ಬೆಂಗಳೂರು ಹೊರವಲಯದ ವಾರ್ಡ್‌ಗಳಲ್ಲೇ ಕೊರೊನಾ ಹೆಚ್ಚಳ; ಕಾರಣವೇನು?
ಬೆಂಗಳೂರು, ಆಗಸ್ಟ್ 16: ಕೆಲವು ದಿನಗಳಿಂದ ಬೆಂಗಳೂರು ನಗರ ಪ್ರದೇಶದಲ್ಲಿ ದಿನನಿತ್ಯ ಅಂದಾಜು 350 ರಿಂದ 400 ಹೊಸ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಬೆಂಗಳೂರಿನ ಹತ್ತು ವಾರ್ಡ್‌ಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಆ ಪೈಕಿ ಎಂಟು ವಾರ್ಡ್‌ಗಳು ಇತರೆ ರಾಜ್ಯ ಅಥವಾ ಜಿಲ್ಲೆಗಳ ಪರಿಧಿಯಲ್ಲಿವೆ.
"ನಮ್ಮ ವಾರ್ ರೂಂ ತಂಡ ಬೆಂಗಳೂರಿನ ಹೊರವಲಯಗಳಲ್ಲಿನ ಕೊರೊನಾ ಪ್ರಕರಣಗಳ ಕುರಿತು ವಿಶ್ಲೇಷಣೆ ನಡೆಸುತ್ತಿದೆ. ಈ ಪ್ರದೇಶಗಳಲ್ಲಿನ ಹಲವು ಕೊರೊನಾ ಪ್ರಕರಣಗಳಲ್ಲಿ ಪ್ರಯಾಣ ಮಾಡಿದ್ದ ಹಿನ್ನೆಲೆಯಿರುವುದನ್ನು ನಾವು ಗಮನಿಸಿದ್ದೇವೆ. ಇಲ್ಲಿನ ನಿವಾಸಿಗಳಲ್ಲಿ ಅನೇಕರು ಬೇರೆ ಜಿಲ್ಲೆಗಳಿಗೆ ಅಥವಾ ರಾಜ್ಯಗಳಿಗೆ ಆಗಾಗ್ಗೆ ಪ್ರಯಾಣಿಸುತ್ತಿರುವುದು ಕಂಡುಬಂದಿದೆ" ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾಹಿತಿ ನೀಡಿದ್ದಾರೆ.

ಹೊರವಲಯಗಳಲ್ಲಿನ ಅಪಾರ್ಟ್‌ಮೆಂಟ್‌ಗಳಲ್ಲಿಯೂ ದೈನಂದಿನ ಪ್ರಕರಣಗಳ ಸಂಖ್ಯೆ ಹೆಚ್ಚಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. "ಅಪಾರ್ಟ್‌ಮೆಂಟ್‌ಗಳಲ್ಲಿರುವ ಪ್ರದೇಶಗಳೇ ಸುಮಾರು 55% ಕಂಟೈನ್ಮೆಂಟ್ ವಲಯಗಳಾಗಿವೆ ಹಾಗೂ ಈ ಅಪಾರ್ಟ್‌ಮೆಂಟ್‌ಗಳು ಬಹುಪಾಲು ಬೆಂಗಳೂರು ನಗರದ ಹೊರವಲಯದಲ್ಲಿವೆ" ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ರಣದೀಪ್ ಡಿ ಮಾಹಿತಿ ನೀಡಿದ್ದಾರೆ.
ಅಂಥ ಮುಚ್ಚಿದ ಅಥವಾ ಒಂದೆಡೆಯೇ ಹೆಚ್ಚಿನ ವಸತಿ ಇರುವ ಸ್ಥಳಗಳಲ್ಲಿ ಸೋಂಕು ಹರಡುವ ಸಾಧ್ಯತೆ ಬಹಳ ಹೆಚ್ಚಿದೆ. ಮತ್ತೊಂದೆಡೆ, ನಗರದ ಒಳಗೆ ಪ್ರತ್ಯೇಕ ಮನೆಗಳು ಇರುವುದರಿಂದ ಸೋಂಕು ಹರಡುವಿಕೆ ತಡೆಗಟ್ಟಲು ಸಾಧ್ಯವಾಗುತ್ತಿದೆ ಎಂದು ಹೇಳಿದ್ದಾರೆ.
ಅಪಾರ್ಟ್‌ಮೆಂಟ್ ಹೆಚ್ಚಾಗಿರುವ ಕಡೆಗಳಲ್ಲಿ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗುತ್ತಿದ್ದು, ಅಂಥ ಕಡೆಗಳಲ್ಲಿ ಕಂಟೈನ್ಮೆಂಟ್ ಝೋನ್‌ಗಳನ್ನು ಗುರುತಿಸಲಾಗುತ್ತಿದೆ. ಈಚೆಗೆ ಕಂಟೈನ್ಮೆಂಟ್ ವಲಯದಲ್ಲಿರುವ ಅಪಾರ್ಟ್‌ಮೆಂಟ್‌ಗಳಿಗೆ ಬಿಬಿಎಂಪಿ ಹೊಸ ಮಾರ್ಗಸೂಚಿಯನ್ನೂ ಹೊರಡಿಸಿದೆ.
