ಎಂಜಿನಿಯರಿಂಗ್ ಕಾಲೇಜು, ಲಾ ಫರ್ಮ್‌ಗಳಿಗೆ ವಾರಾಂತ್ಯ ಕರ್ಫ್ಯೂನಿಂದ ವಿನಾಯಿತಿ
ಬೆಂಗಳೂರು, ಜನವರಿ 07: ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಕಾಲೇಜುಗಳು ಕೋವಿಡ್-19 ಶಿಷ್ಟಾಚಾರಗಳ ಮಧ್ಯೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.
ಕೆಲವು ವೃತ್ತಿಪರ ಕಾಲೇಜುಗಳ ಕಾರ್ಯನಿರ್ವಹಣೆಗೆ ಸರ್ಕಾರ ಅನುಮತಿ ನೀಡಿದ್ದು, ಆದರೆ ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡಲಾಗಿದೆ. ಕಾಲೇಜು ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಕೋವಿಡ್-19 ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಉನ್ನತ ಶಿಕ್ಷಣ ಇಲಾಖೆ ಆದೇಶದಲ್ಲಿ ತಿಳಿಸಿದೆ.
ಕೋವಿಡ್-19 ಮತ್ತು ಓಮಿಕ್ರಾನ್ ಹೆಚ್ಚಳ ಹಿನ್ನೆಲೆಯಲ್ಲಿ ಸರ್ಕಾರ ಎರಡು ವಾರಗಳ ಕಾಲ ರಾಜ್ಯದಲ್ಲಿ ಕೋವಿಡ್ ನಿರ್ಬಂಧ ತಂದಿದ್ದು, ಬೆಂಗಳೂರು ನಗರದಲ್ಲಿ 1ರಿಂದ 9ನೇ ತರಗತಿಯವರೆಗೆ ಶಾಲೆಗಳು ಮತ್ತು ಡಿಗ್ರಿ ಕಾಲೇಜುಗಳನ್ನು ಸದ್ಯಕ್ಕೆ ಮುಚ್ಚಲಾಗಿದೆ.

ವೀಕೆಂಡ್ ಕರ್ಫ್ಯೂ: ಅಡ್ವೊಕೇಟ್, ವಕೀಲರು, ಕಾನೂನಿಗೆ ಸಂಬಂಧಪಟ್ಟ ಸಂಸ್ಥೆಗಳು ಶೇಕಡಾ 50ರ ಕಚೇರಿ ಸಿಬ್ಬಂದಿ ಸಾಮರ್ಥ್ಯದಲ್ಲಿ ವಾರಾಂತ್ಯ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಗುರುತು ಪತ್ರ ತೋರಿಸಿ ಅಡ್ವೊಕೇಟ್ ಗಳು, ಲಾಯರ್ ಗಳು ಮತ್ತು ಅವರ ಸಿಬ್ಬಂದಿ ಓಡಾಡಬಹುದು ಎಂದು ಸೂಚಿಸಲಾಗಿದೆ.
