Pradeep Eshwar: ಇದು ನಿಮ್ಮಪ್ಪನ ಪ್ರೋಂಗ್ರಾಂ ಅಲ್ಲ, ಸುಮ್ನೆ ಕೂತ್ಕೋಬೇಕು: ಪ್ರದೀಪ್ ಈಶ್ವರ್ ಅವಾಜ್
ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ತಮ್ಮ ಡೈಲಾಗ್‌ಗಳಿಂದಲೇ ಫೇಮಸ್ ಆದವರು. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಗೆದ್ದಿರುವ ಅವರು ಇದೀಗ ವೇದಿಕೆಗಳಲ್ಲಿ ಅಬ್ಬರಿಸುವುದು ಕಾಮನ್. ಇದೇ ವರಸೆ ಮುಂದುವರಿಸಿಕೊಂಡು ಬಂದಿರುವ ಅವರು ರಾಜ್ಯ ಸರ್ಕಾರದ ಕಾರ್ಯಕ್ರಮದಲ್ಲೂ ಏಕವಚನದಲ್ಲೇ ಅವಾಜ್ ಹಾಕಿದ್ದಾರೆ. ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕೈವಾರ ತಾತಯ್ಯ ಯೋಗಿನಾರೇಯಣ ಯತೀಂದ್ರರ 299ನೇ ಜಯಂತಿ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಇದೇ ವೇದಿಕೆಯಲ್ಲಿ ಬಿಜೆಪಿ ಸಂಸದ ಪಿಸಿ ಮೋಹನ್ ಕೂಡ ಇದ್ದು, ಇಬ್ಬರ ನಡುವೆ ವಾಗ್ವಾದ ನಡೆದಿರುವ ವಿಡಿಯೋ ವೈರಲ್ ಆಗಿದೆ.
ಶುಕ್ರವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವು ರಾಜಕೀಯ ಕಿತ್ತಾಟದ ವೇದಿಕೆಯಾಗಿ ಬದಲಾಗಿದೆ. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಇಬ್ಬರೂ ಭಾಗಿಯಾಗಿದ್ದರು. ಈ ವೇಳೆ ಪ್ರದೀಪ್ ಈಶ್ವರ್ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ. ಇದರಿಂದ ಕೋಪಗೊಂಡ ಪ್ರದೀಪ್ ಈಶ್ವರ್ ಅವರು ವೇದಿಕೆಯಲ್ಲೇ ಬಿಜೆಪಿ ಕಾರ್ಯಕರ್ತರಿಗೆ ಏಕವಚನದಲ್ಲಿ ಅವಾಜ್ ಹಾಕಿದ್ದಾರೆ.

