ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಕೊನೆಗೂ ಅಲರ್ಟ್ ಆದ ಬಿಬಿಎಂಪಿ, ಹೊಸ ಸೇವೆ ಪರಿಚಯ
ಬೆಂಗಳೂರಿನಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣದ ನಂತರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಅಲರ್ಟ್ ಆಗಿದ್ದು. ಇದೀಗ ಬೆಂಗಳೂರಿನಲ್ಲಿ ಪ್ರಾಣಿಗಳ ರಕ್ಷಣೆಗೆ ಇರುವ ಸಹಾಯವಾಣಿಯ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಮುಂದಾಗಿದೆ. ಬೆಂಗಳೂರಿನಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣವು ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ. ಇದೀಗ ಈ ವಿಷಯದ ಬಗ್ಗೆ ಸಾವರ್ಜನಿಕರಲ್ಲಿ ಜಾಗೃತಿ ಮೂಡಿಸುವುದಕ್ಕೆ ಮುಂದಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮುದಾಯದ ಪ್ರಾಣಿಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸಾರ್ವಜನಿಕರೊಂದಿಗೆ ಸಮನ್ವಯ ಸುಧಾರಿಸುವ ನಿಟ್ಟಿನಲ್ಲಿ, ಬಿಬಿಎಂಪಿಯ ಪಶುಪಾಲನಾ ವಿಭಾಗದಿಂದ 1533 ಸಹಾಯವಾಣಿ ಮೂಲಕ ಕಾಲಮಿತಿಯ ಒಳಗಾಗಿ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ಪಶುಸಂಗೋಪನಾ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಅವರು ಹೇಳಿದ್ದಾರೆ.

ಇದೀಗ ಬೆಂಗಳೂರಿನಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ವಾಟ್ಸಾಪ್ ಗುಂಪುಗಳು, ಫೇಸ್‌ಬುಕ್ ಗುಂಪುಗಳು, ವೈಯಕ್ತಿಕ ಸಹಾಯಕ ನಿರ್ದೇಶಕರ ಮೊಬೈಲ್‌ಗೆ ಕರೆ ಮಾಡಿ, ಇಮೇಲ್‌ಗಳು ಸೇರಿದಂತೆ ಮಾರ್ಗಗಳ ಮೂಲಕ ಸಂಪರ್ಕಿಸಲಾಗುತ್ತದೆ. ಈ ರೀತಿಯ ಗೊಂದಲಗಳಿಂದ ಸಮಸ್ಯೆ ಆಗುತ್ತಿದೆ. ಅಲ್ಲದೇ ಈ ರೀತಿಯ ಆಫ್‌ಲೈನ್ ವಿಧಾನಗಳಿಂದ ಪ್ರಕರಣಗಳನ್ನು ನಿರ್ವಹಿಸುವುದು ಇಲಾಖೆಗೆ ದಾಖಲಾತಿಯಲ್ಲಿ ಸಮಸ್ಯೆಯನ್ನು ಉಂಟುಮಾಡುತ್ತದೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಹಾಯವಾಣಿ ಸಹಕಾರಿಯಾಗಲಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಹೇಳಿದೆ.
