ಪದ್ಮನಾಭನಗರಕ್ಕೆ ಬಿ-ಫಾರಂ ಕೊಡದ ಡಿಕೆಶಿ, ಕುತೂಹಲ ಮೂಡಿಸಿದ ನಡೆ!
ಬೆಂಗಳೂರು, ಏಪ್ರಿಲ್ 13; ಕರ್ನಾಟಕ ಕಾಂಗ್ರೆಸ್ 2023ರ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. 2ನೇ ಪಟ್ಟಿಯಲ್ಲಿ ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರಕ್ಕೆ ವಿ. ರಘುನಾಥ ನಾಯ್ಡು ಅಭ್ಯರ್ಥಿ ಎಂದು ಹೆಸರಿಸಲಾಗಿದೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ರ ಗುರುವಾರದ ನಡೆ ಕುತೂಹಲಕ್ಕೆ ಕಾರಣವಾಗಿದೆ.
ಈ ಬಾರಿಯ ಚುನಾವಣೆಯಲ್ಲಿ ಕಣಕ್ಕಿಳಿಯುವ ಪಕ್ಷದ ಅಭ್ಯರ್ಥಿಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಗುರುವಾರ ಬಿ-ಫಾರಂ ವಿತರಣೆ ಮಾಡುತ್ತಿದ್ದಾರೆ. ಚುನಾವಣಾ ಅಧಿಸೂಚನೆ ಇಂದು ಪ್ರಕಟವಾಗಿದ್ದು, ಏಪ್ರಿಲ್ 14 ಮತ್ತು 16ರಂದು ಹೊರತುಪಡಿಸಿ ಏಪ್ರಿಲ್ 20ರ ತನಕ ನಾಮಪತ್ರ ಸಲ್ಲಿಕೆ ಮಾಡಲು ಅವಕಾಶವಿದೆ.

ಗುರುವಾರ ಪದ್ಮನಾಭನಗರದ ಘೋಷಿತ ಕಾಂಗ್ರೆಸ್ ಅಭ್ಯರ್ಥಿ ವಿ. ರಘುನಾಥ ನಾಯ್ಡು ಬಿ-ಫಾರಂ ಪಡೆಯಲು ಕೆಪಿಸಿಸಿ ಕಚೇರಿಗೆ ಬಂದಿದ್ದರು. ಆದರೆ ಡಿ. ಕೆ. ಶಿವಕುಮಾರ್ ಪದ್ಮನಾಭನಗರದ ಬಿ-ಫಾರಂ ನೀಡಲಿಲ್ಲ. ಇದು ಡಿ. ಕೆ. ಶಿವಕುಮಾರ್ ಹೊಸ ಲೆಕ್ಕಾಚಾರ ಆರಂಭಿಸಿದ್ದಾರೆಯೇ? ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಪದ್ಮನಾಭನಗರ ಕ್ಷೇತ್ರದ ಹಾಲಿ ಶಾಸಕರು ಕಂದಾಯ ಸಚಿವ ಆರ್. ಅಶೋಕ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಶೋಕಗೆ ರಾಮನಗರದ ಕನಕಪುರ ಮತ್ತು ಪದ್ಮನಾಭನಗರದಲ್ಲಿ ಕಣಕ್ಕಿಳಿಯಲು ಅವಕಾಶ ನೀಡಿದೆ. ಕನಕಪುರ ಡಿ. ಕೆ. ಶಿವಕುಮಾರ್ ತವರು ಕ್ಷೇತ್ರ. ತಮ್ಮ ಎದುರಾಳಿಯನ್ನು ಪದ್ಮನಾಭನಗರದಲ್ಲಿಯೂ ಸೋಲಿಸಲು ಅವರು ತಂತ್ರ ರೂಪಿಸಿ ಬಿ-ಫಾರಂ ತಡೆ ಹಿಡಿದಿದ್ದಾರೆಯೇ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಒಕ್ಕಲಿಗ ಕಾರ್ಡ್ ಬಳಕೆ; ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಲ್ಲಿ ಒಕ್ಕಲಿಗ ಕಾರ್ಡ್ ಪ್ಲೇ ಮಾಡಿದೆ. ಬಿಜೆಪಿಯ ಹಿರಿಯ ನಾಯಕ, ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಆರ್. ಅಶೋಕರನ್ನು ಡಿ. ಕೆ. ಶಿವಕುಮಾರ್ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿಸಿದೆ. ಬಿಜೆಪಿ ಅಸ್ತಿತ್ವವಿಲ್ಲದ, ಕಾಂಗ್ರೆಸ್ ಭದ್ರಕೋಟೆಯಲ್ಲಿ ಅಶೋಕ ಪಕ್ಷದ ಬಾವುಟ ಹಾರಿಸಲಿದ್ದಾರೆಯೇ? ಕಾದು ನೋಡಬೇಕಿದೆ.