"ಇದೇನು ಬಿಜೆಪಿ ಕಾರ್ಯಕ್ರಮ ಅನ್ಕೊಂಡಿದ್ದೀರಾ? ಬಿಜೆಪಿ ಗುಣಗಾನ ಮಾಡೋರು ಬಾಯಿ ಮುಚ್ಕೊಂಡು ಇರ್ಬೇಕು. ರಾಜ್ಯದಲ್ಲಿರೋದು ಸಿದ್ದರಾಮಯ್ಯ ಸರ್ಕಾರ, ನಿಮ್ಮಪ್ಪನ್ ಸರ್ಕಾರ ಅಲ್ಲ, ಏಯ್...ಇದು ಸಿದ್ದರಾಮಯ್ಯ ಪ್ರೋಂಗ್ರಾಂ, ನಿಮ್ಮಪ್ಪನ ಪ್ರೋಂಗ್ರಾಂ ಅಲ್ಲ, ಸುಮ್ನೆ ಕೂತ್ಕೋಬೇಕು, ಇಲ್ಲ ಗೆಟ್ ಲಾಸ್ಟ್" ಎಂದು ಅವಾಜ್ ಹಾಕಿದ್ದಾರೆ.
ಈ ವೇಳೆ ಕಾರ್ಯಕ್ರಮದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಕೂಡ ಮಾತಿಗೆ ಮಾತು ಬೆಳೆಸಿದ್ದಾರೆ. ಕಾರ್ಯಕ್ರಮವು ರಣರಂಗವಾಗಿ ಬದಲಾಗಿದ್ದು, ಈ ವೇಳೆ ವೇದಿಕೆಯಲ್ಲಿ ಕುಳಿತಿದ್ದ ಬಿಜೆಪಿ ಸಂಸದ ಪಿ.ಸಿ.ಮೋಹನ್ ಕೂಡ ಮಧ್ಯಪ್ರವೇಶಿಸಿದ್ದಾರೆ. "ಪ್ರದೀಪ್ ಈಶ್ವರ್ ಅವ್ರೇ, ಒಂದು ನಿಮಿಷ ಇಲ್ಲಿ ಕೇಳಿ. ನಿಮಗೇ ತುಂಬಾ ಉತ್ಸಾಹವಿದೆ ಒಳ್ಳೇದು. ಆದ್ರೆ ನೀವು ಇಲ್ಲಿ ಬಂದು ಇದು ಸಿದ್ದರಾಮಯ್ಯನ ಪ್ರೋಂಗ್ರಾಂ ಅಂದ್ರೆ, ನಾನು ಬಿಜೆಪಿ ಸಂಸದನಾದ ನಾನು ಇಲ್ಲಿ ಇರಬೇಕಾ, ಬೇಡ್ವಾ ಹೇಳ್ರೀ?" ಎಂದು ಜೋರುದನಿಯಲ್ಲೇ ಕೇಳಿದ್ದಾರೆ.

ಬಳಿಕ ಕಾರ್ಯಕ್ರಮದಲ್ಲಿ ಸೇರಿದ್ದ ಎಲ್ಲರೂ ಪ್ರದೀಪ್ ಈಶ್ವರ್ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಕಾರ್ಯಕ್ರಮದ ಆಯೋಜಕರು ಕೂಡ ಮಧ್ಯಪ್ರವೇಶಿಸಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಸುಮ್ಮನಾಗದ ಪ್ರದೀಪ್ ಈಶ್ವರ್ ಅವರು ನೀವು ನಿಮ್ಮ ಪಕ್ಷವನ್ನು ಗುಣಗಾನ ಮಾಡಿದರೆ, ನಾವು ನಮ್ಮ ಪಕ್ಷವನ್ನು ಗುಣಗಾನ ಮಾಡಬೇಕಾಗುತ್ತೆ ಎಂದಿದ್ದಾರೆ.
ಒಟ್ಟಾರೆ ಕರ್ನಾಟಕ ಸರ್ಕಾರ ಆಯೋಜಿಸಿದ್ದ ಬಲಿಜ ಸಮುದಾಯದ ಕಾರ್ಯಕ್ರಮವು ರಾಜಕೀಯ ವಾಗ್ವಾದಕ್ಕೆ ವೇದಿಕೆಯಾಗಿದೆ. ರಾಜ್ಯದ ಅಭಿವೃದ್ಧಿಯಲ್ಲಿ ಬಿಜೆಪಿಯ ಕೊಡುಗೆಗಳನ್ನು ಪಿ.ಸಿ.ಮೋಹನ್ ಅವರು ಶ್ಲಾಘಿಸಿದಾಗ ಈ ಗಲಾಟೆ ಶುರುವಾಗಿದೆ ಎನ್ನಲಾಗಿದೆ. ಬಳಿಕ ಈ ಸರ್ಕಾರಿ ಕಾರ್ಯಕ್ರಮವು ಪಕ್ಷದ ಮುಖವಾಣಿಯಾಗಬಾರದು ಎಂದು ಶಾಸಕ ಪ್ರದೀಪ್ ಈಶ್ವರ್ ವಾದಿಸಿದ್ದಾರೆ. ವಾಗ್ವಾದದ ನಂತರ ಅವರು ಅಲ್ಲಿಂದ ಹೊರಟು ಹೋದರು ಎಂದು ತಿಳಿದುಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.












Click it and Unblock the Notifications