Rameshwaram Cafe: ಬೆಂಗಳೂರು ಏರ್‌ಪೋರ್ಟ್ ಪ್ರಯಾಣಿಕರಿಗೆ ಸಿಹಿಸುದ್ದಿ
ಬೆಂಗಳೂರು, ಅಕ್ಟೋಬರ್ 03: ಪ್ರತಿದಿನ ಸಾವಿರಾರು ಜನರು ಭೇಟಿ ನೀಡುವ, ದಿನದ 24 ಗಂಟೆಯೂ ಬ್ಯುಸಿಯಾಗಿರುವ ಪ್ರದೇಶ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅನೇಕ ಫುಡ್‌ಪಾಯಿಂಟ್‌ಗಳಿವೆ. ನಗರದಿಂದ ರಾತ್ರಿ ಲಾಂಗ್ ಡ್ರೈವ್ ಹೋಗಿ ಅಲ್ಲಿ ಕಾಫಿ ಸವಿದು ಬರುವ ಅನೇಕ ಜನರಿದ್ದಾರೆ. ಈಗ ವಿಮಾನ ನಿಲ್ದಾಣ ದೋಸೆಯ ವಿಚಾರದಲ್ಲಿ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದೆ. ಬೆಂಗಳೂರು ನಗರದ ಎರಡು ಪ್ರಮುಖ ಹೋಟೆಲ್‌ಗಳ ಶಾಖೆ ಶೀಘ್ರ ಆರಂಭವಾಗಲಿದೆ.
ಬೆಂಗಳೂರು ನಗರದ ಪ್ರಸಿದ್ಧ ದೋಸೆ ಪಾಯಿಂಟ್‌ಗಳು ಯಾವುದು? ಎಂದರೆ ಎಲ್ಲರೂ ಮಲ್ಲೇಶ್ವರದಲ್ಲಿರುವ ಸೆಂಟ್ರಲ್ ಟಿಫಿನ್ ರೂಮ್ (ಸಿಟಿಆರ್) ಹೆಸರು ಹೇಳುತ್ತಾರೆ. ನಗರದ ಪುರಾತನವಾದ ಹೋಟೆಲ್‌ನ ದೋಸೆ ದೇಶ, ವಿದೇಶದಲ್ಲಿ ಪ್ರಸಿದ್ಧಿ ಪಡೆದಿದೆ. ಮತ್ತೊಂದು ಕಡೆ ರಾಮೇಶ್ವರಂ ಕೆಫೆ ನಗರದಲ್ಲಿ ಈಗ ಪ್ರಖ್ಯಾತವಾಗುತ್ತಿದೆ. ಈ ಎರಡೂ ಹೋಟೆಲ್‌ಗಳಿಗೆ ತನ್ನದೇ ಆದ ಅಭಿಮಾನಿಗಳ ಬಳಗವಿದೆ.

ಈಗ ಸಿಟಿಆರ್ ಮತ್ತು ರಾಮೇಶ್ವರಂ ಕೆಫೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ದೋಸೆ ತಿನ್ನಿಸಲು ಯೋಜನೆ ರೂಪಿಸಿವೆ. ಕೆಲವೇ ದಿನಗಳಲ್ಲಿ ಈ ಎರಡೂ ಹೋಟೆಲ್‌ಗಳ ಶಾಖೆಗಳು ವಿಮಾನ ನಿಲ್ದಾಣದಲ್ಲಿ ಆರಂಭವಾಗಲಿವೆ. ಈ ಕುರಿತು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.
ಶೀಘ್ರವೇ ದೋಸೆ ಪಾಯಿಂಟ್ ಆರಂಭ: ಬೆಂಗಳೂರು ನಗರಕ್ಕೆ ಆಗಮಿಸುವ ಜನರಿಗೆ ಉತ್ತಮ ಗುಣಮಟ್ಟದ ಆಹಾರ ಒದಗಿಸುವುದು ನಮ್ಮ ಗುರಿಯಾಗಿದೆ. ಆದ್ದರಿಂದ ವಿಮಾನ ನಿಲ್ದಾಣದ ಆವರಣದಲ್ಲಿ ಸಿಟಿಆರ್ ಮತ್ತು ರಾಮೇಶ್ವರಂ ಕೆಫೆ ಆರಂಭಕ್ಕೆ ಅನುಮತಿ ನೀಡಲಾಗಿದೆ ಎಂದು ಬಿಐಎಎಲ್ ಅಧಿಕಾರಿಗಳು ಹೇಳಿದ್ದಾರೆ.
ರಾಮೇಶ್ವರಂ ಕೆಫೆ ಟರ್ಮಿನಲ್-1 ಮತ್ತು ಸಿಟಿಆರ್ ಟರ್ಮಿನಲ್-2ನಲ್ಲಿ ಶೀಘ್ರವೇ ಕಾರ್ಯಾರಂಭ ಮಾಡಲಿದೆ. ಈಗಾಗಲೇ ವಿಮಾನ ನಿಲ್ದಾಣದಲ್ಲಿ ಹಟ್ಟಿಕಾಫಿ, ಮಯ್ಯಾಸ್, ಊರು ಕ್ಯಾಂಟೀನ್ ಆಹಾರ ಸೇವೆಯನ್ನು ನೀಡುತ್ತಿವೆ. ಈ ಸಾಲಿಗೆ ಈಗ ಸಿಟಿಆರ್ ಮತ್ತು ರಾಮೇಶ್ವರಂ ಕೆಫೆ ಸೇರಿಕೊಳ್ಳಲಿವೆ.
