ಸಂಸದ ತೇಜಸ್ವಿ ಸೂರ್ಯಾಗೆ ಮಸಾಲೆ ದೋಸೆ ಡಂಜೊ ಮಾಡಿದ ಕಾಂಗ್ರೆಸ್
ಬೆಂಗಳೂರು, ಸೆಪ್ಟೆಂಬರ್ 11: ಬೆಂಗಳೂರು ಮಳೆಯಿಂದ ಸಂಕಷ್ಟದ ಪರಿಸ್ಥಿತಿಯಲ್ಲಿ ನರಳುತ್ತಿರುವಾಗ ಹೋಟೆಲ್‌ವೊಂದರಲ್ಲಿ ಮಸಾಲೆ ದೋಸೆ ತಿಂದು ತನಗೆ ಟೆಮ್ಟ್ ಆಗಿದೆ ಎಂದು ಹೇಳಿಕೊಂಡಿದ್ದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಅವರ ನಿರ್ಲಕ್ಷ್ಯತನ ಖಂಡಿಸಿ ಪ್ರತಿಭಟನಾರ್ಥವಾಗಿ 10 ಮಸಾಲೆ ದೋಸೆಗಳನ್ನು ಪಾರ್ಸೆಲ್ ಕಳುಹಿಸಿದ್ದಾರೆ.
ಬೆಂಗಳೂರಿನ ಕೆಲವು ಭಾಗಗಳು ಭೀಕರ ಪ್ರವಾಹವನ್ನು ಎದುರಿಸುತ್ತಿರುವಾಗ ದೋಸೆ ಸವಿಯುತ್ತಾ ಅಡ್ಡಾಡುತ್ತಿದ್ದ ಆರೋಪದ ಮೇಲೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. ಅವರ ನಿರ್ಲಕ್ಷ್ಯತನವನ್ನು ಖಂಡಿಸಿರುವ ಕಾಂಗ್ರೆಸ್ ಕಾರ್ಯಕರ್ತರು ನಗರದ ಜನಪ್ರಿಯ ರೆಸ್ಟೋರೆಂಟ್‌ಗಳಿಂದ ಹತ್ತು ವಿವಿಧ ದೋಸೆಗಳನ್ನು ತೇಜಸ್ವಿ ಸೂರ್ಯ ಅವರಿಗೆ ಕಳುಹಿಸಿ ಅವರು ಕೇವಲ ರೆಸ್ಟೋರೆಂಟ್‌ಗಳ ಜನಪ್ರಿಯತೆಯ ಬಗ್ಗೆ ಮಾತ್ರ ಚಿಂತಿಸುತ್ತಿದ್ದಾರೆ ಹೊರತು ಜನರ ಬಗ್ಗೆ ಅಲ್ಲ ಎಂದು ಆರೋಪಿಸಿದರು.

ಬೇಜವಾಬ್ದಾರಿ ನಡೆವಳಿಕೆಗಾಗಿ ಈ ಪ್ರತಿಭಟನೆ
ಟ್ವಿಟ್ಟರ್‌ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕಾಂಗ್ರೆಸ್ ಕಾರ್ಯಕರ್ತರು 10 ದೋಸೆಗಳನ್ನು ಆರ್ಡರ್ ಮಾಡಿ ಮನೆ ಬಾಗಿಲಿಗೆ ತಲುಪಿಸುವ ಡಂಜೋ ಮೂಲಕ ಸಂಸದರ ಕಚೇರಿಗೆ ಕಳುಹಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಟ್ವೀಟ್ಟರ್‌ನಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಲ್ಲಿನ ತೇಜಸ್ವಿ ಸೂರ್ಯ ವಿರುದ್ಧ ಅವರ ಬೇಜವಾಬ್ದಾರಿ ನಡೆವಳಿಕೆಗಾಗಿ ಈ ಪ್ರತಿಭಟನೆ ನಡೆಯುತ್ತಿದೆ. ಬೆಂಗಳೂರಿನ ಪ್ರಮುಖ ಹೋಟೆಲ್‌ಗಳಿಂದ ಅವರಿಗೆ 10 ವಿಭಿನ್ನ ದೋಸೆಗಳ ಪಾರ್ಸೆಲ್ ಕಳುಹಿಸಲಾಗಿದೆ. ಅವರು ಈ ಉಚಿತ ದೋಸೆಗಳನ್ನು ತಿನ್ನಲಿ. ಅವರು ಹೋಟೆಲ್‌ನ ಮಾರ್ಕೆಟಿಂಗ್ ಮಾಡುವುದು ಬಿಟ್ಟು ಅವರ ಕ್ಷೇತ್ರದ ಜನರಿಗಾಗಿ ಕೆಲಸ ಮಾಡಲಿ ಎಂದು ಹೇಳಿದ್ದಾರೆ.

