ಬೀಳಿಸಿದೆ. ಬ್ಯಾಂಕ್‌ಗಳು ನಿರ್ವಹಣೆ ಮಾಡುತ್ತಿರುವ ಎಟಿಎಂ ಕಾರ್ಡ್ ಹೊಂದಿರುವ ಗ್ರಾಹಕರ ಡಾಟಾ ಹ್ಯಾಕ್ ಮಾಡಿ ಹಣವನ್ನು ಲಪಟಾಯಿಸುವ ಹೊಸ ಸೈಬರ್ ವಂಚನೆ ಬೆಂಗಳೂರಿನಲ್ಲಿ ವರದಿಯಾಗಿದೆ.

ಎಟಿಎಂ ಕೇಂದ್ರಗಳಲ್ಲಿ ಸ್ಕಿಮ್ಮಿಂಗ್ ಯಂತ್ರ ಬಳಿಸಿ ಡಾಟಾ ಕದ್ದು ನಕಲಿ ಕಾರ್ಡ್ ತಯಾರಿಸಿ ಮೋಸ ಮಾಡುತ್ತಿದ್ದ ಸೈಬರ್ ವಂಚಕರು ಇದೀಗ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಎಟಿಎಂ ಸೆಂಟರ್‌ಗಳ ಡಾಟಾ ಕದಿಯುವ ತಂತ್ರಜ್ಞಾನ ಬಳಿಸಿ ಎಟಿಎಂ ಕಾರ್ಡ್ ಬಳಕೆದಾರರ ವಿವರಗಳನ್ನು ಹ್ಯಾಕ್ ಮಾಡಿ ವಂಚನೆ ಮಾಡುತ್ತಿರುವ ಹೊಸ ಶೈಲಿಯ ವಂಚನೆ ಹುಟ್ಟು ಹಾಕಿದ್ದಾರೆ. ಬೆಂಗಳೂರಿನ ಗಾಂಧಿನಗರ ಮತ್ತು ಕೆ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಎರಡು ಎಟಿಎಂ ಕೇಂದ್ರಗಳಲ್ಲಿ 13.50 ಲಕ್ಷ ರೂ. ವಂಚನೆ ಮಾಡಲಾಗಿದೆ. ಎಸ್‌ಬಿಐ ಬ್ಯಾಂಕ್ ಮುಖ್ಯ ಅಧಿಕಾರಿ ನೀಡಿರುವ ದೂರಿನ ಮೇರೆಗೆ ಪಶ್ಚಿಮ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ಎಫ್ಐಆರ್ ದಾಖಲಿಸಲಾಗಿದೆ. ಹೊಸ ರೀತಿಯ ಸೈಬರ್ ವಂಚಕರ ಜಾಡು ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ.
ಎರಡು ಎಟಿಎಂ ಕೇಂದ್ರಗಳ ಸಿಸಿಟಿವಿ ದೃಶ್ಯ ಸಂಗ್ರಹಿಸಿ ತನಿಖೆ ನಡೆಸುತ್ತಿದ್ದು, ವಿನೂತನ ಉಪಕರಣ ಬಳಿಸಿ ಎಟಿಎಂ ಕೇಂದ್ರಗಳಲ್ಲಿ ಎಟಿಎಂ ಬಳಕೆದಾರರ ಡಾಟಾ ಹ್ಯಾಕ್ ಮಾಡಿ ಹಣ ಎಗರಿಸಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಹೊಸ ಮಾದರಿಯ ಸೈಬರ್ ವಂಚನೆ ನೋಡಿ ಪೊಲೀಸರೇ ಗಾಬರಿಯಾಗಿದ್ದಾರೆ.

ಹೊಸ ಮಾದರಿ ಸೈಬರ್ ವಂಚಕರು ಬೆಂಗಳೂರಲ್ಲಿ ಬಂಧನ:
ಸೈಬರ್ ವಂಚಕರ ಸ್ವರ್ಗ ಎಂದರೆ ಜಾರ್ಖಂಡ್ ನ ಜಾಮತಾರ ನಿವಾಸಿಗಳು. ಜಾಮ್ ತರ ಸೈಬರ್ ವಂಚಕರ ತಾಣ. ದೇಶದಲ್ಲಿರುವ ಎಲ್ಲಾ ಬ್ಯಾಂಕ್‌ಗಳ ಸಹಾಯವಾಣಿ ನಂಬರ್‌ಗಳಿಗೆ ಹೊಸ ವೆಬ್ ಲಿಂಕ್ ಸೃಷ್ಟಿಸಿ ಆನ್‌ಲೈನ್ ನಲ್ಲಿ ಹಣ ಎಗರಿಸುವ ಮಟ್ಟಿಗೆ ನಿಸ್ಸೀಮರಾಗಿದ್ದಾರೆ. ಇತ್ತೀಚೆಗೆ ಸಾಕಷ್ಟು ಫ್ಲಿಪ್ ಕಾರ್ಟ್, ಅಮೆಜಾನ್ ನಂತಹ ವೆಬ್ ತಾಣಗಳಿಗೆ ಸಂಬಂಧಪಟ್ಟಂತೆ ನಕಲಿ ವೆಬ್ ತಾಣ ಸೃಷ್ಟಿಸಿ ಗ್ರಾಹಕರನ್ನು ಟಾರ್ಗೆಟ್ ಮಾಡಿ ವಂಚನೆ ಮಾಡುತ್ತಿದ್ದರು. ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿಗೆ ವಂಚನೆ ಮಾಡಿದ್ದ ಜಾರ್ಖಂಡ್ ಮೂಲದ ಜಾಮ್‌ತಾರಾ ಸೈಬರ್ ಗ್ಯಾಂಗ್‌ನ್ನು ದೆಹಲಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದರು. ಆನ್‌ಲೈನ್ ನಲ್ಲಿ ಶಾಪಿಂಗ್ ಮಾಡುವ ಗ್ರಾಹಕರನ್ನು ಟಾರ್ಗೆಟ್ ಮಾಡಿ ವಂಚನೆ ಮಾಡುತ್ತಿದ್ದ ಈ ಗ್ಯಾಂಗ್ ಬೆಂಗಳೂರಿನಲ್ಲಿ ನೆಲೆಯೂರಿತ್ತು. ಈ ಗ್ಯಾಂಗ್ ಬಂಧನದ ಬೆನ್ನಲ್ಲೇ ಇದೀಗ ಬೆಂಗಳೂರಿನಲ್ಲಿ ಹೊಸ ರೀತಿಯ ಸೈಬರ್ ವಂಚನೆ ಬೆಳಕಿಗೆ ಬಂದಿದ್ದು, ಜಾಮ್ ತಾರಾ ಸೈಬರ್ ವಂಚಕರ ಕೈಚಳಕವೇ ಇರಬಹುದಾ ಎಂಬ ಅನುಮಾನ ವ್ಯಕ್ತವಾಗಿದೆ.












Click it and Unblock the Notifications