ಕೆಎಎಸ್ ಅಧಿಕಾರಿ ಆಶಾ ಕೊನೆಗೂ ಮನೆಗೆ ಹೋದ್ರಪ್ಪಾ!

ಬೆಂಗಳೂರು, ಸೆ.20: ಇತ್ತೀಚಿನ ದಿನಗಳಲ್ಲಿ ಅತ್ಯಂತ ವಿವಾದಿತ ಅಧಿಕಾರಿ ಎನಿಸಿಕೊಂಡಿದ್ದ ಆಶಾ 'ಪರ್ವೀನ್' ಅವರನ್ನು ರಾಜ್ಯ ಸರಕಾರ ಸೇವೆಯಿಂದ ವಜಾಗೊಳಿಸಿ, ಮನೆಗೆ ಕಳುಹಿಸಿದೆ.

ಸುಳ್ಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸಿ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಗೆಜೆಟೆಡ್ ಪ್ರೊಬೆಷನರ್ ಹುದ್ದೆಗೆ ಆಯ್ಕೆಯಾಗಿದ್ದರು ಎಂಬ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಸರಕಾರ ಈ ಅನಿವಾರ್ಯ ಕ್ರಮ ಕೈಗೊಂಡಿದೆ. ವಿವಾದ ಸೃಷ್ಟಿಸುವುದನ್ನೇ ಕಾಯಕವಾಗಿಸಿಕೊಂಡಿದ್ದ ಸದರಿ ಆಶಾ ಉರುಫ್ 'ಪರ್ವೀನ್', ಈ ಹಿಂದೆ 2 ಬಾರಿ ಅಮಾನತು ಶಿಕ್ಷೆಗೆ ಗುರಿಯಾಗಿದ್ದರು.

ಮೊದಲೇ ಸುಳ್ಳು ಸುಳೇ ಕೆಲಸಕ್ಕೆ ಸೇರಿದ್ದರೂ ಈ ಪುಣ್ಯಾತಗಿತ್ತಿ ಉದ್ಯೋಗವನ್ನಾದರೂ ನೆಟ್ಟಗೆ ಮಾಡಿದರಾ? ಅಂದರೆ ಅದೂ ಇಲ್ಲ. ಈಕೆಯ ಧಿಮಾಕು ಯಾವ ಪರಿಯಿತ್ತೆಂದರೆ ಸ್ವತಃ ಶಾಸಕರು, ಹಿರಿಯ ಅಧಿಕಾರಿಗಳೇ ಈಕೆಯ ಕಾರ್ಯವೈಖರಿ ಕಂಡು ದಂಗುಬಡಿದಿದ್ದರು. ಈಯಮ್ಮ ಕಾನೂನುಬಾಹಿರವಾಗಿ ಬೀಗ ಒಡೆಸಿ, ತಮ್ಮ ಚೇಂಬರ್ ಗೆ ಪ್ರವೇಶಿಸಿದ್ದ ನಿದರ್ಶನವೂ ಇದೆ.

Controversial tahsildar Asha Parveen dismissed by Karnataka govt - Bangalore,

ಅತಿ ಆಸೆ ಗತಿಕೇಡು: ಆಶಾ, 1998 ನೇ ಸಾಲಿನಲ್ಲಿ ಗ್ರೂಪ್- ಬಿ ವೃಂದದ ತಹಸೀಲ್ದಾರ್ (ಗ್ರೇಡ್-2) ಹುದ್ದೆಗೆ ನೇಮಕಗೊಂಡಿದ್ದರು. ಸಾಮಾನ್ಯ ವರ್ಗದಡಿ ಕೆಪಿಎಸ್‌ಸಿ ಪರೀಕ್ಷೆಯ ಅರ್ಹತೆ ಗಳಿಸಿದ್ದರೂ, ಬಳಿಕ 2 ಬಿ ಮೀಸಲಿನಡಿ ಪ್ರಮಾಣ ಪತ್ರ ಸಲ್ಲಿಸಿಯೂ ಹುದ್ದೆಯನ್ನು ದಕ್ಕಿಸಿಕೊಂಡರು. ಆಶಾ ಪರ್ವೀನ್ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದರ ಬಗ್ಗೆ ಸಿಐಡಿ ತನಿಖೆಯಿಂದ ದೃಢಪಟ್ಟಿತ್ತು. ಹೀಗಾಗಿ ತಕ್ಷಣಕ್ಕೆ ಜಾರಿಗೆ ಬರುವಂತೆ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ.

ಗಮನಾರ್ಹವೆಂದರೆ ಆಶಾ ವಿರುದ್ಧ ನ್ಯಾಯಾಂಗ ಹೋರಾಟ ನಡೆಸಿದ್ದ ಕೆಆರ್ ಖಲೀಲ್ ಅಹಮದ್ ಅವರು 'ಇದು ನ್ಯಾಯಕ್ಕೆ ಸಂದ ಜಯ. ಆದರೆ, ಆಶಾ ಪರ್ವೀನ್ ಅವರಂತೆ ಅಕ್ರಮ ಎಸಗಿದವರು ಇನ್ನೂ ಹಲವಾರು ಮಂದಿ ಇದ್ದಾರೆ' ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಗೆಜೆಟೆಡ್ ಪ್ರೊಬೆಷನರ್ ಹುದ್ದೆಯ ಆಯ್ಕೆಗಾಗಿ 1998, 1999 ಮತ್ತು 2004 ರಲ್ಲಿ ನಡೆದ ನೇಮಕ ಪ್ರಕ್ರಿಯೆಯಲ್ಲಿ ಅಕ್ರಮವಾಗಿದೆಯೆಂದು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಬಳಿಕ ನ್ಯಾಯಾಲಯದ ಆದೇಶದಂತೆ ಸಿಐಡಿ ತನಿಖೆ ಕೈಗೊಳ್ಳಲಾಗಿತ್ತು. ಈ ತನಿಖೆ ವೇಳೆ ಆಶಾ ಪರ್ವೀನ್ ಪ್ರಮಾದ ಎಸಗಿರುವುದು ದೃಢಪಟ್ಟಿತ್ತು.

ನೇಮಕದ ವೇಳೆ ಆಶಾ ಪರ್ವೀನ್, 1996 ರ ಮಾರ್ಚ್ 28 ರಂದು ವಿತರಣೆಯಾಗಿದ್ದ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಲೋಕಸೇವಾ ಆಯೋಗಕ್ಕೆ ನೀಡಿದ್ದರು. ಅದನ್ನು ಪರಿಗಣಿಸಲು ಸಾಧ್ಯವಿಲ್ಲದ್ದರಿಂದ ಅಭ್ಯರ್ಥಿಗೆ ಸಾಮಾನ್ಯ ವರ್ಗದಡಿ ಪ್ರವೇಶ ನೀಡಲಾಗಿತ್ತು.

ಇದರ ಆಧಾರದಲ್ಲಿ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪರ್ವೀನ್, ಮುಖ್ಯ ಪರೀಕ್ಷೆ ವೇಳೆ ತಮ್ಮನ್ನು 2ಬಿ ಅಡಿ ಪರಿಗಣಿಸುವಂತೆ ಅರ್ಜಿ ಕಾಲಂ-10ಎ ದಲ್ಲಿ ನಮೂದಿಸಿದ್ದರು. ಪೂರ್ವಭಾವಿ ಪರೀಕ್ಷೆಯಲ್ಲಿದ್ದ ಪ್ರವರ್ಗವನ್ನು ಮುಂದಿನ ಹಂತಕ್ಕೂ ಮಾನ್ಯ ಮಾಡುವುದು ನಿಯಮ. ಅದರಂತೆ 746 ಅಂಕದೊಂದಿಗೆ ಸಾಮಾನ್ಯ ವರ್ಗದಡಿ ವ್ಯಕ್ತಿತ್ವ ಪರೀಕ್ಷೆಗೆ ಹಾಜರಾಗುವ ಅರ್ಹತೆ ಗಳಿಸಿದ್ದರು.

