ಡಿಕೆ ಶಿವಕುಮಾರ್ ಸಹನೆಯ ಕಟ್ಟೆ ಒಡೆಯುವುದೇ ಮುಖ್ಯ: ಬಸವರಾಜ ಬೊಮ್ಮಾಯಿ
ಬೆಂಗಳೂರು, ಜನವರಿ 08: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಭದ್ರತೆ, ಒಳ ಬೇಗುದಿ ಪ್ರದರ್ಶನಗೊಳ್ಳುತ್ತಲೇ ಇದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹನೆಯ ಕಟ್ಟೆ ಯಾವಾಗ ಒಡೆಯುತ್ತದೆ ಎನ್ನುವುದು ಪ್ರಶ್ನೆಯಾಗಿದೆ. ಅದಕ್ಕೆ ಕಾಲ ಸನ್ನಿಹಿತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳೀದರು.
ಬುಧವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಅಭದ್ರತೆ. ಒಳ ಬೇಗುದಿ ಆರಂಭದಿಂದಲೂ ಇದೆ. ಇದು ನಿರೀಕ್ಷಿತ ಬೆಳವಣಿಗೆ ಇದರಲ್ಲಿ ಬಹಳ ಮುಖ್ಯ ವಿಚಾರ ಡಿಕೆಶಿವಕುಮಾರ್ ಅವರ ಸಹನೆ ಅವರು ತಮ್ಮ ವ್ಯಕ್ತಿತ್ವಕ್ಕೆ ವಿರುದ್ಧವಾಗಿ ಬಹಳ ಸಹನೆ ಪ್ರದರ್ಶನ ಮಾಡುತ್ತಿದ್ದಾರೆ. ಅದು ಅವರ ಮುತ್ಸದ್ಧಿತನವೋ? ಹೈಕಮಾಂಡ್ ಸೂಚನೆಯೋ ನೋಡಬೇಕು ಎಂದು ಆಡಳಿತ ಪಕ್ಷದ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಡಿ.ಕೆ.ಶಿವಕುಮಾರ್ ಅವರ ಸಹನೆ ಕಟ್ಟೆ ಯಾವಾಗ ಒಡೆಯುತ್ತದೆ ಎನ್ನುವುದು ಮುಖ್ಯವಾಗುತ್ತದೆ. ಅದರ ಪ್ರಕ್ರಿಯೆ ಆರಂಭವಾಗಿದ್ದು, ಕಾಲ ಯಾವಾಗ ಬರುತ್ತದೆ ಎಂದು ನೋಡಬೇಕು ಎಂದು ಕುಟುಕಿದರು.
ಸರ್ಕಾರ ಎಲ್ಲ ಹಂತಗಳಲ್ಲಿ ಭ್ರಷ್ಟಾಚಾರ: ಆರೋಪ
ಕಾಂಗ್ರೆಸ್ ಮೇಲಿನ ಕಮೀಷನ್ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಸರ್ಕಾರ ಎಲ್ಲದರಲ್ಲಿ ಕಮೀಷನ್ ದಂಧೆ, ಭ್ರಷ್ಟಾಚಾರ ನಡೆಸುತ್ತಿದೆ. ಇದರಿಂದ ಜನ ಹೈರಾಣಾಗಿದ್ದಾರೆ. ಅಬಕಾರಿ ಗುತ್ತಿಗೆದಾರರು, ಪಿಡಬ್ಲ್ಯುಡಿ, ನೀರಾವರಿ ಇಲಾಖೆಯ ಗುತ್ತಿಗೆದಾರರು ಅನುಭವಿಸುತ್ತಿದ್ದಾರೆ. ಜನ ಸಾಮಾನ್ಯರು ರೋಸಿ ಹೋಗಿದ್ದಾರೆ. ಮಧ್ಯಮ ವರ್ಗದವರು ಹೈರಾಣಾಗಿದ್ದಾರೆ. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಒಂದು ಸೈಟ್ ತೆಗೆದುಕೊಳ್ಳಲಾಗದ ವಾತಾವರಣವನ್ನು ಸರ್ಕಾರ ನಿರ್ಮಾಣ ಮಾಡಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಬೋರ್ ವೆಲ್ ಗಳಿಗೂ ಕಮೀಷನ್ ಪಡೆಯುತ್ತಿದ್ದಾರೆ. ಭ್ರಷ್ಟಾಚಾರ ಪದೇ ಪದೇ ಮುನ್ನೆಲೆಗೆ ಬರುತ್ತಿದೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರಾಕರಿಸಿರಬಹುದು, ಅವರಿಗೆ ಹಿಡಿತ ಕೈ ತಪ್ಪಿರಬಹುದು, ಅವರೇ ಭಾಗಿಯಾಗಿರಬಹುದು ಅಥವಾ ಅದರ ಬಗ್ಗೆ ಮಾತನಾಡಿದರೆ ಅಧಿಕಾರಕ್ಕೆ ಧಕ್ಕೆ ಬರುತ್ತದೆ ಎನ್ನುವ ಭಾವನೆ ಮೂಡಿದೆ.
