Karnataka CM: ಮುಖ್ಯಮಂತ್ರಿ ಆಯ್ಕೆ ಹೊಣೆ ಮಲ್ಲಿಕಾರ್ಜುನ ಖರ್ಗೆ ಹೆಗಲಿಗೆ
ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಲಾಗಿದೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಸಿಎಂ ಪಟ್ಟಕ್ಕೆ ರೇಸ್ ನಡೆಯುತ್ತಿದೆ. ಈ ಬೆನ್ನಲ್ಲೇ ರಣದೀಪ್ ಸುರ್ಜೇವಾಲ ಇಬ್ಬರ ಜೊತೆ ಪ್ರತ್ಯೇಕ ಸಭೆ ನಡೆಸಿದ್ದು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.
ಪ್ರತ್ಯೇಕ ಸಭೆಯಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ಇಬ್ಬರೂ ಸಿಎಂ ಖುರ್ಚಿಗೆ ಬಿಗಿ ಪಟ್ಟು ಹಿಡಿದಿದ್ದಾರೆ. ಡಿಕೆ ಶಿವಕುಮಾರ್ ಈ ಬಾರಿ ಯಾವುದೇ ಸಂಧಾನಕ್ಕೂ ಒಪ್ಪಿಲ್ಲ ಎಂದು ಹೇಳಲಾಗುತ್ತಿದೆ. ಸಿಎಂ ಆಗಿ ಇಬ್ಬರು ತಲಾ 2.5 ವರ್ಷ ಅವಧಿಗೆ ಸಿಎಂ ಆಗುವ ಸೂತ್ರಕ್ಕೂ ಡಿಕೆಶಿ ವಿರೋಧ ವ್ಯಕ್ತಪಡಿಸಿದ್ದಾರೆ. ತಾನೇ ಪೂರ್ಣಾವಧಿಗೆ ಸಿಎಂ ಆಗಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ.

ಈ ಬಾರಿ ಸಿಎಂ ಆಯ್ಕೆ ಮಾಡುವ ಹೊಣೆಯನ್ನು ಹೈಕಮಾಂಡ್‌ಗೆ ವಹಿಸಲಿ ಎಂದು ಒತ್ತಾಯಿಸಿದ್ದಾರೆ. ಎಲ್ಲಾ ಶಾಸಕರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಮುಂದಿನ ಸಿಎಂ ಆಯ್ಕೆ ಹೊಣೆ ಈ ಮಲ್ಲಿಕಾರ್ಜುನ ಖರ್ಗೆ ಅವರ ಹೆಗಲಿಗೆ ಬಿದ್ದಿದೆ. ಹೈಕಮಾಂಡ್ ಅಳೆದು ತೂಗಿ ಮುಂದಿನ ನಿರ್ಧಾರ ಮಾಡಲಿದೆ.
ಇನ್ನು ಸಿದ್ದರಾಮಯ್ಯ ಶಾಸಕರ ಅಭಿಪ್ರಾಯ ಪಡೆದು ಸಿಎಂ ಆಯ್ಕೆ ಮಾಡಲಿ ಎನ್ನುವ ವಾದವನ್ನು ಮುಂದಿಟ್ಟಿದ್ದಾರೆ. ಒಂದು ವೇಳೆ ಶಾಸಕರ ಅಭಿಪ್ರಾಯ ಸಂಗ್ರಹಿಸಿದರೆ ಸಿದ್ದರಾಮಯ್ಯ ಕೈ ಮೇಲಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಡಿಕೆಶಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ಇಷ್ಟು ದಿನ ಪಕ್ಷವನ್ನು ಅಧಿಕಾರಕ್ಕೆ ಬರಲು ಒಗ್ಗಟ್ಟಾಗಿ ಕೆಲಸ ಮಾಡಿದ್ದೇವೆ, ಈಗ ಅಧಿಕಾರಕ್ಕಾಗಿ ಬಣಗಳನ್ನು ಮಾಡಿಕೊಳ್ಳುವುದು ಬೇಡ, ಒಗ್ಗಟ್ಟಿನಲ್ಲಿ ಮುಂದೆ ಸಾಗೋಣ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಸುರ್ಜೆವಾಲ ಮಾತಿಗೆ ಡಿಕೆಶಿ ಮತ್ತು ಸಿದ್ದರಾಮಯ್ಯ ಒಪ್ಪಿಕೊಂಡಿದ್ದು, ಹೈಕಮಾಂಡ್ ನಿರ್ಧಾರಕ್ಕೆ ಬದ್ದರಾಗಿರುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಗೆದ್ದ ಅಭ್ಯರ್ಥಿಗಳನ್ನು ಅಭಿನಂದಿಸಿದ ಸುರ್ಜೆವಾಲಾ
ಶಾಸಕಾಂಗ ಸಭೆಯಲ್ಲಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಶಾಸಕರನ್ನು ಅಭಿನಂದಿಸಿದರು. ಒಗ್ಗಟ್ಟಿನ ಹೋರಾಟದಿಂದ ಗೆಲುವು ಪಡೆದಿದ್ದೇವೆ. ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನತೆಗೆ ನೀಡಿರುವ ಗ್ಯಾರಂಟಿಗಳನ್ನು ಮನೆ ಮನೆ ಸರಿಯಾಗಿ ತಲುಪಿಸಿದ್ದೀರಿ ಎಲ್ಲರಿಗೂ ಅಭಿನಂದನೆಗಳು ಎಂದು ಹೇಳಿದರು.












Click it and Unblock the Notifications