ನಟ ಚಿರಂಜೀವಿ ಸರ್ಜಾರಿಗೆ ಕೊರೊನಾ ವೈರಸ್ ಇಲ್ಲ: ವೈದ್ಯರ ಸ್ಪಷ್ಟನೆ
ಬೆಂಗಳೂರು, ಜೂನ್.07: ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಸಂದರ್ಭದಲ್ಲಿ ಇಹಲೋಕ ತ್ಯಜಿಸಿದ ಖ್ಯಾತನಟ ಚಿರಂಜೀವಿ ಸರ್ಜಾ ಅವರಿಗೆ ಕೊವಿಡ್-19 ಸೋಂಕು ತಗಲಿಲ್ಲ ಎಂದು ಸಾಗರ್ ಅಪೋಲೋ ಆಸ್ಪತ್ರೆ ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಉಸಿರಾಟ ತೊಂದರೆ ಮತ್ತು ಹೃದಯಾಘಾತದಿಂದ ಮೃತಪಟ್ಟ ಚಿರಂಜೀವಿ ಸರ್ಜಾ ಸಾವಿನ ಬೆನ್ನಲ್ಲೇ ಕೊರೊನಾ ವೈರಸ್ ಸೋಂಕು ತಗಲಿರಬಹುದು ಎಂಬ ಶಂಕೆ ಮೇಲೆ ರಕ್ತ ಹಾಗೂ ಗಂಟಲು ದ್ರವ್ಯದ ಮಾದರಿಯನ್ನು ಸಂಗ್ರಹಿಸಲಾಗಿತ್ತು. ವೈದ್ಯಕೀಯ ತಪಾಸಣೆಯ 3 ಗಂಟೆಗಳ ಬಳಿಕ ಫಲಿತಾಂಶ ನೆಗೆಟಿವ್ ಎಂಬುದು ತಿಳಿದು ಬಂದಿದೆ.
Breaking: ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನ
ಕೇವಲ 39 ವರ್ಷದ ಚಿರಂಜೀವಿ ಸರ್ಜಾ, ಚಿಕ್ಕವಯಸ್ಸಿನಲ್ಲಿಯೆ ಜೀವನ ಮುಗಿಸಿ ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ. ಜಿರಂಜೀವಿ ಸರ್ಜಾ ಅವರ ಅಕಾಲಿಕ ಸಾವು ಕುಟುಂಬದವರಿಗೆ, ಸ್ನೇಹಿತರಿಗೆ, ಅಭಿಮಾನಿಗಳಿಗೆ ದೊಡ್ಡ ಆಘಾತವೊಂಟು ಮಾಡಿದೆ.
ಮಧ್ಯಾಹ್ನ ಚಿರಂಜೀವಿ ಸರ್ಜಾ ಕೊನೆಯುಸಿರು:
ಭಾನುವಾರ ಮದ್ಯಾಹ್ನ 2 ಗಂಟೆ ಸುಮಾರಿಗೆ ನಟ ಚಿರಂಜೀವಿ ಸರ್ಜಾರಿಗೆ ತೀವ್ರ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಜಯನಗರದಲ್ಲಿರುವ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿಯೆ ಚಿರು ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಿನ ಬಸವನಗುಡಿಯಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಯಾಂಡಲ್ ವುಡ್ ನ ಖ್ಯಾತ ನಟ-ನಟಿ, ಹಿರಿಯ ಕಲಾವಿದರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು ಹಾಗೂ ರಾಜಕೀಯ ಗಣ್ಯರು ಸೇರಿದಂತೆ ಆಪ್ತ ಸಂಬಂಧಿಕರೆಲ್ಲ ಅಂತಿಮ ದರ್ಶನವನ್ನು ಪಡೆದುಕೊಳ್ಳುತ್ತಿದ್ದಾರೆ.
ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ. ಚಿರು ಸರ್ಜಾ ಅಂತ್ಯಕ್ರಿಯೆಯನ್ನು ಬೆಂಗಳೂರಿನಲ್ಲಿ ನಡೆಸುವುದೇ ಅಥವಾ ಸರ್ಜಾ ಕುಟುಂಬದ ಮೂಲ ಊರಾದ ತುಮಕೂರು ಜಿಲ್ಲೆ ಮಧುಗಿರಿಯಲ್ಲಿ ನಡೆಯಲಿದೆಯಾ ಎನ್ನುವುದು ಇನ್ನು ಸ್ಪಷ್ಟವಾಗಿಲ್ಲ.