ಸಹಾಯವಾಣಿಯ ಮೂಲಕ ಬೆಂಗಳೂರಲ್ಲಿ ನಾಯಿಗಳ ಜನನ ನಿಯಂತ್ರಣ, ಆಂಟಿ-ರೇಬಿಸ್ ವ್ಯಾಕ್ಸಿನೇಷನ್ ರಿಕ್ವೆಸ್ಟ್ , ನಾಯಿ ಕಡಿತ ನಿರ್ವಹಣೆ ಸೇರಿದಂತೆ ಸಾಮಾನ್ಯ ದೂರುಗಳ ಹೊರತುಪಡಿಸಿ. ನಾವು ಈಗ ಪ್ರಾಣಿಗಳಿಗೆ ಆಹಾರ ನೀಡುವವರಿಗೆ ಕಿರುಕುಳ, ಪ್ರಾಣಿಗಳ ಮೇಲೆ ದೌರ್ಜನ್ಯ, ಪ್ರಾಣಿಗಳ ಸಂತಾನೋತ್ಪತ್ತಿಯನ್ನು ನಿಯಂತ್ರಿಸುವುದು ಹಾಗೂ ಇದಕ್ಕೆ ಪರವಾನಗಿ ನೀಡುವಲ್ಲಿ ಸಹಾಯ ಮಾಡುವುದಕ್ಕೂ ಯೋಜನೆ ರೂಪಿಸುತ್ತಿರುವುದಾಗಿ ಬಿಬಿಎಂಪಿ ಹೇಳಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು 1533ಕ್ಕೆ ಕರೆ ಮಾಡುವ ಮೂಲಕ ಅಥವಾ ಸಹಾಯ ಅಪ್ಲಿಕೇಶನ್‌ನಲ್ಲಿ ರಿಕ್ವೆಸ್ಟ್‌ಗಳನ್ನು ಸಲ್ಲಿಸುವ ಮೂಲಕ ಅಥವಾ ಬೆಂಗಳೂರು ಒನ್ ಸಿಟಿ ಒನ್ ಮೊಬೈಲ್ ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡುವ ಮೂಲಕ ಬಿಬಿಎಂಪಿಯನ್ನು ಸಂಪರ್ಕಿಸಬಹುದಾಗಿದೆ. ಈ ರೀತಿ ಸಾರ್ವಜನಿಕರು ಮನವಿ ಮಾಡಿದ ಮೇಲೆ ಪ್ರತಿ ವಾರ್ಡ್‌ನಲ್ಲಿಯೂ ಪಶುವೈದ್ಯಕೀಯ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಲಿದ್ದಾರೆ.
ದೂರುಗಳ ಪರಿಹಾರಕ್ಕೆ ಬಿಬಿಎಂಪಿ ನಿಗದಿ ಮಾಡಿರುವ ಟೈಮಿಂಗ್ಸ್
* ಪ್ರಾಣಿಗಳ ಜನನ ನಿಯಂತ್ರಣ ಮತ್ತು ಆ ವಾರ್ಡ್‌ನಲ್ಲಿ ಆಂಟಿ ರೇಬೀಸ್ ವ್ಯಾಕ್ಸಿನೇಷನ್ ವಿನಂತಿಗೆ 5 ದಿನಗಳಲ್ಲಿ ಪರಿಹಾರ.
* ನಾಯಿ ಕಡಿತ / ಜಾನುವಾರು ದಾಳಿ (ಬೀದಾಡಿ ಮಾತ್ರ) 2 ದಿನಗಳು.
* ಯಾರಾದರೂ ಪ್ರಾಣಿಗಳಿಗೆ ಆಹಾರ ಕೊಡುವುದಕ್ಕೆ ಕಿರುಕುಳ ನೀಡಿದರೆ 2 ರಿಂದ 3 ದಿನಗಳು.
* ಬ್ರೀಡರ್,ಪೆಟ್ ಶಾಪ್ ಅಥವಾ ಮಾಂಸದ ಅಂಗಡಿ ಪರವಾನಗಿ 7 ದಿನಗಳಲ್ಲಿ ಸಿಗಲಿದೆ.
* ಪ್ರಾಣಿ ಹಿಂಸೆ ಪ್ರಕರಣಗಳು (ಸಾಕು ಹಾಗೂ ಬೀದಿ ಪ್ರಾಣಿಗಳು) 2 ದಿನಗಳು.
* ಪ್ರಾಣಿಗಳ ರಕ್ಷಣೆಯನ್ನು 1 ರಿಂದ 2 ದಿನಗಳಲ್ಲಿ ಮಾಡುವುದಾಗಿ ಬಿಬಿಎಂಪಿ ಹೇಳಿದೆ. ಅಲ್ಲದೆ ಹೆಚ್ಚಿನ ಮಾಹಿತಿಗಾಗಿ ಬಿಬಿಎಂಪಿ ಸಹಾಯವಾಣಿ ಸಂಖ್ಯೆ 1533ಕ್ಕೆ ಕರೆ ಮಾಡಬಹುದಾಗಿದೆ ಎಂದು ಹೇಳಲಾಗಿದೆ.












Click it and Unblock the Notifications