ಬೆಂಗಳೂರು ಬ್ಯಾಂಕ್‌ಗೆ ಆರ್‌ಬಿಐ ನೋಟಿಸ್; ಗ್ರಾಹಕರಲ್ಲಿ ಆತಂಕ
ಬೆಂಗಳೂರು, ಜನವರಿ 12 : ರಿಸರ್ವ ಬ್ಯಾಂಕ್ ನೋಟಿಸ್‌ನಿಂದಾಗಿ ಬೆಂಗಳೂರಿನ ಸಹಕಾರಿ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟವರು ಆತಂಕಗೊಂಡಿದ್ದಾರೆ. ಸುಮಾರು 2400 ಕೋಟಿ ವಹಿವಾಟು ನಡೆಸುವ ಬ್ಯಾಂಕ್ 6 ಶಾಖೆಗಳನ್ನು ಹೊಂದಿದೆ.
ಬೆಂಗಳೂರು ನಗರದ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ (ನಿ)ಗೆ ಆರ್‌ಬಿಐ ನೋಟಿಸ್ ನೀಡಿದೆ. ಬ್ಯಾಂಕ್‌ನಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಯಾವುದೇ ಗ್ರಾಹಕರು ಹಣ ಡ್ರಾ ಮಾಡಬಾರದು ಎಂದು ಹೇಳಿದ್ದು, ಜನರ ಆತಂಕ ಹೆಚ್ಚಿಸಿದೆ.
ಜನವರಿ 10ರಂದು ಆರ್‌ಬಿಐ ನೋಟಿಸ್ ನೀಡಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಬಸವನಗುಡಿ ಸಮೀಪದ ನೆಟ್‌ಕಲ್ಲಪ್ಪ ಸರ್ಕಲ್ ಬಳಿ ಇರುವ ಬ್ಯಾಂಕ್ ಮುಂದೆ ನೂರಾರು ಜನರು ಜಮಾಯಿಸಿದರು. ಠೇವಣಿ ಹಣವನ್ನು ತಕ್ಷಣ ನೀಡುವಂತೆ ಒತ್ತಾಯಿಸಿದರು.

ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟವರಲ್ಲಿ ಹಿರಿಯ ನಾಗರಿಕರು ಅಧಿಕ. 500ಕ್ಕೂ ಅಧಿಕ ಮಂದಿ ಬ್ಯಾಂಕ್ ಮುಂದೆ ಜಮಾಯಿಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಜನರನ್ನು ಸಮಾಧಾನಪಡಿಸಲು ಬ್ಯಾಂಕ್ ಸಿಬ್ಬಂದಿ ಹರಸಾಹಸಪಟ್ಟರು.
ಸುಮಾರು 2400 ಕೋಟಿ ವಹಿವಾಟು ನಡೆಸುವ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ (ನಿ) ಆರು ಶಾಖೆಗಳನ್ನು ಹೊಂದಿದೆ. ವಹಿವಾಟಿನಲ್ಲಿ ಅಕ್ರಮ ಕಂಡುಬಂದ ಹಿನ್ನಲೆಯಲ್ಲಿ ಆರ್‌ಬಿಐ ನೋಟಿಸ್ ನೀಡಿದ್ದು, ಹಣ ತೆಗೆಯದಂತೆ ನಿರ್ಬಂಧ ಹೇರಿದೆ.
ಬ್ಯಾಂಕ್ ಸ್ಪಷ್ಟನೆ : ಬ್ಯಾಂಕ್‌ನಿಂದ ಸಾಲಪಡೆದವರ ಖಾತೆಯಲ್ಲಿ ಆರ್‌ಬಿಐ ಕೆಲವು ಲೋಪ ಗುರುತಿಸಿದೆ. ಈ ಕಾರಣದಿಂದಾಗಿ ಪ್ರತಿ ಖಾತೆಯಿಂದ ಕೇವಲ 35 ಸಾವಿರ ರೂ. ಮಾತ್ರ ಡ್ರಾ ಮಾಡಲು ಸೂಚನೆ ನೀಡಿದೆ. ಠೇವಣಿದಾರರು ಆತಂಕಗೊಳ್ಳುವ ಅಗತ್ಯವಿಲ್ಲ, ಎಲ್ಲರ ಹಣ ಸುರಕ್ಷಿತವಾಗಿದೆ ಎಂದು ಬ್ಯಾಂಕ್ ಸ್ಪಷ್ಟನೆ ನೀಡಿದೆ.












Click it and Unblock the Notifications