1920ರಲ್ಲಿ ಆರಂಭವಾದ ಸೆಂಟ್ರಲ್ ಟಿಫಿನ್ ರೂಮ್ (ಸಿಟಿಆರ್) ಅಥವ ಶ್ರೀಸಾಗರ್ ಮಲ್ಲೇಶ್ವರದಲ್ಲಿದೆ. ನಗರದ ಪ್ರಸಿದ್ಧ ದೋಸೆ ಪಾಯಿಂಟ್‌ಗಳಲ್ಲಿ ಇದು ಸಹ ಒಂದು. ವಿವಿಧ ರಾಜಕೀಯ ನಾಯಕರು, ಸಿನಿಮಾ ಕಲಾವಿದರು ದೋಸೆ ಮುರಿಯಲು ಇಲ್ಲಿಗೆ ಆಗಮಿಸುತ್ತಾರೆ. ಬೆಣ್ಣೆ ದೋಸೆ, ಬೆಣ್ಣೆ ಮಸಾಲೆ ಸವಿಯಲು ಜನರು ಸಾಲುಗಟ್ಟಿ ನಿಂತಿರುತ್ತಾರೆ. ದೋಸೆ ಸವಿದು, ಫಿಲ್ಟರ್ ಕಾಫಿ ಕುಡಿದು ತೆರಳುತ್ತಾರೆ.
2021ರಲ್ಲಿ ಆರಂಭವಾದ ರಾಮೇಶ್ವರಂ ಕೆಫೆ ಕೆಲವೇ ವರ್ಷಗಳಲ್ಲಿ ನಗರದಲ್ಲಿ ಜನಪ್ರಿಯವಾದ ಹೋಟೆಲ್. ಇಲ್ಲಿನ ದೋಸೆ, ತುಪ್ಪದ ಬಳಕೆ, ಉತ್ತಮ ಗುಣಮಟ್ಟದ ಕಾಫಿಗೆ ಹಲವಾರು ಜನರು ಮಾರು ಹೋಗಿದ್ದಾರೆ. ನಗರದಕ್ಕೆ ಆಗಮಿಸುವ ಹಲವಾರು ಜನರು ಈ ಎರಡು ಹೋಟೆಲ್‌ಗಳಿಗೆ ತಪ್ಪದೇ ಭೇಟಿ ನೀಡುತ್ತಾರೆ.
ರಾಮೇಶ್ವರಂ ಕೆಫೆ ಮತ್ತು ಸಿಟಿಆರ್ ಈಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆರಂಭವಾಗುತ್ತಿದೆ. ಈ ಶಾಖೆಯಲ್ಲಿ ಯಾವ ಯಾವ ಉಪಹಾರ ಸಿಗಲಿವೆ? ಎಂಬ ಮೆನು ಇನ್ನೂ ಸಹ ಅಂತಿಮವಾಗಿಲ್ಲ. ಬೇರೆ ಬೇರೆ ದೇಶದ, ಭಾರತದ ವಿವಿಧ ನಗರಗಳಿಂದ ಬೆಂಗಳೂರಿಗೆ ಆಗಮಿಸುವ ಪ್ರಯಾಣಿಕರು ಇನ್ನು ಮುಂದೆ ಏರ್‌ಪೋರ್ಟ್‌ನಲ್ಲಿಯೇ ದೋಸೆ ಸವಿದು, ಫಿಲ್ಟರ್ ಕಾಫಿ ಕುಡಿದು ನಗರದತ್ತ ಪ್ರಯಾಣ ಬೆಳೆಸಬಹುದು.
2024ರ ಮಾರ್ಚ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎರಡು ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ್ದರು. ಇದರಿಂದಾಗಿ ಕ್ಯಾಬ್ ಚಾಲಕರಿಗೆ, ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಏರ್‌ಪೋರ್ಟ್‌ನಲ್ಲಿ ಉತ್ತಮ ಗುಣಮಟ್ಟದ ಆಹಾರ ಸಿಗುವಂತಾಗಿದೆ. ಇಂದಿರಾ ಕ್ಯಾಂಟೀನ್‌ನಲ್ಲಿ 5 ರೂ.ಗೆ ಉಪಹಾರ ಮತ್ತು 10 ರೂ.ಗೆ ಊಟ ಸಿಗಲಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ದೆಹಲಿ ಮತ್ತು ಮುಂಬೈ ಬಳಿಕ ದೇಶದ ಬ್ಯುಸಿಯೆಸ್ಟ್ ವಿಮಾನ ನಿಲ್ದಾಣದಲ್ಲಿ 3ನೇಯದಾಗಿದೆ. 100ಕ್ಕೂ ಅಧಿಕ ನಗರಗಳಿಗೆ ಇಲ್ಲಿಂದ ನೇರ ವಿಮಾನ ಸೇವೆ ಇದೆ. ಬಿಐಎಎಲ್ ವಿಮಾನ ನಿಲ್ದಾಣದ ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ.












Click it and Unblock the Notifications