ಅರವಿಂದ ಲಿಂಬಾವಳಿಗೆ ಕಾಂಗ್ರೆಸ್ ಟಿಕೆಟ್?; ಶಾಸಕರಿಂದ ಸ್ಪಷ್ಟನೆ
ಬೆಂಗಳೂರು, ಏಪ್ರಿಲ್ 16; ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಬಿಜೆಪಿ ಶಾಸಕರಿಗೆ ಟಿಕೆಟ್ ಕೈತಪ್ಪುವುದು ಹೊಸ ವಿಚಾರವಲ್ಲ. ಬೆಂಗಳೂರು ನಗರದ ಕ್ಷೇತ್ರವೊಂದರಲ್ಲಿಯೂ ಇದೇ ಆಗುವ ನಿರೀಕ್ಷೆ ಇದೆ. ಬಿಜೆಪಿ 189 ಮತ್ತು 23 ಕ್ಷೇತ್ರಗಳ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದರೂ ಸಹ ನಗರದ ಮಹದೇವಪುರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಕ್ಷೇತ್ರದ ಹಾಲಿ ಶಾಸಕರು ಬಿಜೆಪಿಯ ಅರವಿಂದ ಲಿಂಬಾವಳಿ.
ಅರವಿಂದ ಲಿಂಬಾವಳಿ ಕಾಂಗ್ರೆಸ್ ಸೇರಲಿದ್ದಾರೆ. ಆಪರೇಷನ್ 'ಹಸ್ತ' ನಡೆದಿದೆ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅರವಿಂದ ಲಿಂಬಾವಳಿ ಸಂಪರ್ಕಿಸಿದ್ದಾರೆ. ಮಹದೇವಪುರದ ಕಾಂಗ್ರೆಸ್ ಟಿಕೆಟ್ ಆಫರ್ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿದಾಡುತ್ತಿದೆ. ಈ ಪೋಸ್ಟ್‌ಗೆ ಅರವಿಂದ ಲಿಂಬಾವಳಿ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಶಾಸಕರು, 'ಈ ಟ್ವೀಟ್ ಖಾತೆ ಸದಾ ಖಚಿತವಲ್ಲದ, ಸುಳ್ಳು ಮಾಹಿತಿಯನ್ನು ಜನರು ಮತ್ತು ಮಾಧ್ಯಮಗಳಿಗೆ ಒದಗಿಸುತ್ತಿದೆ. ನನ್ನ ಲೀಗಲ್ ಟೀಮ್ ಈ ಕುರಿತು ಸರಿಯಾದ ಕಾನೂನು ಕ್ರಮ ಕೈಗೊಳ್ಳಲಿದೆ. ಈ ರೀತಿಯ ಯಾವುದೇ ಚರ್ಚೆ ನನ್ನೊಂದಿಗೆ ನಡೆದಿಲ್ಲ" ಎಂದು ಅರವಿಂದ ಲಿಂಬಾವಳಿ ಸ್ಪಷ್ಟಪಡಿಸಿದ್ದಾರೆ. ಟ್ವೀಟ್‌ನ ಸ್ಕ್ರೀನ್ ಶಾಟ್ ಸಹ ಹಾಕಿದ್ದಾರೆ.
ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ; ಎಸ್. ಸಿ. ಮೀಸಲು ಕ್ಷೇತ್ರವಾಗಿರುವ ಮಹದೇವಪುರಕ್ಕೆ ಈಗಾಗಲೇ ಕಾಂಗ್ರೆಸ್ ಪಕ್ಷ ನಾಗೇಶ್ ಟಿ. ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಆದರೆ ಬಿಜೆಪಿ ಹಾಲಿ ಪಕ್ಷದ ಶಾಸಕರಿದ್ದೂ ಸಹ ಅಭ್ಯರ್ಥಿ ಘೋಷಣೆ ಮಾಡದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದಿಲ್ಲವೇ ಎಂಬ ಚರ್ಚೆ ಹುಟ್ಟು ಹಾಕಿದೆ.

