ಕ್ರೈಂ ರೌಂಡಪ್: ಡ್ರಗ್ ತಯಾರಿ ವಿದೇಶಿ ಪ್ರಜೆ ಬಂಧನ, ಯುವತಿ ಕಿಡ್ನಾಪ್ ಕೇಸ್
ಬೆಂಗಳೂರು, ಜ. 11: ಕುಕ್ಕರ್ ನೆರವಿನಿಂದ ಮಾದಕ ವಸ್ತು ತಯಾರಿಸುತ್ತಿದ್ದ ನೈಜೀರಿಯನ್ ಪ್ರಜೆ ಬಂಧನ. ಡ್ರಗ್ ಫ್ಯಾಕ್ಟರಿ ಮೇಲೆ ಸಿಸಿಬಿ ಕಾರ್ಯಾಚರಣೆ. ಆನೇಕಲ್‌ನಲ್ಲಿ ಯುವತಿಯ ಕಿಡ್ನಾಪ್. ಇದು ಬೆಂಗಳೂರು ಅಪರಾಧ ಸುದ್ದಿಗಳ ಚಿತ್ರಣ.
ಸಾಮಾನ್ಯವಾಗಿ ಡ್ರಗ್ ಪೆಡ್ಲರ್‌ಗಳು ವಿದೇಶದಿಂದ ಡ್ರಗ್‌ನ್ನು ತರಿಸಿಕೊಂಡು ಮಾರಾಟ ಮಾಡುತ್ತಾರೆ. ಆದರೆ ನೈಜೀರಿಯಾ ಪ್ರಜೆಯೊಬ್ಬ ರಾಸಾಯನಿಕ ಬಳಿಸಿ ಪ್ರೆಷರ್ ಕುಕ್ಕರ್ ನೆರವಿನಿಂದಲೇ ಕೋಟ್ಯಂತರ ರೂಪಾಯಿ ಡ್ರಗ್ ತಯಾರಿಸುತ್ತಾನೆ. ಈ ಖತರ್‌ನಾಕ್ ಡ್ರಗ್ ಪೆಡ್ಲರ್ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದು, ಒಂದು ಕೋಟಿ ರೂ. ಮೌಲ್ಯದ ಡ್ರಗ್‌ನ್ನು ವಶಪಡಿಸಿಕೊಂಡಿದ್ದಾರೆ.
ಹೆಸರಘಟ್ಟ ಮುಖ್ಯ ರಸ್ತೆ ತರಬನಹಳ್ಳಿಯಲ್ಲಿ ಮನೆ ಬಾಡಿಗೆ ಪಡೆದಿದ್ದ ನೈಜೀರಿಯಾ ಮೂಲದ ಇಬ್ಬರು ಪ್ರಜೆಗಳು ವಾಸವಾಗಿದ್ದರು. ಆದರೆ ಅವರು ಮಾಡ್ತಿದ್ದಿದ್ದು ಭಯಾನಕ ಕೆಲಸ. ಮುಂಬಯಿನಿಂದ ಕೊಕೇನ್ ಮತ್ತು ಇತರೆ ರಾಸಾಯನಿಕ ವಸ್ತುಗಳನ್ನು ತರಿಸಿ ಪ್ರೆಷರ್ ಕುಕ್ಕರ್ ಸಹಾಯದಿಂದ ಎಂಡಿಎಂಎ ಕ್ರಿಸ್ಟಲ್ ತಯಾರಿಸುತ್ತಿದ್ದರು. ಅ ಬಳಿಕ ಈ ಡ್ರಗ್‌ನ್ನು ವಿದೇಶಕ್ಕೆ ರವಾನಿಸುತ್ತಿದ್ದರು.

ಖಚಿತ ಮಾಹಿತಿ ಆಧರಿಸಿ ಸಿಸಿಬಿ ಎಸಿಬಿ ಕೆ.ಸಿ. ಗೌತಮ್ ನೇತೃತ್ವದಲ್ಲಿ ಸಿಸಿಬಿ ಪೊಲೀಸರು ತರಬನಹಳ್ಳಿಯಲ್ಲಿದ್ದ ಡ್ರಗ್ ಪೆಡ್ಲರ್ ಮನೆ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಈತನ ಡ್ರಗ್ ತಯಾರಿಕೆ ಕೌಶಲ್ಯ ನೋಡಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಎಂಡಿಎಂಎ ಕ್ರಿಸ್ಟಲ್ ತಯಾರು ಮಾಡಲು ತರಿಸಿದ್ದ ಒಂದು ಕೋಟಿ ರೂ. ಮೌಲ್ಯದ ಕೊಕೇನ್, ಎಂಡಿಎಂಎ ಕೆಮಿಕಲ್, ರಾಸಾಯನಿಕ ಅಮ್ಲಗಳು, ಪ್ರೆಷರ್ ಕುಕ್ಕರ್, ಎರಡು ಮೊಬೈಲ್, ಡಿಜಿಟಲ್ ತೂಕದ ಯಂತ್ರ ಹಾಗೂ ಹೋಂಡಾ ಡಿಯೋ ಬೈಕ್ ಜಪ್ತಿ ಮಾಡಿದ್ದಾರೆ.
