ಕಾಂಗ್ರೆಸ್ ನಾಯಕರ ಬಂಧನಕ್ಕೆ ಕೊರೊನಾ ಭೀತಿ ಕಾರಣ!
ಬೆಂಗಳೂರು, ಮಾರ್ಚ್ 19 : ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಲು ಬಂದು ಧರಣಿ ಕೂತಿದ್ದ ಕಾಂಗ್ರೆಸ್ ನಾಯಕರನ್ನು ಬುಧವಾರ ಪೊಲೀಸರು ಬಂಧಿಸಿದ್ದರು. ಈ ಬಗ್ಗೆ ಭಾರೀ ಚರ್ಚೆಗಳು ಆರಂಭವಾಗಿತ್ತು.
ಬೆಂಗಳೂರಿನ ಯಲಹಂಕ ಬಳಿಯ ರಮಡ ಹೋಟೆಲ್ ಮುಂದೆ ಕಾಂಗ್ರೆಸ್ ನಾಯಕರನ್ನು ಬಂಧಿಸಿರುವ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆದಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಬರೆದಿರುವ ಪತ್ರವನ್ನು ಸದನದ ಗಮನಕ್ಕೆ ತಂದರು.
ಪೊಲೀಸ್ ಆಯುಕ್ತರು ಬಂಧನದ ಉದ್ದೇಶ ಮತ್ತು ಯಾರು-ಯಾರನ್ನು ಬಂಧಿಸಲಾಗಿತ್ತು ಎಂದು ಸ್ಪೀಕರ್‌ಗೆ ಪತ್ರದ ಮೂಲಕ ವಿವರಿಸಿದ್ದರು. ಭಾಸ್ಕರ್ ರಾವ್ ಬರೆದ ಪತ್ರವನ್ನು ಸದನದ ಗಮನಕ್ಕೆ ಸ್ಪೀಕರ್ ತಂದರು. ಪ್ರಮುಖ ಅಂಶಗಳನ್ನು ವಿವರಿಸಿದರು.

ಕೊರೊನಾ ತುರ್ತು ಪರಿಸ್ಥಿತಿ ಹಿನ್ನಲೆಯಲ್ಲಿ ಗುಂಪು ಗೂಡಿದ್ದ ಕಾಂಗ್ರೆಸ್ ನಾಯಕರನ್ನು ಬಂಧಿಸಲಾಗಿತ್ತು ಎಂದು ಪತ್ರದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ವಿವರಿಸಿದ್ದರು. ರಮಡಾ ಹೋಟೆಲ್ ಮುಂಭಾಗದಲ್ಲಿ ಧರಣಿ ಕೂತಿದ್ದ ನಾಯಕರನ್ನು ಬಂಧಿಸಿ ಅಮೃತಹಳ್ಳಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿತ್ತು.
ರಮಡಾ ಹೋಟೆಲ್‌ನಲ್ಲಿ ಮಧ್ಯಪ್ರದೇಶದ 21 ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿದ್ದಾರೆ. ಈ ಹೋಟೆಲ್‌ಗೆ ಕರ್ನಾಟಕದ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಕಾಂಗ್ರೆಸ್ ಶಾಸಕರನ್ನು ಭೇಟಿಯಾಗಲು ಮಧ್ಯಪ್ರದೇಶದ ಕಾಂಗ್ರೆಸ್ ನಾಯಕರಿಗೂ ಅವಕಾಶ ನೀಡುತ್ತಿಲ್ಲ.
ಬುಧವಾರ ಶಾಸಕರನ್ನು ಭೇಟಿ ಮಾಡಲು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಆಗಮಿಸಿದ್ದರು. ಆದರೆ, ಪೊಲೀಸರು ಶಾಸಕರ ಭೇಟಿಗೆ ಅವಕಾಶ ನೀಡಿರಲಿಲ್ಲ. ಇದನ್ನು ವಿರೋಧಿಸಿ ಸಿಂಗ್ ಸ್ಥಳದಲ್ಲಿ ಧರಣಿ ಕುಳಿತಿದ್ದರು. ಆಗ ಪೊಲೀಸರು ಅವರನ್ನು ಬಂಧಿಸಿದ್ದರು.












Click it and Unblock the Notifications