ಟಿಪ್ಪು ಸುಲ್ತಾನ್ ವೇಶದಲ್ಲಿ ಕತ್ತಿ ಹಿಡಿದು ಕುದುರೆ ಏರಿ ಬಂದ ಜಮೀರ್ ಅಹ್ಮದ್!
ಬೆಂಗಳೂರು, ಸೆಪ್ಟೆಂಬರ್ 07: ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ನಿನ್ನೆ ರಾತ್ರಿ ಏಕಾ-ಏಕಿ ಟಿಪ್ಪು ಸುಲ್ತಾನ್ ಆಗಿಬಿಟ್ಟಿದ್ದರು. ಥೇಟ್ ಟಿಪ್ಪು ಸುಲ್ತಾನ್ ರೀತಿ ವೇಶ ಧರಿಸಿ ಬಿಳಿಯ ಕುದುರೆ ಮೇಲೆ ಕತ್ತಿ ಹಿಡಿದು ಓಡಾಡಿದ್ದಾರೆ ಮಾಜಿ ಸಚಿವ ಜಮೀರ್ ಅಹ್ಮದ್.
ಹೌದು, ತಮ್ಮ ಚಾಮರಾಜಪೇಟೆ ಕ್ಷೇತ್ರದ ಟಿಪ್ಪು ನಗರದಲ್ಲಿ ನಿನ್ನೆ ರಾತ್ರಿ ಮುಸಲ್ಮಾನರು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಜಮೀರ್ ಅಹ್ಮದ್ ಅವರು ಟಿಪ್ಪು ಪೇಟ ಮಾತ್ರವಲ್ಲದೆ ಟಿಪ್ಪು ಮಾದರಿಯ ಉಡುಗೆಯನ್ನೂ ಧರಿಸಿ, ಎರಡೂ ಕೈಯಲ್ಲಿ ಕತ್ತಿ ಹಿಡಿದು ಕುದುರೆ ಏರಿ ಬಂದಿದ್ದಾರೆ.
ನೂರಾರು ಜನ ಸೇರಿದ್ದ ಕಾರ್ಯಕ್ರಮಕ್ಕೆ ಜಮೀರ್ ಅವರು ಭಿನ್ನ ಉಡುಗೆಯಲ್ಲಿ ಬಂದಿದ್ದು ಭಾರಿ ಗಮನ ಸೆಳೆದಿದೆ. ಜಮೀರ್ ಅವರು ತೊಟ್ಟಿದ್ದ ಜುಬ್ಬಾದಂತಹಾ ಅಂಗಿಯನ್ನು ಪೂರ್ಣವಾಗಿ ಮಲ್ಲಿಗೆಯ ಹೂವುಗಳಿಂದ ಅಲಂಕೃತಗೊಳಿಸಲಾಗಿತ್ತು.

ಟಿಪ್ಪು ಜಯಂತಿ ಜಾರಿ ಹಿಂದೆ ಜಮೀರ್ ಒತ್ತಾಯ
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡುವ ನಿರ್ಧಾರದ ಹಿಂದೆ ಜಮೀರ್ ಅವರ ಒತ್ತಾಯವೂ ಇತ್ತು ಎನ್ನಲಾಗುತ್ತದೆ. ಅವರು ಟಿಪ್ಪು ಜಯಂತಿಯನ್ನು ಭಾರಿ ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ ಸಹ. ಆದರೆ ನಿನ್ನೆ ತಾವೇ ಟಿಪ್ಪುವಿನಂತೆ ವೇಶ ಧರಿಸಿ ಬಂದಿದ್ದು ವಿಶೇಷವಾಗಿತ್ತು.

ಸಿದ್ದರಾಮಯ್ಯಗೂ ವೇಶ ತೊಡಿಸಿದ್ದರು
ಜಮೀರ್ ಅಹ್ಮದ್ ಅವರು ಸಿದ್ದರಾಮಯ್ಯ ಅವರ ಅಪ್ಪಟ ಅನುಯಾಯಿಗಳಾಗಿದ್ದು, ಸಿದ್ದರಾಮಯ್ಯ ಅವರಿಗೂ ಸಹ ಟಿಪ್ಪು ಜಯಂತಿ ಸಂದರ್ಭದಲ್ಲಿ ಇದೇ ಮಾದರಿಯ ಉಡುಗೆ ತೊಡಿಸಿ ಕೈಗೆ ಕತ್ತಿ ಕೊಟ್ಟಿದ್ದರು.

ಜಮೀರ್ ಜೊತೆಗಿದ್ದ ವ್ಯಕ್ತಿಯೂ ಗಮನ ಸೆಳೆದಿದ್ದಾರೆ
ಕಾರ್ಯಕ್ರಮದಲ್ಲಿ ಕೇವಲ ಜಮೀರ್ ಅಹ್ಮದ್ ಮಾತ್ರವಲ್ಲ ಅವರ ಜೊತೆಗೆ ಇದ್ದ ಒಬ್ಬ ವ್ಯಕ್ತಿಯೂ ಭಾರಿ ಗಮನ ಸೆಳೆದಿದ್ದಾರೆ. ಭಾರಿ ಗಾತ್ರದ ಚಿನ್ನದ ಆಭರಣಗಳನ್ನು ಹಾಕಿಕೊಂಡ ವ್ಯಕ್ತಿಯೊಬ್ಬರು ಜಮೀರ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಭಾರಿ ಗಾತ್ರದ ಕಡಗ, ಭಾರಿ ಗಾತ್ರದ ಕತ್ತಿನ ಸರಗಳನ್ನು ಹಾಕಿಕೊಂಡು ಎಲ್ಲರ ಗಮನವನ್ನು ಅವರು ಸೆಳೆದರು.

ಐಎಂಎ ಪ್ರಕರಣದ ಸಿಬಿಐ ತನಿಖೆಯಲ್ಲಿದೆ
ಜಮೀರ್ ಅಹ್ಮದ್ ಅವರು ಪ್ರಸ್ತುತ ಐಎಂಎ ಪ್ರಕರಣದಲ್ಲಿ ಸಿಲುಕುವ ಭೀತಿಯನ್ನು ಎದುರಿಸುತ್ತಿದ್ದಾರೆ. ಈ ಹಿಂದೆ ಐಎಂಎ ಪ್ರಕರಣದ ತನಿಖೆ ಮಾಡುತ್ತಿದ್ದ ಎಸ್‌ಐಟಿಯು ಜಮೀರ್ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಈಗ ಸಿಬಿಐ ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಈವರೆಗೆ ಜಮೀರ್ ಅವರಿಗೆ ಯಾವುದೇ ನೊಟೀಸ್ ಅನ್ನು ಅದು ನೀಡಿಲ್ಲ.












Click it and Unblock the Notifications