ರಾಜ್ಯ ಸರ್ಕಾರದಲ್ಲಿ ಒಂದೊಂದು ಇಲಾಖೆಯಲ್ಲಿ ಒಂದೊಂದು ರೀತಿಯ ಪರ್ಸೆಂಟ್ ಕಮೀಷನ್ ಇದೆ. ಇಷ್ಟೇ ಇದೆ ಅಂತ ಹೇಳಲು ಆಗುವುದಿಲ್ಲ. ಆದರೆ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು ಭ್ರಷ್ಟಾಚಾರ ಮಿತಿ ಮೀರಿದ್ದಾಗೆ ತಿಳಿಸಿದ್ದಾರೆ ಎಂದರು.
ಕಾಂಗ್ರೆಸ್ ನಲ್ಲಿ ಡಿನ್ನರ್ ಮೀಟಿಂಗ್ ಗಳು ಅವರ ಆಂತರಿಕ ವಿಚಾರ, ಈ ಬಗ್ಗೆ ಹೆಚ್ಚು ವಿಶ್ಲೇಷಣೆ ಮಾಡುವುದಿಲ್ಲ ಎಂದು ಡಿನ್ನರ್ ಮೀಟಿಂಗ್ ಕುರಿತು ಪ್ರತಿಕ್ರಿಯಿಸಲು ಬೊಮ್ಮಾಯಿ ಅವರು ನಿರಾಕರಿಸಿದರು.
ಬಿಜೆಪಿ ಭೋಜನ ಕೂಟ: ಗೊಂದಲಕ್ಕೆ ತೆರೆ
ಬಿಜೆಪಿಯಲ್ಲೂ ಭೋಜನ ಕೂಟ ನಡೆಯುತ್ತಿದಿಯಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ಆಗಾಗ ಒಟ್ಟಿಗೆ ಊಟ ಮಾಡುತ್ತೇವೆ. ಅದರಲ್ಲಿ ಮಹತ್ವ ಏನು ಇಲ್ಲ. ರಾಜ್ಯ ಬಿಜೆಪಿಯಲ್ಲಿನ ಗೊಂದಲಗಳ ಬಗ್ಗೆ ಪಕ್ಷದ ಹೈಕಮಾಂಡ್ ಗಮನ ಹರಿಸಿದೆ. ಈ ತಿಂಗಳಲ್ಲಿ ಸರಿ ಹೋಗಲಿದೆ. ಒಳ್ಳೆಯ ರೀತಿಯಲ್ಲಿ ಎಲ್ಲವೂ ಬಗೆಹರಿಯುವ ವಾತಾವರಣವನ್ನು ಹೈಕಮಾಂಡ್ ನಿರ್ಮಾನಿಸಲಿದೆ ಎಂದು ಬಿಜೆಪಿ ಆಂತರಿಕ ವಿಷಯಗಳ ಪ್ರಶ್ನೆ, ಗೊಂದಲಗಳಿಗೆ ಅವರು ತೆರೆ ಎಳೆದರು.












Click it and Unblock the Notifications