ಈ ಹಂತದಲ್ಲಿ ಬೆಂಗಳೂರು ಉತ್ತರ ತಾಲೂಕಿನ ವಿಶೇಷ ತಹಸೀಲ್ದಾರರು 1998 ರ ಜೂನ್ 26 ರಂದು ಒದಗಿಸಿದ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಅದೇ ವರ್ಷ ಮಾರ್ಚ್ 9 ರಂದು ವಿತರಿಸಿದ್ದಾರೆ ಎನ್ನುವಂತೆ ಸೃಷ್ಟಿಸಿ ಖೊಟ್ಟಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ನೀಡಿ, ಪ್ರಭಾವ ಬಳಸಿ 2ಬಿ ಪ್ರವರ್ಗದಡಿ ತಹಸೀಲ್ದಾರ್ ಗ್ರೂಪ್ ಬಿ ವೃಂದಕ್ಕೆ ಆಯ್ಕೆಗೊಂಡಿದ್ದರು.

ಪೂರಕ ದಾಖಲೆ ಹಾಗೂ ಸಾಕ್ಷಿದಾರರ ಹೇಳಿಕೆಯಿಂದ ಈ ನೇಮಕವು ಸಂಪೂರ್ಣ ನಿಯಮ ಬಾಹಿರ ಎನ್ನುವುದು ಸಾಬೀತಾಗಿರುವುದಾಗಿ ಸಿಐಡಿ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಅದನ್ನು ಪರಾಮಾಮರ್ಶಿಸಿ ಆಶಾ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ರಾಜ್ಯಪಾಲರ ಆಜ್ಞಾನುಸಾರ ಸರಕಾರದ ಉಪ ಕಾರ್ಯದರ್ಶಿ (ಕಂದಾಯ ಇಲಾಖೆ, ಸೇವೆಗಳು -3) ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಆಶಾ ಪರ್ವೀನ್ 2 ಬಾರಿ ಅಮಾನತುಗೊಂಡಿದ್ದರು. ದೇವನಹಳ್ಳಿಯಲ್ಲಿ ತಹಸೀಲ್ದಾರ್ ಆಗಿದ್ದಾಗ 20 ಎಕರೆಯನ್ನು ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ ಬೇನಾಮಿ ಮಂಜೂರಿ ಮಾಡಿದ ಆರೋಪಕ್ಕೆ ಗುರಿಯಾಗಿ ಶಿಕ್ಷೆ ಅನುಭವಿಸಿದ್ದರು.

ಹಾಗೆಯೇ ಕೆಆರ್‌ ಪುರದಲ್ಲಿದ್ದಾಗ 3 ಎಕರೆಯನ್ನು ಬೇನಾಮಿ ಮಂಜೂರಿ ಮಾಡಿದ್ದರಿಂದ ಅಂದಿನ ಶಾಸಕ ನಂದೀಶ್ ರೆಡ್ಡಿ, ಈಕೆಯ ವಿರುದ್ಧ ದೂರಿತ್ತಿದ್ದರು. ನಂತರ ವರ್ಗಾಯಿಸಲಾಗಿದ್ದರೂ ಕೆಎಟಿಯಿಂದ ತಡೆಯಾಜ್ಞೆ ತಂದ ಪರ್ವೀನ್, ಕೆಆರ್‌ಪುರದ ಪ್ರಭಾರ ತಹಸೀಲ್ದಾರ್ ಕಚೇರಿಯಲ್ಲಿ ಇಲ್ಲದಿದ್ದಾಗ ಬೀಗ ಒಡೆಸಿ ರಾದ್ಧಾಂತ ಸೃಷ್ಟಿಸಿದ್ದರು. ಬಳಿಕ ಮತ್ತೆ ಅಮಾನತುಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+