KIAL ನಲ್ಲಿ ಕಸ್ಟಮ್ಸ್ ಅಧಿಕಾರಿಗಳಿಂದ ಚಿನ್ನದ ಕಳ್ಳ ಸಾಗಣೆ ಹೊಸ ಜಾಲ ಪತ್ತೆ
ಬೆಂಗಳೂರು, ಸೆ. 30: ಚಿನ್ನವನ್ನು ಪೇಸ್ಟ್ ರೂಪಕ್ಕೆ ಪರಿವರ್ತಿಸಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಜಾಲವನ್ನು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ದುಬೈನಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಇಂಡಿಗೋ 6E 096 ವಿಮಾನದಲ್ಲಿ ಚಿನ್ನದ ಪೇಸ್ಟ್ ಮಾದರಿಯ ಕವರ್‌ಗಳು ಸಿಕ್ಕಿದ್ದವು. ಅದನ್ನು ಪರಿಶೀಲನೆ ನಡೆಸಿದಾಗ ಸುಮಾರು 61 ಲಕ್ಷ ರೂ. ಮೌಲ್ಯದ ಚಿನ್ನದ ಪೇಸ್ಟ್ ಎಂಬುದು ಗೊತ್ತಾಗಿದೆ. ಕಸ್ಟಮ್ಸ್ ಅಧಿಕಾರಿಗಳು ಚಿನ್ನವನ್ನು ವಶಕ್ಕೆ ಪಡೆಯುತ್ತಿದ್ದಂತೆ ಅದರ ಮಾಲೀಕರು, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದಾರೆ.
ವಿಮಾನದಿಂದ ಎಲ್ಲಾ ಪ್ರಯಾಣಿಕರು ನಿರ್ಗಮಿಸಿದ ಬಳಿಕ ವಿಮಾನ ತಪಾಸಣೆ ಮಾಡಿದ್ದು, ಎಕನಾಮಿಕ್ಸ್ ಕ್ಲಾಸ್‌ನಲ್ಲಿ ಚಿನ್ನದ ಪೊಟ್ಟಣಗಳು ಸಿಕ್ಕಿವೆ. ಪೊಟ್ಟಣ ಬಿಚ್ಚಿ ನೋಡಿದಾಗ 29 ಚಿನ್ನದ ಕಡ್ಡಿ, ಪೇಸ್ಟ್ ರೂಪದ ಚಿನ್ನ ಸಿಕ್ಕಿದೆ. ತೂಕ ಹಾಕಿದಾಗ ಅರ್ಧ ಕೆ.ಜಿ. ಚಿನ್ನದ ಕಡ್ಡಿ, 701 ಚಿನ್ನದ ಪೇಸ್ಟ್ ಪತ್ತೆಯಾಗಿದ್ದು, ಒಟ್ಟು 61 ಲಕ್ಷ ರೂ. ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದಾರೆ. ಆದರೆ ಆರೋಪಿಗಳ ಪತ್ತೆಗಾಗಿ ಪ್ರಯಾಣಿಕರ ಲಿಸ್ಟ್ ಪಡೆದು ಶೋಧ ನಡೆಸುತ್ತಿದ್ದಾರೆ.

ಚಿನ್ನದ ದಂಧೆಗೆ ಕೆಲಸಗಾರರೇ ಡೀಲ್: ಇನ್ನು ದುಬೈನಿಂದ ಚಿನ್ನವನ್ನು ಅಕ್ರಮ ಸಾಗಣೆ ಮಾಡುವ ದಂಧೆ ನಿರಂತರವಾಗಿ ನಡೆಯುತ್ತಲೇ ಇದೆ. ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸುತ್ತಾರೆ ಎಂಬ ಕಾರಣಕ್ಕೆ, ವಿಮಾನಗಳನ್ನು ಶುಚಿ ಮಾಡುವ ಕೆಲಸಗಾರರನ್ನು ಈ ದಂಧೆಗೆ ಬಳಸಿಕೊಳ್ಳಲಾಗುತ್ತದೆ. ಪೋನ್ ಸಂಪರ್ಕ ಇಟ್ಟುಕೊಂಡು, ಫೈಟ್‌ಕ್ಲೀನ್ ಮಾಡುವ ಸೋಗಿನಲ್ಲಿ ಚಿನ್ನವನ್ನು ಹೊರಗೆ ಸಾಗಿಸುತ್ತಾರೆ. ಇದಕ್ಕೆ ಇಂತಿಷ್ಟು ಹಣ ಪಡೆದು ಅಕ್ರಮ ಚಿನ್ನ ಕಳ್ಳ ಸಾಗಣೆ ಜತೆ ಕೈ ಜೋಡಿಸುವ ಪರಿಪಾಠವಿದೆ. ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಏರ್‌ಪೋರ್ಟ್‌ನಲ್ಲಿ ಹೆಚ್ಚು ತಪಾಸಣೆಗೆ ಒಳಪಡಿಸುವುದಿಲ್ಲ. ಹೀಗಾಗಿ ಚಿನ್ನವನ್ನು ಸುಲಭವಾಗಿ ಅಕ್ರಮ ಸಾಗಣೆ ಮಾಡುವುದು ಮೊದಿನಿಂದಲೂ ನಡೆದುಕೊಂಡು ಬರುತ್ತಿದೆ.
ಈರುಳ್ಳಿ ವ್ಯಾಪಾರಿ ನಿಗೂಢವಾಗಿ ಕಣ್ಮರೆ:
ಈರುಳ್ಳಿ ವ್ಯಾಪಾರಿ ಹಾಗೂ ಚಾಲಕ ನಿಗೂಢವಾಗಿ ಕಣ್ಮರೆಯಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈರುಳ್ಳಿ ವ್ಯಾಪಾರಿ ಹಾಗೂ ಆತನ ಚಾಲಕನನ್ನು ಅಪಹರಣ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಶ್ರೀನಿವಾಸ್ ನಾಪತ್ತೆಯಾಗಿರುವ ಉದ್ಯಮಿ. ಬಸವೇಶ್ವರನಗರದಿಂದ ಯಶವಂತಪುರದ ಈರುಳ್ಳಿ ಮಾರುಕಟ್ಟೆಗೆ ಹೋಗುವುದಾಗಿ ಹೇಳಿದ್ದ ಶ್ರೀನಿವಾಸ್ ಪೋನ್ ಸ್ವಿಚ್ ಆಫ್ ಆಗಿದೆ. ಚಾಲಕನ ನಂಬರ್ ಕೂಡ ಸ್ವಿಚ್ ಆಫ್ ಆಗಿದ್ದು, ಶ್ರೀನಿವಾಸ್ ಕುಟುಂಬದವರು ಭಯ ಭೀತರಾಗಿ ಅಪಹರಣ ಹಾಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ಬಸವೇಶ್ವರನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ಶ್ರೀನಿವಾಸ್ ಅವರನ್ನು ಪತ್ತೆ ಮಾಡಿದ್ದು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿಚಾರಣೆಗಾಗಿ ಕರೆದುಕೊಂಡು ಹೋಗಿದ್ದಾರೆ ಎಂದು ಶ್ರೀನಿವಾಸ್ ಹೇಳಿಕೊಂಡಿದ್ದಾಗಿ ತಿಳಿದು ಬಂದಿದೆ. ನಿಜವಾಗಿಯೂ ಶ್ರೀನಿವಾಸ್ ಅವರನ್ನು ಅಪಹರಣ ಮಾಡಿದ್ದಾರೆ. ಇಲ್ಲವೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಿಜವಾಗಿಯೂ ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರಾ ಎಂಬುದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ.
ಸೆಕೇಂಡ್ ಹ್ಯಾಂಡ್ ಆಡಿ ಕಾರ್ ತೋರಿಸಿ ಲಕ್ಷಾಂತರ ರೂ. ವಂಚನೆ:
ಸುಂದರಂ ಮೋಟರ್ಸ್ ಪಾರ್ಕಿಂಗ್‌ನಲ್ಲಿ ಸೆಕೆಂಡ್ ಹ್ಯಾಂಡ್ ಕಾರು ತೋರಿಸಿ ವ್ಯಕ್ತಿಯೊಬ್ಬರಿಗೆ 34 ಲಕ್ಷ ರೂ. ವಂಚನೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಸುಂದರಂ ಮೋಟರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ವಿನಯ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಹಣ ಕಳೆದುಕೊಂಡಿರುವ ಶಶಿಧರ್ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಡಿಮೆ ಬೆಲೆಗೆ ಅಡಿ ಕಾರು ಕೊಡಿಸುವುದಾಗಿ ನಂಬಿಸಿ ವಿನಯ್ ಶಶಿಧರ್‌ಗೆ ನಂಬಿಸಿದ್ದ. ಸುಂದರಂ ಮೋಟರ್ಸ್ ಪಾರ್ಕಿಂಗ್‌ನಲ್ಲಿ ಕಾರು ತೋರಿಸಿದ್ದಾನೆ. ಕಾರು ನೋಡಿ ಫಿದಾ ಆಗಿರುವ ಶಶಿಧರ್ 34 ಲಕ್ಷ ರೂ. ಹಣವನ್ನು ಪಾವತಿ ಮಾಡಿದ್ದಾರೆ. ಕಾರು ಸ್ವಲ್ಪ ರಿಪೇರಿ ಇದ್ದು, ಎರಡು ದಿನದ ಬಳಿಕ ಕೊಡುವುದಾಗಿ ಹೇಳಿದ್ದಾನೆ. ಇದನ್ನು ನಂಬಿ ಸುಂದರಂ ಮೋಟರ್ಸ್ ಖಾತೆಗೆ ಹಣ ಜಮೆ ಮಾಡಿದ್ದ ಶಶಿಧರ್‌ಗೆ ಕಾರು ಕೊಡದೇ ವಿನಯ್ ಮೋಸ ಮಾಡಿದ್ದಾನೆ. ಈ ಕುರಿತು ಕಬ್ಬನ್ ಪಾರ್ಕ್ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.












Click it and Unblock the Notifications