CP Yogeshwar: 'ಬಿಜೆಪಿಯಲ್ಲಿ ಪೂರಕವಾದ ವಾತಾವರಣ ಇರಲಿಲ್ಲ' - ಸಿಪಿ ಯೋಗೇಶ್ವರ್
ಬೆಂಗಳೂರು ಅಕ್ಟೋಬರ್ 22: ' ಬಿಜೆಪಿಯಲ್ಲಿ ಪೂರಕವಾದ ವಾತಾವರಣ ಇರಲಿಲ್ಲ ಹೀಗಾಗಿ ನಾನು ಪಕ್ಷ ತೊರೆದೆ' ಎಂದು ಎಂಎಲ್‌ಸಿ ಸಿಪಿ ಯೋಗೇಶ್ವರ್ ಹೇಳಿದ್ದಾರೆ. ಇಂದು ಸಿಪಿ ಯೋಗೇಶ್ವರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಪಿ ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಸಿಪಿ ಯೋಗೇಶ್ವರ್, 'ಬಿಜೆಪಿಯಲ್ಲಿ ಪೂರಕವಾದ ವಾತಾವರಣ ಇರಲಿಲ್ಲ ಹೀಗಾಗಿ ನಾನು ಪಕ್ಷ ತೊರೆದೆ' ಎಂದು ಹೇಳಿದ್ದಾರೆ. 'ನಾನು ಯಾವುದೇ ಒತ್ತಡ ಇಲ್ಲದೆ, ಯಾವುದೇ ಕಂಡಿಷನ್ ಇಲ್ಲದೆ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡಿದ್ದೇನೆ. ನಾನು ತುಂಬಾ ವರ್ಷದಿಂದ ಕಾಂಗ್ರೆಸ್‌ನಲ್ಲೇ ಇದ್ದವನು. ಕಾಂಗ್ರೆಸ್‌ನಿಂದ ಹೋಗಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಬಂದಿದ್ದೇನೆ. ನಾವು ಕಟ್ಟಿದ ಮನೆಯಲ್ಲಿ ಒಮ್ಮೊಮ್ಮೆ ವಾಸ ಮಾಡಲು ಆಗಲ್ಲ. ಆದರೆ ಬಿಜೆಪಿಯಲ್ಲಿ ಪೂರಕ ವಾತಾವರಣ ಉರಲಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ನಾನು ಸೇರಿದೆ' ಎಂದರು.

'ಇದಕ್ಕಾಗಿ ನಾನು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತನಾಡಿದೆ. ಅವರು ಯಾವುದೇ ಕಂಡಿಷನ್ ಇಲ್ಲದೆ, ಒತ್ತಾಯ ಇಲ್ಲದೆ, ಕಾಂಗ್ರೆಸ್ ಪಕ್ಷಕ್ಕೆ ನನ್ನನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ' ಎಂದರು. 'ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡಬೇಕು. ಕಾಂಗ್ರೆಸ್ ಸರ್ಕಾರ ಹತ್ತು ಹಲವು ಯೋಜನೆಗಳು ನನ್ನನ್ನು ಪ್ರೇರೇಪಿಸಿವೆ.
ಜಿಲ್ಲೆಯಲ್ಲಿ ನಾನು ಅಭಿವೃದ್ಧಿ ಕೆಲಸ ಮಾಡಬೇಕು. ಕಾಂಗ್ರೆಸ್ ಜೊತೆಗೆ ಕೆಲಸ ಮಾಡಬೇಕು ಅಂತ ನಾನು ಕಾಂಗ್ರೆಸ್‌ಗೆ ಬಂದೆ. ಕಾಂಗ್ರೆಸ್ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಲ್ಲಿ ನಾನು ಒಬ್ಬ ಆಗಬೇಕು' ಎಂದು ಸಿಪಿ ಯೋಗೇಶ್ವರ್ ಹೇಳಿದರು.
