ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣ: ಶಾಸಕ ಗಣೇಶ್‌ಗೆ ಸಂಕಷ್ಟ?
ಬೆಂಗಳೂರು, ಜನವರಿ 21: ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ್‌ಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಹಲ್ಲೆಗೊಳಗಿರುವ ಆನಂದ್ ಸಿಂಗ್ ಅವರು ನಗರದ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಕುಟುಂಬ ಸದಸ್ಯರು ಈ ಬಗ್ಗೆ ಶಾಸಕ ಗಣೇಶ್ ವಿರುದ್ಧ ಪೊಲೀಸ್‌ಗೆ ದೂರು ನೀಡಲಿದ್ದಾರೆ.
ಈಗಲ್‌ಟನ್ ರೆಸಾರ್ಟ್‌ನಲ್ಲಿ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಹಾಗೂ ಹೊಸಪೇಟೆ ಶಾಸಕ ಆನಂದ್ ಸಿಂಗ್ ಅವರ ನಡುವೆ ವಾಗ್ವಾದ ನಡೆದು, ಶಾಸಕ ಗಣೇಶ್ ಅವರು ಆನಂದ್ ಸಿಂಗ್ ಮೇಲೆ ಬಾಟಲಿಯಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಆರಂಭದಲ್ಲಿ ಈ ಘಟನೆ ನಡೆದೇ ಇಲ್ಲವೆಂದು ಕಾಂಗ್ರೆಸ್ ನಾಯಕರು ಸುದ್ದಿಯನ್ನು ನಿರಾಕರಿಸಿದರಾದರೂ ಅಂತಿಮವಾಗಿ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆದಿರುವುದು ಖಚಿತವಾಯಿತು.
ಇದೀಗ ತಲೆಗೆ ಪೆಟ್ಟು ತಿಂದು ಹೊಲಿಗೆ ಹಾಕಿಸಿಕೊಂಡಿರುವ ಆನಂದ್ ಸಿಂಗ್ ಅವರು ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಕುಟುಂಬ ಸದಸ್ಯರು ಕಂಪ್ಲಿ ಶಾಸಕ ಗಣೇಶ್ ವಿರುದ್ಧ ದೂರು ದಾಖಲಿಸಲಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಗಣೇಶ್ ನಾನು ಹಲ್ಲೆ ಮಾಡಿಲ್ಲವೆಂದು ಹೇಳಿದ್ದಾರೆ. ಶಾಸಕ ಭೀಮಾನಾಯ್ಕ ಮತ್ತು ಆನಂದ್ ಸಿಂಗ್ ನಡುವೆ ಜಗಳ ನಡೆಯುತ್ತಿತ್ತು, ನಾನದನ್ನು ಬಿಡಿಸಲು ಹೋದೆ ಅಷ್ಟೆ ಎಂದು ಅವರು ಹೇಳಿದ್ದಾರೆ.












Click it and Unblock the Notifications