Bannerghatta Biological Park: ಬನ್ನೇರುಘಟ್ಟದಲ್ಲಿ ದೇಶದ ಅತಿದೊಡ್ಡ ಚಿರತೆ ಸಫಾರಿ, ಯಾವಾಗ ಆರಂಭ?
ಬೆಂಗಳೂರು, ಫೆಬ್ರವರಿ 20: ಬಹುನಿರೀಕ್ಷಿತ ಚಿರತೆ ಸಫಾರಿ ಶೀಘ್ರದಲ್ಲೇ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (BBP) ಪ್ರಾರಂಭವಾಗಲಿದೆ. ಇದು ಕರ್ನಾಟಕದ ಮೊದಲ ಮತ್ತು ಭಾರತದಲ್ಲೇ ದೊಡ್ಡದಾದ ಚಿರತೆ ಸಫಾರಿಯಾಗಲಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಿಂಹ ಮತ್ತು ಹುಲಿ ಸಫಾರಿ ಮಾದರಿಯಲ್ಲಿ ಚಿರತೆ ಸಫಾರಿ ಶೀಘ್ರದಲ್ಲೇ ಆರಂಭವಾಗಲಿದೆ.
ಸಿಂಹ ಮತ್ತು ಹುಲಿ ಸಫಾರಿ ಮಾದರಿಯಲ್ಲಿ ಚಿರತೆ ಸಫಾರಿಯನ್ನು ಶೀಘ್ರ ಆರಂಭಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಇತ್ತೀಚಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಚಿರತೆಗಳು ಸಫಾರಿ ಆರಂಭಿಸಲು ನಿಗದಿತ ಸಮಯ ಬೇಕು ಎನ್ನುವುದು ಅಧಿಕಾರಿಗಳ ಮಾತಾಗಿದೆ. ಚಿರತೆ ಸಫಾರಿ ಆರಂಭಿಸಲುವುದು ಅಷ್ಟು ಸುಲಭವಲ್ಲ, ಸೂಕ್ತ ತಯಾರಿ ಬೇಕು ಎನ್ನುವುದು ಬನ್ನೇರುಘಟ್ಟ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಚಿರತೆ ಸಫಾರಿಗಾಗಿ 20 ಹೆಕ್ಟೇರ್ ಪ್ರದೇಶವನ್ನು ಬಳಸಿಕೊಳ್ಳಲಾಗುತ್ತಿದ್ದು, ಈಗಾಗಲೇ ಜಾಗ ಸಮತಟ್ಟು ಹಾಗೂ ಸವಾರಿ ಅನುಕೂಲವಾಗುವಂತೆ ಓಡಾಟಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ಸಫಾರಿ ಜಾಗದಲ್ಲಿ ಚಿರತೆಗಳು ತಪ್ಪಿಸಿಕೊಳ್ಳದಂತೆ ಎತ್ತರದ ಮೆಶ್ ಬೇಲಿಗಳು ಹಾಗೂ ಎತ್ತರದ ಮರಗಳನ್ನು ಸುತ್ತಲೂ ರಚಿಸಲಾಗುತ್ತಿದೆ.
ಚಿರತೆ ಸಫಾರಿ ಈಗಾಗಲೇ ಮಹಾರಾಷ್ಟ್ರದ ನಾಗ್ಪುರ ಮತ್ತು ಬಿಹಾರದ ರಾಜ್‌ಗಿರ್‌ನಲ್ಲಿದ್ದು, ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಅದಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಮಾಡಲು ಪ್ಲಾನ್ ಮಾಡಲಾಗಿದೆ. ಹೀಗಾಗಿ ಸೂಕ್ತ ತಯಾರಿ ಬಳಿಕ ಚಿರತೆ ಸಫಾರಿ ಸಾರ್ವಜನಿಕರಿಗೆ ಮುಕ್ತವಾಗುವ ಸಾಧ್ಯತೆ ಇದೆ.
ಈಗಾಗಲೇ ಸಿದ್ಧತೆಗಳು ನಡೆಯುತ್ತಿದ್ದು, ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಒಂದೂವರೆ ತಿಂಗಳಲ್ಲಿ ಸಫಾರಿಯನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿಸಬಹುದು. ಆದರೆ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಂಹಿತೆ ಜಾರಿಗೆ ಬಂದರೆ ಮೇ ನಂತರವಷ್ಟೇ ಸಫಾರಿ ಆರಂಭಿಸಬೇಕಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಹುಲಿಗಳು ಮತ್ತು ಸಿಂಹಗಳಿಗಿಂತ ಚಿರತೆಗಳು ಭಿನ್ನವಾಗಿರುತ್ತದೆ. ತಮ್ಮ ಚುರುಕು ಬುದ್ಧಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿರುವ ಮಾರ್ಗವನ್ನು ಹುಡುಕಿಕೊಳ್ಳುತ್ತವೆ. ಹೀಗಾಗಿ ಆವರಣವನ್ನು ರಚಿಸುವಾಗ ಎಲ್ಲಾ ದೃಷ್ಟಿಕೋನದಲ್ಲಿ ರಚಿಸಲಾಗಿದೆ. ಈ ಪ್ರದೇಶದಲ್ಲಿ 20 ಚಿರತೆಗಳನ್ನು ಇರಿಸಲು ಸ್ಥಳಾವಕಾಶವಿದೆ. ಆದರೆ ಅವುಗಳು ಒಟ್ಟಗೆ ಇದ್ದು ಒಗ್ಗಿಕೊಳ್ಳುಲು ಸಮಯಬೇಕು. ಸದ್ಯ ಚಿರತೆಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಹೊಂದಿಕೊಳ್ಳಲು ಅವುಗಳಿಗೆ ಸಮಯ ಬೇಕು" ಎಂದು ಬನ್ನೇರುಘಟ್ಟ ಅಧಿಕಾರಿ ತಿಳಿಸಿದ್ದಾರೆ.












Click it and Unblock the Notifications