'ಬಿಬಿಎಂಪಿಯಲ್ಲಿ ಮೈತ್ರಿ : ದೇವೇಗೌಡರಿಗೆ ಲಾಭ ಜಾಸ್ತಿ'
ಬೆಂಗಳೂರು, ಸೆಪ್ಟೆಂಬರ್, 03 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಗದ್ದುಗೆ ಏರಲು ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸಿದ್ಧವಾಗುತ್ತಿದೆ. ಕೆಲವು ಕಾಂಗ್ರೆಸ್ ನಾಯಕರು ಈ ಮೈತ್ರಿಕೂಟದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಈ ಮೈತ್ರಿಗೆ ಭವಿಷ್ಯವಿಲ್ಲ ಎಂದು ಬಿಜೆಪಿ ಹೇಳಿದೆ.
ಸೆ.11ರ ಶುಕ್ರವಾರ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಬುಧವಾರ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇಂದು ಕುಮಾರಸ್ವಾಮಿ ಮತ್ತು ಪರಮೇಶ್ವರ ಅವರು ಭೇಟಿಯಾಗುವ ಸಾಧ್ಯತೆ ಇದೆ.
ಬಿಜೆಪಿ ಚುನಾವಣೆ ಉಸ್ತುವಾರಿವಹಿಸಿಕೊಂಡಿದ್ದ ಆರ್.ಅಶೋಕ್ ಅವರು ಇಂದು ಬೆಂಗಳೂರನ್ನು ಪ್ರತಿನಿಧಿಸುವ ಶಾಸಕರ ಸಭೆ ಕರೆದಿದ್ದು, ಮೇಯರ್ ಆಯ್ಕೆ ಬಗ್ಗೆ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. 'ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಭವಿಷ್ಯವಿಲ್ಲ' ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. 'ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಹೊಡೆತ ಬೀಳಲಿದ್ದು, ದೇವೇಗೌಡರಿಗೆ ರಾಜಕೀಯ ಲಾಭ ಸಿಗಲಿದೆ. ಇಂತಹ ಅವಕಾಶವನ್ನು ಅವರು ಸರಿಯಾಗಿ ಬಳಸಿಕೊಳ್ಳುತ್ತಾರೆ' ಎಂದು ಕಾಗೋಡು ವಿಶ್ಲೇಷಿಸಿದ್ದಾರೆ. ಮೈತ್ರಿಯ ಬಗ್ಗೆ ಯಾರು ಏನು ಹೇಳಿದರೂ ನೋಡೋಣ ಬನ್ನಿ....

'ದೇವೇಗೌಡರಿಗೆ ರಾಜಕೀಯ ಲಾಭ ಹೆಚ್ಚು'
'ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡರೆ ದೇವೇಗೌಡರಿಗೆ ರಾಜಕೀಯ ಲಾಭ ಹೆಚ್ಚು. ದೇವೇಗೌಡರನ್ನು ಬೈಯುತ್ತಿದ್ದವರಿಗೆ ಅವರ ಕಾಲು ಹಿಡಿಯುವ ಪರಿಸ್ಥಿತಿ ಬಂದಿದೆ. ಇಂತಹ ಸಂದರ್ಭವನ್ನು ಚೆನ್ನಾಗಿ ಬಳಸಿಕೊಳ್ಳುವ ಕಲೆ ಅವರಿಗೆ ಗೊತ್ತು. ಪಾಲಿಕೆ ಆಡಳಿತದಲ್ಲಿ ಮೈತ್ರಿ ಮಾಡಿಕೊಳ್ಳುವ ಅನಿವಾರ್ಯತೆ ಕಾಂಗ್ರೆಸ್ ಪಕ್ಷಕ್ಕೆ ಇರಲಿಲ್ಲ' ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟಿದ್ದಾರೆ.

'ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಭವಿಷ್ಯವಿಲ್ಲ'
'ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸುವುದು ಅಚ್ಚರಿ ತಂದಿದೆ. ಈ ಮೈತ್ರಿಕೂಟಕ್ಕೆ ಭವಿಷ್ಯವಿಲ್ಲ. ಮೈತ್ರಿ ಬಹಳ ದಿನ ಉಳಿಯುವುದಿಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. 'ಬೆಂಗಳೂರಿನ ಜನರು ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದ್ದಾರೆ. ಆದರೆ, ಅಧಿಕಾರ ಪಡೆಯುವುದನ್ನು ಪ್ರತಿಷ್ಠೆಯಾಗಿ ಮಾಡಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಪ್ರಯತ್ನ ನಡೆಸಿದ್ದಾರೆ' ಎಂದು ಈಶ್ವರಪ್ಪ ಗುಡುಗಿದ್ದಾರೆ.

'ಬಿಜೆಪಿಯವ್ರು ಟೀಕಿಸಿದ್ರಲ್ಲ ಈಗೇನಾಗುತ್ತೇ ನೋಡಿ'
'ಬಿಜೆಪಿಯವರು ಜೆಡಿಎಸ್ ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳ ಪಕ್ಷ ಎಂದು ನಮ್ಮನ್ನು ಟೀಕೆ ಮಾಡಿದ್ರು. ಆದರೆ, ನಾವು ಬಿಬಿಎಂಪಿ ಫಲಿತಾಂಶದ ಬಳಿಕವೂ ಗಂಭೀರವಾಗಿದ್ದೆವು. ಈಗೇನಾಗುತ್ತಿದೆ ನೋಡಿ' ಎಂದು ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಹೇಳಿದ್ದಾರೆ. 'ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲವೇ?, ಅವರ ಪಕ್ಷದಲ್ಲಿ ಅಪ್ಪ-ಮಕ್ಕಳು ರಾಜಕಾರಣ ಮಾಡುತ್ತಿಲ್ಲವೇ?' ಎಂದು ರೇವಣ್ಣ ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್ ಪರ ಮತ ಹಾಕುವೆ ರಘು ಆಚಾರ್
'ಬಿಬಿಎಂಪಿ ಮೇಯರ್ ಆಯ್ಕೆ ಚುನಾವಣೆಯಲ್ಲಿ ಮತದಾನ ಮಾಡಲು ನನಗೆ ಅವಕಾಶವಿದೆ. ನಾನು ಕಾಂಗ್ರೆಸ್ ಪಕ್ಷದ ಪರವಾಗಿ ಮತದಾನ ಮಾಡುತ್ತೇನೆ' ಎಂದು ವಿಧಾನಪರಿಷತ್ ಸದಸ್ಯ ರಘು ಆಚಾರ್ ಹೇಳಿದ್ದಾರೆ. 'ಪಾಲಿಕೆ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶವಿರುವುದು ನನಗೆ ತಿಳಿದಿರಲಿಲ್ಲ. ಸಿಎಂ ಈ ಕುರಿತು ಮಾಹಿತಿ ನೀಡಿದರು. ನಾನು ಕಾಂಗ್ರೆಸ್‌ಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದೇನೆ. ಆದ್ದರಿಂದ ಕಾಂಗ್ರೆಸ್ ಪರ ಮತದಾನ ಮಾಡುತ್ತೇನೆ' ಎಂದು ತಿಳಿಸಿದ್ದಾರೆ.

'ಇದು ಅಸಂಬದ್ಧ ವಿವಾಹವಲ್ಲ'
'ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಸಂಬದ್ಧ ವಿವಾಹವಲ್ಲ. ಎರಡೂ ಜಾತ್ಯಾತೀತ ಪಕ್ಷಗಳು. ಕೋಮುವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರೆ ಮಾತ್ರ ಅಸಂಬದ್ಧ ವಿವಾಹವಾಗುತ್ತಿತ್ತು' ಎಂದು ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.












Click it and Unblock the Notifications