ಕಾಂಗ್ರೆಸ್ ಮುಖಂಡ 'ಪೆಟ್ರೋಲ್' ನಾರಾಯಣಸ್ವಾಮಿ ಪೊಲೀಸರಿಗೆ ಶರಣು
ಬೆಂಗಳೂರು, ಫೆಬ್ರವರಿ 23: ಪಾಲಿಕೆ ಕಚೇರಿಗೆ ನುಗ್ಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವುದಾಗಿ ಬೆದರಿಸಿದ್ದ ಕಾಂಗ್ರೆಸ್ ಮುಖಂಡ ನಾರಾಯಣಸ್ವಾಮಿ ಪೊಲೀಸರ ಮುಂದೆ ಶರಣಾಗಿದ್ದಾರೆ.
ಫೆಬ್ರವರಿ 16ರಂದು ಹೊರಮಾವು ಪಾಲಿಕೆ ಕಚೇರಿಗೆ ನುಗ್ಗಿ ಕಚೇರಿಯ ಪೀಠೋಪಕರಣ, ದಾಖಲೆಗಳು, ಬೀರುಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವುದಾಗಿ ಹೆದರಿಸಿದ್ದ ಕೆ.ಆರ್.ಪುರಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣಸ್ವಾಮಿಯನ್ನು ರಾಮಮೂರ್ತಿ ನಗರ ಪೊಲೀಸರ ಮುಂದೆ ಶರಣಾಗಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಫೆಬ್ರವರಿ 19ರಂದು ನಾರಾಯಣಸ್ವಾಮಿ ಮೇಲೆ ರಾಮಮೂರ್ತಿನಗರ ಪೊಲೀಸರು 6 ಕೇಸುಗಳನ್ನು ದಾಖಲಿಸಿಕೊಂಡಿದ್ದರು. ಅಂದಿನಿಂದ ನಾರಾಯಣಸ್ವಾಮಿ ಅವರು ತಲೆ ಮರೆಸಿಕೊಂಡಿದ್ದರು. ನಾರಾಯಣಸ್ವಾಮಿಯ ಪತ್ತೆಗಾಗಿ ನಾಲ್ಕು ತಂಡಗಳ ರಚನೆ ಮಾಡಿದ್ದರು.

ನಾರಾಯಣಸ್ವಾಮಿ ರಾಮಮೂರ್ತಿನಗರದ ಬಂಜಾರ ಬಡಾವಣೆಯಲ್ಲಿ ತಮ್ಮ ಸಂಬಂಧಿಗಳ ಮನೆಯಲ್ಲಿ ತಂಗಿದ್ದರು ಎನ್ನಲಾಗಿದೆ. ಇಂದು ವಿಚಾರಣೆ ಬಳಿಕ ನಾರಾಯಣಸ್ವಾಮಿಯನ್ನು ನ್ಯಾಯಾಲಯಕ್ಕೆ ಹಾಜರು ಮಾಡಲಾಗುವುದು ಎಂದು ರಾಮಮೂರ್ತಿನಗರ ಪೊಲೀಸ್ ಸಿದ್ದಂದಿ ಹೇಳಿದ್ದಾರೆ.
ನಾರಾಯಣಸ್ವಾಮಿ ಮೇಲೆ ಐಪಿಸಿ ಸೆಕ್ಷನ್ 353,427, 341,504, 506 ಅಡಿ ಕೇಸುಗಳನ್ನು ದಾಖಲಿಸಲಾಗಿದೆ.












Click it and Unblock the Notifications