ಉಪ್ಪಿಟ್ಟು ನೀವೆಲ್ಲರೂ ಇದನ್ನು ಇಷ್ಟಪಡುತ್ತೀರಿ
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಬೆಂಗಳೂರಿನ ಜನರು ಪ್ರವಾಹದಿಂದ ಸಂಕಷ್ಟಕ್ಕೊಳಕ್ಕಾಗಿದ್ದರೂ ಮಸಾಲೆ ದೋಸೆ ತಿನ್ನಲು ಹೋಗಿದ್ದಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಟೀಕೆ ವ್ಯಕ್ತವಾಗಿತ್ತು. ಈ ಬಗ್ಗೆ ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಅವರು ತೇಜಸ್ವಿ ದೋಸೆ ಸವಿಯುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದು, ಇದು ವೈರಲ್ ಆಗಿತ್ತು. ವೀಡಿಯೊದಲ್ಲಿ, ತೇಜಸ್ವಿ ಸೂರ್ಯ ಮಸಾಲೆ ದೋಸೆ ತಿನ್ನುತ್ತಾ ಇನ್‌ಸ್ಟಾಗ್ರಾಮ್‌ನಲ್ಲಿ ನಾನು ಪದ್ಮನಾಭನಗರದಲ್ಲಿ ಈ ಬೆಣ್ಣೆ ಮಸಾಲೆ ದೋಸೆ ತಿನ್ನಲು ಬಂದಿದ್ದೇನೆ. ನಾನು ಈ ದೋಸೆಯನ್ನು ಇಷ್ಟಪಡುತ್ತೇನೆ. ಇದು ನಿಮಗೂ ಇಷ್ಟವಾಗಬಹುದು. ನೀವೆಲ್ಲರೂ ಈ ಹೋಟೆಲ್‌ನಲ್ಲಿ ಉಪ್ಪಿಟ್ಟು (ಉಪ್ಮಾ) ಅನ್ನು ಸಹ ಟ್ರೈ ಮಾಡಿ ಎಂದು ನಾನು ಸಲಹೆ ನೀಡುತ್ತೇನೆ. ನೀವೆಲ್ಲರೂ ಇದನ್ನು ಇಷ್ಟಪಡುತ್ತೀರಿ ಎಂದು ನನಗೆ ಖಾತ್ರಿಯಿದೆ ಎಂದು ಹೇಳಿದ್ದರು.

ಯಾವುದೇ ಚಿಂತೆಯಿಲ್ಲದೆ ಮಸಲೆ ದೋಸೆ ತಿಂತಾರೆ
ಸೆಪ್ಟೆಂಬರ್ 5 ರಂದು ಬೆಂಗಳೂರಿನ ಬಹುತೇಕ ಭಾಗಗಳು ನೀರಿನಲ್ಲಿ ಮುಳುಗಿ ಜನತೆ ಸಂಕಷ್ಟದಲ್ಲಿರುವಾಗ ಈ ವೀಡಿಯೊ ಮಾಡಲಾಗಿದೆ ಎಂದು ಲಾವಣ್ಯ ಹೇಳಿದ್ದಾರೆ. ನೆರೆಯಿಂದ ಬೆಂಗಳೂರು ಮುಳುಗುತ್ತಿರುವಾಗ ತೇಜಸ್ವಿ ಸೂರ್ಯ ಯಾವುದೇ ಚಿಂತೆಯಿಲ್ಲದೆ ಒಳ್ಳೆಯ ಉಪಹಾರವನ್ನು ಸವಿಯುತ್ತಿದ್ದಾರೆ. ಆದರೆ ಅವರು ಜನರ ಕಷ್ಟ ಕೇಳಲು ಒಂದೇ ಒಂದು ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆಯೇ? ಎಂದು ಅವರು ಪ್ರಶ್ನಿಸಿದ್ದರು.
|
ಜನ ಮುಳುಗುವಾಗ ದೋಸೆ ತಿನ್ನಲು ಹೋಗುತ್ತಾರೆ
ವಿಡಿಯೋ ಹೊರಬಂದಾಗಲೇ ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿತ್ತು ಬುದ್ದಿ ಇಲ್ಲದಿರುವವರನ್ನು ಜನಪ್ರತಿನಿಧಿಗಳಾಗಿ ಆಯ್ಕೆ ಮಾಡಿದರೆ ಮಳೆಯಿಂದ ಜನ ಮುಳುಗುವಾಗ ದೋಸೆ ತಿನ್ನಲು ಹೋಗುತ್ತಾರೆ ಎಂದು ವಾಗ್ದಾಳಿ ನಡೆಸಿತ್ತು. 'ಬೆಂಗಳೂರು ಮುಳುಗಿದೆ, ಜನತೆ ಪರದಾಡುತ್ತಿದ್ದಾರೆ, ಆದರೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ದೋಸೆ ತಿನ್ನುವ ಟೆಂಪ್ಟ್ ಆಗಿದ್ಯಂತೆ ಎಂದು ಕಾಂಗ್ರೆಸ್ ಲೇವಡಿ ಮಾಡಿತ್ತು.












Click it and Unblock the Notifications