ಇನ್ನು ಕನಕಪುರದಲ್ಲಿ ಆರ್. ಅಶೋಕ ಕಣಕ್ಕಿಳಿಸಿರುವ ಕುರಿತು ಸಚಿವ ಡಾ. ಸಿ. ಎನ್. ಅಶ್ವತ್ಥ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ, "ನಾವು ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಬಂದಿದ್ದೇವೆ. ನೂರಕ್ಕೆ ನೂರರಷ್ಟು ಕನಕಪುರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಮಾಗಡಿ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಗೆಲವು ಸಾಧಿಸಲಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಗಡಿಯ ಅಭಿವೃದ್ಧಿ ಮಾಡಿದ್ದೇವೆ" ಎಂದು ಹೇಳಿದರು.
2008ರಲ್ಲಿ ಪದ್ಮನಾಭನಗರ ಕ್ಷೇತ್ರ ರಚನೆಗೊಂಡ ಮೇಲೆ ಮೂರು ಚುನಾವಣೆಯಲ್ಲಿಯೂ ಆರ್. ಅಶೋಕ ಗೆಲ್ಲುವ ಮೂಲಕ ಹ್ಯಾಟ್ರಿಕ್ ಬಾರಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿಯೂ ಟಿಕೆಟ್ ಪಡೆದಿದ್ದಾರೆ. 2018ರಲ್ಲಿ ಅವರು 77,868, 2013ರ ಚುನಾವಣೆಯಲ್ಲಿ 53,563 ಮತ್ತು 2008ರ ಚುನಾವಣೆಯಲ್ಲಿ 61,561 ಮತಗಳನ್ನು ಪಡೆದು ಅಶೋಕ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಪದ್ಮನಾಭನಗರ ಕ್ಷೇತ್ರದಲ್ಲಿ 2008ರಲ್ಲಿ 33,400, 2013ರಲ್ಲಿ 26,183 ಮತ್ತು 2018ರ ಚುನಾಣೆಯಲ್ಲಿ 22,158 ಮತಗಳನ್ನು ಪಡೆದಿದೆ. ಈ ಬಾರಿಯ ಚುನಾವಣೆಯಲ್ಲಿ ಡಿ. ಕೆ. ಶಿವಕುಮಾರ್ ಅಥವ ಡಿ. ಕೆ. ಸುರೇಶ್ ಪದ್ಮನಾಭನಗರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಇದೆ. ಇದರ ನಡುವೆಯೇ ಬಿ-ಫಾರಂ ತಡೆ ಹಿಡಿಯಲಾಗಿದೆ.
ವಿ. ರಘುನಾಥ ನಾಯ್ಡು ಈ ಬಾರಿಯ ಚುನಾವಣೆಯಲ್ಲಿ ಪದ್ಮನಾಭನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಗುತ್ತಿಗೆದಾರರಾದ ಅವರು ಕ್ಷೇತ್ರದಲ್ಲಿ ಪಕ್ಷದ ಬೃಹತ್ ಕಚೇರಿಯನ್ನು ನಿರ್ಮಾಣ ಮಾಡಿದ್ದರು. ಮೇಕೆದಾಟು ಪಾದಯಾತ್ರೆ, ಭಾರತ್ ಜೋಡೋ ಯಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡಿತ್ತು. ಆದರೆ ಈಗ ಬಿ-ಫಾರಂ ನೀಡದಿರುವುದು ಕುತೂಹಲ ಮೂಡಿಸಿದೆ.












Click it and Unblock the Notifications