ವಾರಾಂತ್ಯ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಜ.8ರ ಶನಿವಾರ ರಾಜ್ಯಾದ್ಯಂತ ಶಾಲೆ, ಕಾಲೇಜುಗಳು ತೆರೆಯುವುದಿಲ್ಲ. ಈಗಾಗಲೇ ಶಾಲೆ, ಕಾಲೇಜುಗಳನ್ನು ಬಂದ್ ಮಾಡಲಾಗಿರುವ ಬೆಂಗಳೂರಿನಲ್ಲಿ ಕೂಡ ವಿನಾಯಿತಿ ಇರುವ 10, 11, 12ನೇ ತರಗತಿ ಮಕ್ಕಳಿಗೂ ಭೌತಿಕ ತರಗತಿಗಳು ನಡೆಯುವುದಿಲ್ಲ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
ಕೋವಿಡ್ ನಿಯಂತ್ರಿಸಲು ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯ ಕರ್ಫ್ಯೂ ಜ.7ರ ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಗ್ಗೆ 5ಗಂಟೆವರೆಗೂ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಅಗತ್ಯ ವಸ್ತುಗಳನ್ನು ಹೊರತು ಉಳಿದೆಲ್ಲಾ ಚಟುವಟಿಕೆಗಳಿಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಅಗತ್ಯವಾಗಿ ಸಾರ್ವಜನಿಕ ಸಂಚಾರಕ್ಕೂ ನಿರ್ಬಂಧಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಶನಿವಾರ ತಮ್ಮ ವ್ಯಾಪ್ತಿಯ ಶಾಲೆ , ಕಾಲೇಜುಗಳನ್ನೂ ತೆರೆಯದಂತೆ ಕ್ರಮ ಕೈಗೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಆರ್.ವಿಶಾಲ್ ಅವರು ಇಲಾಖೆಯ ಎಲ್ಲ ಜಿಲ್ಲಾ ಉಪ ನಿರ್ದೇಶಕರುಗಳು ಹಾಗೂ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
1 ರಿಂದ 9ನೇ ತರಗತಿವರೆಗೆ ಬಂದ್ : ಕಳೆದ ಕೆಲವು ದಿನಗಳಿಂದ ಕರ್ನಾಟಕದಲ್ಲಿ ಕೊರೋನಾ ವೈರಸ್ ಎಗ್ಗಿಲ್ಲದೆ ಜಾಸ್ತಿಯಾಗುತ್ತಿದೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ದುಪ್ಪಟ್ಟು ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ, ಬೆಂಗಳೂರಿನಲ್ಲಿ ಶಾಲೆ ಬಂದ್ ಮಾಡಲು ಆದೇಶಿಸಿದೆ. ಅದರಂತೆ 1 ರಿಂದ 9ನೇ ತರಗತಿವರೆಗೆ ಎಲ್ಲಾ ಮಾದರಿಯ ಶಾಲೆಗಳನ್ನು ಬಂದ್ ಮಾಡಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಕೊರೊನಾ ಹಾಗೂ ಓಮಿಕ್ರಾನ್ ನಿಯಂತ್ರಣಕ್ಕಾಗಿ ಬೆಂಗಳೂರು ನಗರದಲ್ಲಿ 10, 11 ಮತ್ತು 12ನೇ ತರಗತಿ ಹೊತುಪಡಿಸಿ, 1 ರಿಂದ 9ನೇ ತರಗತಿವರೆಗೆ ಎಲ್ಲಾ ಮಾದರಿಯ ಶಾಲೆಗಳನ್ನು ಬಂದ್ ಮಾಡಲಾಗಿದೆ. ಬೆಂಗಳೂರು ಹೊರತುಪಡಿಸಿ ಇತರೆ ಜಿಲ್ಲೆಗಳಲ್ಲಿ ಯಥಾಸ್ಥಿತಿಯಲ್ಲಿ ಶಾಲೆಗಳು ನಡೆಯಲಿವೆ ಎಂದು ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.
ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿನ ಬೆಂಗಳೂರು ಉತ್ತರ, ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ, ಎಲ್ ಕೆಜಿ, ಯುಕೆಜಿ ಹಾಗೂ 1 ರಿಂದ 9ನೇ ತರಗತಿಗಳನ್ನು ದಿನಾಂಕ 06-01-2022 ರಿಂದ ದಿನಾಂಕ 19-01-2022ರವರೆಗೆ ಅಥವಾ ಮುಂದಿನ ಆದೇಶದವೆರೆಗ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸೂಚಿಸಿದೆ.
ಆನ್ ಲೈನ್, ಇತರೆ ಮಾರ್ಗಗಳ ಮೂಲಕ ಕಲಿಕಾ, ಬೋಧನಾ ಚಟುವಟಿಕೆಗಳನ್ನು, ಮುಂದುವರೆಸಲು ಸೂಚಿಸಿದ್ದು, ಕೊರೊನಾ ಮುಂಜಾಗ್ರತೆಯ ಕಟ್ಟು ನಿಟ್ಟಿನ ಕ್ರಮದೊಂದಿಗೆ 10, 11 ಮತ್ತು 12ನೇ ತರಗತಿಗಳನ್ನು ಎಂದಿನಂತೆ ಆಫ್‌ಲೈನ್ ಕ್ಲಾಸ್ ನಡೆಸಲು ಹೇಳಿದೆ.












Click it and Unblock the Notifications