7,500 ನಮ್ಮ ಮೆಟ್ರೋ ಕಾರ್ಮಿಕರಿಗೆ ಕೋವಿಡ್ ಲಸಿಕೆ
ಬೆಂಗಳೂರು, ಮೇ 28; ಕರ್ನಾಟಕ ಸರ್ಕಾರ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಯೋಜನೆಯಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ಲಸಿಕೆ ನೀಡುವ ಕಾರ್ಯವನ್ನು ಆರಂಭಿಸಿದೆ. ಬಿಎಂಆರ್‌ಸಿಎಲ್ ಉದ್ಯೋಗಿಗಳನ್ನು ಸಹ ಇದಕ್ಕೆ ಸೇರಿಸಿಕೊಳ್ಳಲಾಗುತ್ತದೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಗುರುವಾರ ನ್ಯಾಷನಲ್ ಕಾಲೇಜು ನಮ್ಮ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿ, ಕೋವಿಡ್ ಲಸಿಕೆ ನೀಡುತ್ತಿರುವುದನ್ನು ಪರಿಶೀಲಿಸಿದರು. "ನಗರದ 4 ಮೆಟ್ರೋ ನಿಲ್ದಾಣದಲ್ಲಿ ಎರಡು ದಿನಗಳ ಕಾಲ 7,500 ಕಾರ್ಮಿಕರಿಗೆ ಲಸಿಕೆ ನೀಡಲಾಗುತ್ತದೆ" ಎಂದು ಹೇಳಿದರು.
ನ್ಯಾಷನಲ್ ಕಾಲೇಜು, ಎಂ. ಜಿ. ರಸ್ತೆ, ಬೈಯಪ್ಪನಹಳ್ಳಿ ಮತ್ತು ವಿಜಯನಗರ ಮೆಟ್ರೋ ನಿಲ್ದಾಣಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಒಂದು ನಿಲ್ದಾಣಲ್ಲಿ 6 ಲಸಿಕಾ ಬೂತ್ ತೆರೆಯಲಾಗಿದ್ದು, ಪ್ರತಿದಿನ 900 ಜನರಿಗೆ ಲಸಿಕೆ ಕೊಡಬಹುದು.

ಗುರುವಾರ ಒಂದೇ ದಿನ 3,500 ಕಾರ್ಮಿಕರಿಗೆ ಲಸಿಕೆಯನ್ನು ನೀಡಲಾಗಿದೆ. ಬಿಎಂಆರ್‌ಸಿಎಲ್ ಸಿಬ್ಬಂದಿಗಳಿಗೆ ಸಹ ಮೆಟ್ರೋ ನಿಲ್ದಾಣದಲ್ಲಿ ಲಸಿಕೆ ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.
"ಹಲವಾರು ಕಾರ್ಪೊರೇಟ್ ಕಂಪನಿಗಳು ತಮ್ಮ ಸಿಬ್ಬಂದಿಗೆ ಕಂಪನಿ ಮೂಲಕವೇ ಲಸಿಕೆ ನೀಡಲು ಆಸಕ್ತಿ ತೋರಿಸಿವೆ. ಇಂತಹ ಪ್ರಯತ್ನವನ್ನು ನಾವು ಶ್ಲಾಘಿಸುತ್ತೇವೆ" ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ. ಎಸ್. ಯಶವಂತ್ ಮಾತನಾಡಿದ್ದು, "ನಾವು ಸಿಬ್ಬಂದಿಗಳಿಗೆ ಲಸಿಕೆ ನೀಡಲು ಯೋಜನೆ ರೂಪಿಸುತ್ತಿದ್ದೇವೆ. ಕೆಲವು ಸಿಬ್ಬಂದಿಗಳು ಈಗಾಗಲೇ ಲಸಿಕೆ ಪಡೆದಿದ್ದಾರೆ. ಎಲ್ಲಾ ಸಿಬ್ಬಂದಿಗಳು ಲಸಿಕೆ ಪಡೆಯಲು ಅನುಕೂಲವಾಗುವಂತೆ ಅಭಿಯಾನ ಹಮ್ಮಿಕೊಳ್ಳಲಿದ್ದೇವೆ" ಎಂದರು.











Click it and Unblock the Notifications