ಪಾಲಿಕೆ ವ್ಯಾಪ್ತಿಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (RWA) ಹಾಗೂ ಅಪಾರ್ಟ್‌ಮೆಂಟ್, ಕಾಂಪ್ಲೆಕ್ಸ್ ಗಳಲ್ಲಿ ನಿರ್ವಹಣಾ ಸಮಿತಿಗಳಿಗೆ ಕೊವಿಡ್-19 ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಸೆಕ್ಷನ್ 4ರ ಅಡಿ ರೋಗ ಹರಡುವಿಕೆ ನಿಯಂತ್ರಿಸಲು ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಅಧಿಕಾರವನ್ನು ಪಾಲಿಕೆಗೆ ವಹಿಸಲಾಗಿದೆ.
ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ವಲಯಗಳ ಸಂಖ್ಯೆ 160ಕ್ಕಿಂತ ಹೆಚ್ಚಾಗಿದೆ. ಶೇ.50ರಷ್ಟು, ಅಂದರೆ 79 ಅಪಾರ್ಟ್ ಮೆಂಟ್ ಹಾಗೂ ಕಾಂಪ್ಲೆಕ್ಸ್ ಗಳು ಅದೇ ಕಂಟೈನ್ಮೆಂಟ್ ವಲಯಗಳಲ್ಲಿರುವುದು ಗೊತ್ತಾಗಿದೆ. ಹೀಗಾಗಿ ಕಟ್ಟುನಿಟ್ಟಿನ ನಿಯಮಗಳನ್ನು ಪಾಲನೆ ಮಾಡುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಅಪಾರ್ಟ್‌ಮೆಂಟ್‌ಗಳಿಗೆ ಮಾರ್ಗಸೂಚಿ: ಅಪಾರ್ಟ್‌ಮೆಂಟ್ ಅಥವಾ ಕಾಂಪ್ಲೆಕ್ಸ್ಗಳಿಗೆ ಭೇಟಿ ನೀಡುವ ಜನರ ಉಷ್ಣಾಂಶ ಪರಿಶೀಲಿಸುವುದು, ಸ್ಯಾನಿಟೈಸರ್ ಬಳಕೆ ಮತ್ತು ಮಾಸ್ಕ್ ಧರಿಸುವಿಕೆ ಕಡ್ಡಾಯ. ಅಪಾರ್ಟ್ಮೆಂಟ್ನ ವ್ಯಾಪಾರಿಗಳ ಹೊರತಾಗಿ ಅಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬ ಗ್ರಾಹಕರು ಮತ್ತು ಸಾರ್ವಜನಿಕರ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.
ಹೊರ ರಾಜ್ಯಗಳಿಂದ ಆಗಮಿಸಿದವರು 72 ಗಂಟೆಗಳೊಳಗೆ ನಡೆಸಿದ ಆರ್ಟಿಪಿಸಿಆರ್ ಕೋವಿಡ್ ನೆಗೆಟಿವ್ ವರದಿ ಹೊಂದಿರಬೇಕು. ಇಲ್ಲದಿದ್ದರೆ ಭೇಟಿ ಸಂದರ್ಭದಲ್ಲೇ ಆರ್ಟಿಪಿಸಿಆರ್ ಪರೀಕ್ಷೆ ನಡೆಸಬೇಕು ಹಾಗೂ ಅದರ ವರದಿ ಬರುವವರೆಗೆ ಕ್ವಾರಂಟೈನ್‌ನಲ್ಲಿರಬೇಕು ಎಂಬ ಎರಡು ಮುಖ್ಯ ನಿಯಮಗಳನ್ನು ಹೇರಲಾಗಿದೆ.
ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು: ಶನಿವಾರ 1632 ಪ್ರಕರಣಗಳನ್ನು ದಾಖಲಿಸಿದ ರಾಜ್ಯದಲ್ಲಿ ಭಾನುವಾರ 1431 ಮಂದಿಗೆ ಸೋಂಕು ತಗುಲಿರುವುದು ಖಾತ್ರಿಯಾಗಿದೆ. ಕೊವಿಡ್-19 ಸೋಂಕಿತ ಪ್ರಕರಣಗಳ ಪ್ರಮಾಣ ಶೇ.0.93ರಷ್ಟಿದ್ದು, ಸಾವಿನ ಸಂಖ್ಯೆಯ ಶೇಕಡಾವಾರು ಪ್ರಮಾಣ 1.46ರಷ್ಟಿದೆ.
ಭಾನುವಾರ ರಾಜ್ಯದಲ್ಲಿ 1431 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1611 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 21 ಮಂದಿ ಕೊರೊನಾವೈರಸ್ ಸೋಂಕಿನಿಂದಲೇ ಮೃತಪಟ್ಟಿದ್ದು, ಈವರೆಗೂ 36979 ಮಂದಿ ಸಾವನ್ನಪ್ಪಿದ್ದಾರೆ.
ಭಾನುವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2929464ಕ್ಕೆ ಏರಿಕೆಯಾಗಿದೆ. ಒಟ್ಟು 2869962 ಸೋಂಕಿತರು ಗುಣಮುಖರಾಗಿದ್ದು. 22497 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications