ವಿಧಾನಸಭಾ ಚುನಾವಣೆ: ಕಾಂಗ್ರೆಸ್ ಮುಖಂಡನಿಂದ ಸೀರೆ ಹಂಚಿಕೆ ವೇಳೆ ನೂಕು ನುಗ್ಗಲು, ಮಹಿಳೆಯರಿಗೆ ಗಾಯ
ರಾಜಕೀಯಕ್ಕೆ ಬರಲು ಇತ್ತೀಚೆಗಷ್ಟೇ ಸ್ವಯಂ ನಿವೃತ್ತಿ ಪಡೆದ ತಮಿಳುನಾಡು ಕೇಡರ್‌ನ ಹಿರಿಯ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ್ ಅವರ ತೋಟದ ಮನೆಯಲ್ಲಿ ಭಾನುವಾರ ಕಾರ್ಯಕ್ರಮ ನಡೆದಿದೆ.
ಬೆಳಗಾವಿ, ಮಾರ್ಚ್ 07: ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳು ಹಲವು ಪ್ರಯತ್ನಗಳ ಮೂಲಕ ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದರ ಜೊತೆಗೆ ಕ್ಷೇತ್ರದಲ್ಲಿ ಮತ್ತು ಪಕ್ಷದ ಬೆಂಬಳಿಗರಿಂದಲೂ ಪಕ್ಷದ ಮೇಲೆ ಒತ್ತಡ ಹಾಕಲು ಯತ್ನಿಸುತ್ತಿದ್ದಾರೆ. ಇನ್ನೂ, ಟಿಕೆಟ್ ತನಗೆ ಸಿಗಬಹುದು ಎಂಬ ವಿಶ್ವಾಸದಲ್ಲಿರುವವರು ಮತದಾರರನ್ನು ಸೆಳೆಯುವ ಕೆಲಸದಲ್ಲಿ ನಿರತರಾಗಿದ್ದಾರೆ.
ಹೀಗೇಯೇ ಬೆಳಗಾವಿಯ ರಾಯಬಾಗ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆಯಿರುವ ಪ್ರಭಾವಿ ನಾಯಕರ ಬೆಂಬಲಿಗರು ಸೀರೆ ಹಂಚಿ ಮಹಿಳಾ ಮತದಾರರನ್ನು ತಮ್ಮತ್ತ ಸೆಳೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ಈ ವೇಳೆ ಸಂಭವಿಸಿದ ಸಣ್ಣ ಕಾಲ್ತುಳಿತದಲ್ಲಿ ಹಲವಾರು ಮಹಿಳೆಯರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಧಾರ್ಮಿಕ ಆಚರಣೆಗಳ ನೆಪದಲ್ಲಿ ಉಡುಗೊರೆ ಹಂಚಲಾಗಿದೆ.

ರಾಜಕೀಯಕ್ಕೆ ಬರಲು ಇತ್ತೀಚೆಗಷ್ಟೇ ಸ್ವಯಂ ನಿವೃತ್ತಿ ಪಡೆದ ತಮಿಳುನಾಡು ಕೇಡರ್‌ನ ಹಿರಿಯ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ್ ಅವರ ತೋಟದ ಮನೆಯಲ್ಲಿ ಭಾನುವಾರ ಕಾರ್ಯಕ್ರಮ ನಡೆದಿದೆ. ರಾಯಬಾಗ ತಾಲೂಕಿನ ಜೋಡಟ್ಟಿ ಗ್ರಾಮದಲ್ಲಿರುವ ತೋಟದಮನೆಯಲ್ಲಿ ಹೊಸದಾಗಿ ತೋಡಿದ ಬಾವಿಯ ಪೂಜೆಯಲ್ಲಿ ಪಾಲ್ಗೊಳ್ಳಲು ಸಾವಿರಾರು ಮಹಿಳೆಯರು ಬಂದಿದ್ದರು.
ಈ ವೇಳೆ ಮಹಿಳೆಯರಿಗೆ ತಾಂಬೂಲ ನೀಡುವ ನೆಪದಲ್ಲಿ ಸೀರೆ ಹಂಚಲಾಗಿದೆ. ಸೀರೆ ಪಡೆಯಲು ಮಹಿಳೆಯರ ಗುಂಪು ನುಗ್ಗಿದ್ದರಿಂದ ನಿಯಂತ್ರಣ ತಪ್ಪಿ ಕಾಲ್ತುಳಿತ ಉಂಟಾಗಿದೆ. ಈ ಸಮಯದಲ್ಲಿ ಕೆಲವರಿಗೆ ಗಾಯಗಳಾಗಿವೆ. ತೋಟದಮನೆಯಲ್ಲಿ ಉಚಿತ ಸೀರೆಗಳನ್ನು ಹಂಚಲಾಗುತ್ತಿದೆ ಎಂದು ರಾಯಬಾಗ ತಾಲೂಕಿನಲ್ಲಿ ಸುದ್ದಿ ಹರಡಿದ ನಂತರ ಮಹಿಳೆಯರ ಸಂಖ್ಯೆ ಹೆಚ್ಚಾಯಿತು ಎಂದು ಮೂಲಗಳು ತಿಳಿಸಿವೆ.

ಕಾರ್ಯಕ್ರಮ ಆಯೋಜನಕರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಾಗಿ ಸುಮಾರು 20,000 ಮಹಿಳೆಯರು ಫಾರ್ಮ್‌ಹೌಸ್‌ನಲ್ಲಿ ಜಮಾಯಿಸಿದ್ದರು. ನೂಕುನುಗ್ಗಲು ನಿಯಂತ್ರಿಸಲು ಸಾಧ್ಯವಾಗದ ಸಂಘಟಕರು ಸೀರೆ ವಿತರಣೆಯನ್ನು ರದ್ದುಗೊಳಿಸಿದ್ದಾರೆ ಎಂದು ವರದಿಯಾಗಿದೆ. ಅರಿಸಿನ ಕುಂಕುಮ ಕೊಡುವ ಕಾರ್ಯಕ್ರಮಗಳ ನೆಪದಲ್ಲಿ ಮುಖಂಡರು ಸೀರೆ, ಪಾತ್ರೆ, ಮಿಕ್ಸರ್, ಡಿನ್ನರ್ ಸೆಟ್‌ಗಳನ್ನು ಮತದಾರರಿಗೆ ಹಂಚುತ್ತಿದ್ದಾರೆ.
ಇತ್ತೀಚೆಗೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಕಾಗವಾಡದ ತಮ್ಮ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಮಹಿಳೆಯರಿಗೆ ಸೀರೆ ವಿತರಿಸಿದರು. ಇದಕ್ಕೂ ಮುನ್ನ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಶಾಸಕ ಸಂಜಯ ಪಾಟೀಲ, ಕಾಂಗ್ರೆಸ್ ಮುಖಂಡ ನಾಗೇಶ ಮನ್ನೋಳಕರ ಅವರು ಮತದಾರರಿಗೆ ಪ್ರಸಾದ ವಿತರಿಸಿದರು. ರಾಯಬಾಗದಲ್ಲಿ ಬಿಜೆಪಿಯ ಹಾಲಿ ಶಾಸಕ ದುರ್ಯೋಧನ ಐಹೊಳೆ ವಿರುದ್ಧ ಕಾಂಗ್ರೆಸ್‌ನಿಂದ ಶಂಭು ಕಲ್ಲೋಳಿಕರ್ ಕಣಕ್ಕಿಳಿಯುವುದು ಖಚಿತವಾಗಿದೆ.
ಇಬ್ಬರು ನಾಯಕರ ನಡುವೆ ತೀವ್ರ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ. ಬಿಜೆಪಿಯ ಹಾಲಿ ಶಾಸಕ ದುರ್ಯೋಧನ ಐಹೊಳೆ ಕಳೆದ ಮೂರು ಚುನಾವಣೆಗಳಲ್ಲಿ ಸತತವಾಗಿ ಗೆಲುವು ಸಾಧಿಸಿದ್ದು, ಕ್ಷೇತ್ರದಲ್ಲಿ ದುರ್ಯೋಧನ ಐಹೊಳೆ ಅವರ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ನೊಡಿದರೇ ಶಂಭು ಕಲ್ಲೋಳಿಕರ್ ಅವರಿಗೆ ಕಠಿಣ ಸವಾಲು ಎದುರಾಗುವ ನಿರೀಕ್ಷೆಯಿದೆ.
ಶಂಭು ಕಲ್ಲೋಳಿಕರ್ ಬೆಳಗಾವಿ ಜಿಲ್ಲೆ ರಾಯಭಾಗ ಮೂಲದವರಾಗಿದ್ದು, 1991ನೇ ಕೇಡರ್‌ನ ಐಎಎಸ್ ಅಧಿಕಾರಿ. ಕೇಂದ್ರ ಮತ್ತು ರಾಜ್ಯದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ತಮಿಳುನಾಡಿನ ಸಮಾಜ ಕಲ್ಯಾಣ ಮತ್ತು ಪೌಷ್ಟಿಕ ಆಹಾರ ಕಾರ್ಯಕ್ರಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ಇವರು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕಾರಣ ಸ್ವಯಂ ನಿವೃತ್ತಿ ಪಡೆದಿದ್ದಾರೆ.












Click it and Unblock the Notifications