ಅಡುಗೆ ಕುಕ್ಕರ್‌ನಲ್ಲಿ ಕೆಮಿಕಲ್ ಹಾಗೂ ಸಿಮ್ ಹಾಕಿ ಪ್ರಯೋಗ ಮಾಡಿ ಎಂಡಿಎಂಎ ಕ್ರಿಸ್ಟಲ್ ತಯಾರಿಸಿ ಬಹು ಬೇಡಿಕೆ ಇರುವ ವಿದೇಶಗಳಿಗೆ ರವಾನಿಸುತ್ತಿದ್ದರು. ಪ್ರೆಜರ್ ಕುಕ್ಕರ್‌ನಲ್ಲಿ ಕೆಮಿಕಲ್ ಹಾಕಿ ಕುದಿಸಿ ಹಬೆ ಮೂಲಕ ಕ್ರಿಸ್ಟಲ್ ತಯಾರಿಸುತ್ತಿದ್ದರು. ಆ ಬಳಿಕ ಆಸ್ಟ್ರೇಲಿಯಾ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ರವಾನಿಸುತ್ತಿದ್ದರು. ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಿದ್ದು, ಆತನ ವಿರುದ್ಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ ಎಂದು ಸಿಸಿಬಿ ಜಂಡಿ ಪೊಲೀಸ್ ಆಯುಕ್ತ ರಮಣಗುಪ್ತ ತಿಳಿಸಿದ್ದಾರೆ.

22 ವರ್ಷದ ಯುವತಿ ಅಪಹರಣ: ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ 22 ವರ್ಷದ ಯುವತಿಯನ್ನು ಅಪಹರಿಸಿರುವ ಸಂಗತಿ ಬೆಳಕಿಗೆ ಬಂದಿದೆ.
ಜ. 6 ರಂದು ಎಲೆಕ್ಟ್ರಾನಿಕ್ ಸಿಟಿ ನೀಲಾದ್ರಿ ಬಡಾವಣೆಯಲ್ಲಿ ನೆಲೆಸಿದ್ದ ಯುವತಿ ಅಪಹರಣಕ್ಕೆ ಒಳಗಾದವಳು. ಜಿಗಣಿ ಕೈಗಾರಿಕಾ ಪ್ರದೇಶದಲ್ಲಿರುವ ಅಂಕಿತ ಪಟ್ನರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಜಿಗಣಿಯಲ್ಲಿ ಜ. 6 ರಂದು ಯುವಕರು ಅಡ್ಡಗಟ್ಟಿ ಅಪಹರಣ ಮಾಡಿದ್ದಾರೆ. ನೀನು ಅಪಘಾತ ಮಾಡಿದ್ದೀಯ ಎಂದು ಅಡ್ಡಗಟ್ಟಿ ಅಪಹರಣ ಮಾಡಿದ್ದಾರೆ ಎನ್ನಲಾಗಿದೆ.
Recommended Video
ಈ ವೇಳೆ ತಂದೆಗೆ ಕರೆ ಮಾಡಿದ್ದ ಯುವತಿ, ಸ್ಥಳಕ್ಕೆ ಬರುವಂತೆ ಸೂಚಿಸಿದ್ದಳು. ಲೊಕೇಷನ್ ಕಳಿಸುವಂತೆ ಸೂಚಿಸಿದ್ದ ಅವರ ತಂದೆ ಸ್ಥಳಕ್ಕೆ ಹೋಗುವಷ್ಟರಲ್ಲಿ ಆಕೆ ಪೋನ್ ಸ್ವಿಚ್ ಆಫ್ ಆಗಿದೆ. ಹುಲಿಮಂಗಲದ ಟ್ರಿಮ್ಸ್ ಸ್ಕೂಲ್ ಬಳಿ ಯುವತಿಯ ಬೈಕ್ ಪತ್ತೆಯಾಗಿದೆ. ಆ ಬಳಿಕ ಅಪಹರಣ ಕಾರರು ಯುವತಿಯ ತಂದೆಗೆ ಕರೆ ಮಾಡಿ 50 ಲಕ್ಷ ರೂ. ನಿಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಯುವತಿಯ ತಂದೆ ಹೆಬ್ಬಗೋಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರಿಗೆ ಹೇಳಿದರೆ ಮಗಳನ್ನು ಕೊಲ್ಲುವ ಬೆದರಿಕೆ ಹಾಕಿದ್ದು, ಕಳೆದ ಐದು ದಿನಗಳಿಂದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications