ಮಲ್ಲತ್ತಹಳ್ಳಿ ಕೆರೆ ಜಾಗದಲ್ಲಿ ಶಿವನ ಪ್ರತಿಮೆ: ಮುನಿರತ್ನಗೆ ನೋಟಿಸ್
ಕರ್ನಾಟಕ ಹೈಕೋರ್ಟ್ ಮಲ್ಲತ್ತಳ್ಳಿಯ ಕೆರೆಯ ಭಾಗದಲ್ಲಿ ಬಯಲು ರಂಗಮಂದಿರ, ಶಿವನ ಪ್ರತಿಮೆ ನಿರ್ಮಾಣ ಸಂಬಂಧ ಆರ್. ಆರ್. ನಗರದ ಬಿಜೆಪಿ ಶಾಸಕ, ಸಚಿವ ಮುನಿರತ್ನಗೆ ನೋಟಿಸ್ ನೀಡಿದೆ.
ಬೆಂಗಳೂರು, ಫೆಬ್ರವರಿ 21; ಬೆಂಗಳೂರು ನಗರದ ಮಲ್ಲತ್ತಳ್ಳಿಯ ಕೆರೆಯ ಭಾಗದಲ್ಲಿ ಬಯಲು ರಂಗಮಂದಿರ, ಶಿವನ ಪ್ರತಿಮೆ ಮತ್ತು ಕಾಂಕ್ರೀಟ್ ಮಾದರಿ ಕಟ್ಟಡ ನಿರ್ಮಾಣ ಇದೀಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಅಷ್ಟೇ ಅಲ್ಲ, ಈ ವಿಚಾರ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಕುರಿತು ಆರ್. ಆರ್. ನಗರ ಕ್ಷೇತ್ರದ ಬಿಜೆಪಿ ಶಾಸಕ, ತೋಟಗಾರಿಕಾ ಸಚಿವ ಮುನಿರತ್ನ ನಾಯ್ಡುಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ವಕೀಲೆ ಗೀತಾಮಿಶ್ರಾ ಕೆರೆ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳು ಮತ್ತು ಒತ್ತುವರಿ ತೆರವುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಮುಖ್ಯ ನ್ಯಾಯಮೂರ್ತಿ, ನ್ಯಾಯಮೂರ್ತಿ ಬಿ. ವೀರಪ್ಪ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು.

ಕೆಲ ಕಾಲ ವಾದ ಆಲಿಸಿದ ಬಳಿಕ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಸಚಿವ ಮುನಿರತ್ನ, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಗೋವಿಂದರಾಜು, ಬೆಂಗಳೂರು ನಗರ ಜಿಲ್ಲಾಧಿಕಾರ, ಬಿಬಿಎಂಪಿ ಆಯುಕ್ತರು, ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
ನಿಯಮ ಬಾಹಿರ ಕಾರ್ಯ: ಅರ್ಜಿದಾರರ ಪರ ವಕೀಲರು,ರಾಜರಾಜೇಶ್ವರಿ ನಗರದ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ನೆರವಿನೊಂದಿಗೆ ರಾಜರಾಜೇಶ್ವರಿ ನಗರದ ಬಿಜೆಪಿ ಅಧ್ಯಕ್ಷ ಎಂ. ಗೋವಿಂದರಾಜ ಮಲ್ಲತ್ತಹಳ್ಳಿ ಕೆರೆ ಅಂಗಳದಲ್ಲಿ 35 ಅಡಿ ಎತ್ತರದ ಶಿವನ ಪ್ರತಿಮೆ ಮತ್ತು ಮನೋರಂಜನಾ ಕಾರ್ಯಕ್ರಮಗಳಿಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಲು ಅನುಮತಿ ನೀಡುವಂತೆ ಕೋರಿ 2023ರ ಫೆಬ್ರವರಿ 19ರಂದು ಅನುಮತಿ ಕೋರಿದ್ದಾರೆ ಎಂದರು.
ಇದು ನಿಯಮ ಬಾಹಿರ ಕ್ರಮವಾಗಿದೆ. ಕೆರೆ ಪ್ರದೇಶದಲ್ಲಿ ಯಾವುದೇ ರೀತಿಯ ನಿರ್ಮಾಣಕ್ಕೆ ಅವಕಾಶವಿಲ್ಲದಿದ್ದರೂ ಅಲ್ಲಿ ನಿರ್ಮಾಣ ಕಾರ್ಯಕ್ಕೆ ಅನುಮತಿ ನೀಡಲು ಮುಂದಾಗಿದ್ದು, ಅದಕ್ಕೆ ತಡೆ ನೀಡಬೇಕೆಂದು ಕೋರಿದರು.

ಕೆರೆ ಅಂಗಳದಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣಕ್ಕಾಗಿ ಸರ್ಕಾರದಿಂದ ಯಾವುದೇ ಪ್ರಾಧಿಕಾರದಿಂದ ಕಾಮಗಾರಿಗೆ ಯಾವುದೇ ಕಾರ್ಯದೇಶ ನೀಡಿಲ್ಲ. ಅಲ್ಲದೇ, ಅಕ್ರಮ ಕಟ್ಟಡ ನಿರ್ಮಾಣದಿಂದ ಉಂಟಾಗುತ್ತಿರುವ ತ್ಯಾಜ್ಯದಿಂದ ಕೆರೆಯನ್ನು ತುಂಬಲಾಗುತ್ತಿದೆ.
ಇದರಿಂದಾಗಿ ಕೆರೆ ವ್ಯಾಪ್ತಿ ಕಡಿಮೆಯಾಗುತ್ತಿದೆ. ಈ ಹಿಂದೆ ಇದ್ದ 72.22 ಗುಂಟೆ ಕೆರೆ ಪ್ರದೇಶದಲ್ಲಿ ಸುಮಾರು ನಾಲ್ಕು ಎಕರೆ ಪ್ರದೇಶವನ್ನು ಅಕ್ರಮವಾಗಿ ಒತ್ತುವರಿಯಾಗಿದೆ ಎಂದು ಅವರು ಅರ್ಜಿಯಲ್ಲಿ ಹೇಳಿದ್ದಾರೆ.












Click it and Unblock the Notifications