'ಕಾಂಗ್ರೆಸ್ ಅಭಿವೃದ್ಧಿ ಕೆಲಸ ನೋಡಿ ನಾನು ಪಾಲುದಾರನಾಗಬೇಕು ಎಂದು ಎನಿಸುತು. ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಹೋಗೋಣ. ಡಿಕೆ ಶಿವಕುಮಾರ್ ಅಭಿವೃದ್ಧಿ ಕಾರ್ಯಗಳಲ್ಲಿ ಶ್ರಮಿಸಿದ್ದಾರೆ. ನಾನು ಕೂಡ ಆ ಅಭಿವೃದ್ಧಿ ಕೆಲಸದಲ್ಲಿ ಪಾಲುದಾರನಾಗಬೇಕು' ಎಂದರು.
ಚನ್ನಪ್ಪಟ್ಟಣ ಚುನಾವಣೆ
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣಾ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ, ರಾಮನಗರ ಜಿಲ್ಲೆಯ ಚನ್ನಪಟ್ಟಣ ಮತ್ತು ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರಗಳಿಗೆ ನವೆಂಬರ್ 13ರಂದು ಮತದಾನ ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ.
ಹೆಚ್.ಡಿ. ಕುಮಾರಸ್ವಾಮಿ ರಾಜೀನಾಮೆಯಿಂದ ಚನ್ನಪಟ್ಟಣ, ಬಸವರಾಜ್ ಬೊಮ್ಮಾಯಿ ರಾಜೀನಾಮೆಯಿಂದ ಶಿಗ್ಗಾಂವಿ ಮತ್ತು ಈ ತುಕಾರಾಂ ರಾಜೀನಾಮೆಯಿಂದ ಸಂಡೂರು ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಈ ಮೂವರು ಸಂಸದರಾಗಿ ಆಯ್ಕೆಯಾದ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯುತ್ತಿದೆ.
2018ರಲ್ಲಿ ರಾಮನಗರವನ್ನು ಪುತ್ರ ನಿಖಿಲ್‌ಗೆ ಬಿಟ್ಟು ಚನ್ನಪ್ಪಣದಿಂದ ಕಣಕ್ಕಿಳಿದ ಕುಮಾರಸ್ವಾಮಿ ಅವರು, ಸಿಪಿ ಯೋಗೇಶ್ವರ್ ವಿರುದ್ಧ ಗೆದ್ದು ಜೆಡಿಎಸ್‌ಗೆ ಶಕ್ತಿ ತುಂಬಿದರು. ಬಳಿಕ 2023ರ ಚುನಾವಣೆಯಲ್ಲೂ ಸಿಪಿ ಯೋಗೇಶ್ವರ್ ಅವರನ್ನು ಅತ್ಯಂತ ಕಡಿಮೆ ಮತಗಳ ಅಂತರದಿಂದ ಸೋಲಿಸಿದರು. ಬದಲಾದ ರಾಜಕೀಯ ಸಮೀಕರಣದಿಂದಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿತು. ಬಳಿಕ ಅವರು ಮಂಡ್ಯದಿಂದ ಸ್ಪರ್ಧಿಸಿ ಗೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಇನ್ನೂ ಸಿಪಿ ಯೋಗೇಶ್ವರ್ ಕಳೆದ ಇಪ್ಪತ್ತೈದು ವರ್ಷಗಳಿಂದ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿಗಿರುವ ಏಕೈಕ ಆಸರೆ ಅಂದರೆ ಸಿಪಿ ಯೋಗೇಶ್ವರ್ ಆಗಿದ್ದರು. ಆದರೀಗ ಬಿಜೆಪಿಯಲ್ಲಿ ಪೂರಕ ವಾತಾವರಣ ಇಲ್ಲ ಎಂದು ಆರೋಪಿಸಿ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಇದರಿಂದಾಗಿ ಸಿಪಿ ಯೋಗೇಶ್ವರ್ ಚನ್ನಪಟ್ಟಣದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.












Click it and Unblock the Notifications