ಮಹದೇವಪುರದ ಬಿಜೆಪಿ ಟಿಕೆಟ್‌ಗಾಗಿ ವರ್ತೂರು ಮುನಿರಾಜು, ಡಾ. ವೆಂಕಟೇಶ್ ಮೌರ್ಯ ಹೆಸರು ಕೇಳಿ ಬರುತ್ತಿದೆ. ಹಾಗಾದರೆ ಅರವಿಂದ ಲಿಂಬಾವಳಿಗೆ ಟಿಕೆಟ್ ಸಿಗುವುದಿಲ್ಲವೇ?. ಟಿಕೆಟ್ ಕೈತಪ್ಪಿದರೆ ಮುಂದಿನ ನಡೆ ಏನು? ಎಂಬುದು ಕುತೂಹಲದ ವಿಚಾರ. ಇದರ ನಡುವೆಯೇ ಡಿ. ಕೆ. ಶಿವಕುಮಾರ್ ಅರವಿಂದ ಲಿಂಬಾವಳಿಗೆ ಕಾಂಗ್ರೆಸ್ ಟಿಕೆಟ್ ಆಫರ್ ನೀಡಿದ್ದಾರೆ ಎಂದು ಟ್ವೀಟ್ ಹರಿದಾಡುತ್ತಿದೆ.
ಇನ್ನೂ ಟಿಕೆಟ್ ಘೋಷಣೆಯಾಗದ ಹಿನ್ನಲೆಯಲ್ಲಿ ಅರವಿಂದ ಲಿಂಬಾವಳಿ ಆಪ್ತರ ಜೊತೆ ಸಭೆ ನಡೆಸಿದ್ದಾರೆ. ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆ ನಾಮಪತ್ರ ಸಲ್ಲಿಕೆ ಮಾಡಲು ಏಪ್ರಿಲ್ 20 ಕೊನೆಯ ದಿನವಾಗಿದೆ. ಆದ್ದರಿಂದ ಭಾನುವಾರ ಸಂಜೆ ಅಥವ ಸೋಮವಾರ ಬಿಜೆಪಿ 3ನೇ ಪಟ್ಟಿ ಬಿಡಿಗಡೆಯಾಗುವ ನಿರೀಕ್ಷೆ ಇದೆ.
ಬಿಜೆಪಿ ಟಿಕೆಟ್ ನಿರಾಕರಣೆ ಮಾಡಿದರೆ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದಾರೆ ಎಂದು 'ವಿಜಯ ಕರ್ನಾಟಕ' ಪತ್ರಿಕೆ ವರದಿ ಮಾಡಿದೆ. ಅಲ್ಲದೇ ಅವರ ಬೆಂಬಲಿಗರು ಬಿಜೆಪಿಗೆ ರಾಜೀನಾಮೆ ನೀಡಲಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅರವಿಂದ ಲಿಂಬಾವಳಿಗೆ ಈ ಬಾರಿಯ ವಿಧಾಸನಭೆಗಿಂತ ಮುಂದಿನ ಲೋಕಸಭಾ ಕ್ಷೇತ್ರದಲ್ಲಿ ವಿಜಯಪುರದ ಟಿಕೆಟ್ ನೀಡುವ ಭರವಸೆ ಸಿಕ್ಕಿದೆ. ಆದರೆ ಶಾಸಕರು ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ ಎಂಬ ಸುದ್ದಿಗಳಿವೆ. ಆದ್ದರಿಂದ ಮಹದೇವಪುರ ಬಿಜೆಪಿ ಅಭ್ಯರ್ಥಿ ಅಂತಿಮಗೊಳಿಸುವುದು ಇನ್ನೂ ಕಗ್ಗಂಟಾಗಿಯೇ ಉಳಿದಿದೆ.
ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಮಹದೇವಪುರದಲ್ಲಿ ಅರವಿಂದ ಲಿಂಬಾವಳಿ 3 ಬಾರಿ ಗೆದ್ದು ಹ್ಯಾಟ್ರಿಕ್ ಬಾರಿಸಿದ್ದಾರೆ. ಮೂಲತಃ ಬಾಗಲಕೋಟೆ ಅರವಿಂದ ಲಿಂಬಾವಳಿಯನ್ನು 2008ರಲ್ಲಿ ಮಹದೇವಪುರದಲ್ಲಿ ಕಣಕ್ಕಿಳಿಸಲಾಗಿತ್ತು. ಅವರ ಬದಲು ಸ್ಥಳೀಯ ಅಭ್ಯರ್ಥಿಗೆ ಈ ಬಾರಿಯ ಟಿಕೆಟ್ ಕೊಡುವ ಚಿಂತನೆ ಪಕ್ಷದ್ದು ಎಂಬುದು ಮಾಹಿತಿ.












Click it and Unblock the Notifications