ಬಿಜೆಪಿ ಹಗರಣಗಳ ತನಿಖೆ: ಬ್ಲಾಕ್ ಮೇಲ್ ಗಾಗಿ ಎಸ್ಐಟಿ ರಚಿಸಿದ ಕಾಂಗ್ರೆಸ್: ಗಂಭೀರ ಆರೋಪ
ಬೆಂಗಳೂರು, ಜಲೈ 04: ರಾಜ್ಯ ಕಾಂಗ್ರೆಸ್ ಸರ್ಕಾರ ಈ ಹಿಂದಿನ ಬಿಜೆಪಿ ಸರ್ಕಾರದ ಸಾವಿರಾರು ಕೋಟಿ ಭ್ರಷ್ಟಾಚಾರ ಹಗರಣಗಳ ತನಿಖೆಗಾಗಿ ವಿಶೇಷ ತನಿಖಾ ತಂಡಗಳನ್ನು ನೇಮಿಸಿರುವುದು ಕೇವಲ ವಿರೋಧಪಕ್ಷಗಳ ಬಾಯಿ ಮುಚ್ಚಿಸಲು. ಅವಗಳನ್ನು ಬ್ಲಾಕ್ ಮೇಲ್ ತಂತ್ರಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆಯೇ ಹೆಚ್ಚಾಗಿದೆ ಎಂದು ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಮೇಲೆ ಗಂಭೀರ ಆರೋಪ ಮಾಡಿದೆ.
ಆಮ್ ಆದ್ಮಿ ಪಕ್ಷ (AAP) ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಎಲ್ಲ ಗ್ಯಾರೆಂಟಿಗಳನ್ನು ಈಡೇರಿಸಲು ಭ್ರಷ್ಟಮುಕ್ತ ಆಡಳಿತದಿಂದ ಮಾತ್ರ ಸಾಧ್ಯ. ಭ್ರಷ್ಟಮುಕ್ತ ಆಡಳಿತ ಇಚ್ಛೆ ಇದ್ದಲ್ಲಿ ಸರ್ವೋಚ್ಚ ಹಾಗೂ ಉಚ್ಚ ನ್ಯಾಯಾಲಯಗಳ ಹಾಲಿ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ಆಯೋಗಗಳನ್ನು ರಚಿಸಬೇಕು.

ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಧಮ್ಮು, ತಾಕತ್ತು ಇದ್ದರೆ ಬಿಜೆಪಿ ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ನ್ಯಾಯಾಂಗ ತನಿಖೆ ಮಾಡಿಸಲಿ ಎಂದು ಅವರು ಒತ್ತಾಯಿಸಿದರು.
ಬಿಟ್ ಕಾಯಿನ್, 40 ಪರ್ಸೆಂಟ್, ಕೊರೊನಾ ಕಾಲದಲ್ಲಿ ದಿಂಬು ಹಾಸಿಗೆ ಖರೀದಿ, ನೇಮಕಾತಿ ಹಾಗೂ ವರ್ಗಾವಣೆ, ಡಿ- ನೋಟಿಫಿಕೇಶನ್ ಹಗರಣಗಳ ತನಿಖೆಗಾಗಿ ಸರ್ಕಾರದ ಅಡಿಯಲ್ಲಿನ ಪೊಲೀಸ್ ಅಧಿಕಾರಿಗಳಿಂದ ಯಾವುದೇ ನ್ಯಾಯ ಸಿಗುವುದಿಲ್ಲ. ಇವರು ತಮ್ಮದೇ ಇಲಾಖೆಯ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸುವ ಬದ್ಧತೆ ಎಂದಿಗೂ ಸಾಧ್ಯವಿರುವುದಿಲ್ಲ ಎಂದರು.
ರಾಜ್ಯ ಸರ್ಕಾರದ್ದು ತಿಪ್ಪೆ ಸಾರಿಸುವ ಕ್ರಮ
ಸರ್ಕಾರದ ವಿಶೇಷ ತನಿಖಾ ತಂಡ (SIT) ತಂಡ ರಚನೆಯ ಈ ಕ್ರಮ ರಾಜ್ಯದ ಜನತೆಯ ಸಾವಿರಾರು ಕೋಟಿ ತೆರಿಗೆ ಹಣವನ್ನು ಲೂಟಿ ಮಾಡಿದ ಹಗರಣಗಳ ಮೇಲೆ ತಿಪ್ಪೇ ಸಾರಿಸುವ ಕೆಲಸ ಮಾಡಿದಂತಾಗುತ್ತದೆ. ಇದು ಪ್ರಕರಣ ಮುಚ್ಚಿ ಹಾಕುವ ಪ್ರಕ್ರಿಯೆ ಹೊರತು ಬೇರೇನೂ ಅಲ್ಲ.

ಇತಂಹ ಕ್ರಮಗಳಿಂದ ವಿಪಕ್ಷಗಳ ಬಾಯಿ ಮುಚ್ಚಿಸಬಹುದೇ ಹೊರತು, ರಾಜ್ಯದ ಜನತೆಗೆ ಯಾವುದೇ ನ್ಯಾಯವನ್ನು ಕೊಡಿಸಲು ಸಾಧ್ಯವಿಲ್ಲ. ಈ ಹಿಂದಿನ ಅನೇಕ ಎಸಐಟಿ ತನಿಖೆಗಳು ಈಗಾಗಲೇ ಹಳ್ಳ ಹಿಡಿದಿವೆ ಎಂದು ಅವರು ಸರ್ಕಾರದ ವಿರುದ್ಧ ಕಿಡಿಕಾರಿದರು.
ಬಿಜೆಪಿ 40 ಪರ್ಸೆಂಟ್ ಕಮಿಷನ್ ಭ್ರಷ್ಟಾಚಾರ ಪ್ರಕರಣದ ದಾಖಲೆಗಳನ್ನು ಕೇವಲ ನ್ಯಾಯಾಂಗ ಆಯೋಗದ ಮುಂದೆ ಮಾತ್ರ ನಮ್ಮಲ್ಲಿರುವ ದಾಖಲೆ ಹಾಗೂ ಸಾಕ್ಷಿಗಳನ್ನು ಒದಗಿಸುತ್ತೇವೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಅನೇಕ ಬಾರಿ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇದು ಗೊತ್ತಿದೆ. ಇವರಿಗೆ ರಾಜ್ಯವನ್ನು ಭ್ರಷ್ಟಮುಕ್ತ ಮಾಡಲು ನಿಜಕ್ಕೂ ಮನಸ್ಸಿದ್ದಲ್ಲಿ ಈ ಕೂಡಲೇ ಹೊಂದಾಣಿಕೆ (ಅಡ್ಜೆಸ್ಟ್ಮೆಂಟ್) ರಾಜಕಾರಣ ಬದಿಗೊತ್ತಿ, ಎಸ್‌ಐಟಿ ಬದಲಾಗಿ ನ್ಯಾಯಾಂಗ ಆಯೋಗಗಳನ್ನು ರಚಿಸಬೇಕು. ಅವರಿಂದ ಭ್ರಷ್ಟಾಚಾರ ಪ್ರಕರಣಗಳನ್ನು ತನಿಖೆ ಮಾಡಿಸಬೇಕು ಎಂದು ಪೃಥ್ವಿ ರೆಡ್ಡಿ ಸವಾಲು ಹಾಕಿದರು.
ಬಿಜೆಪಿ ಭ್ರಷ್ಟಾಚಾರವನ್ನು ಕಾಂಗ್ರೆಸ್ ಬಯಲು ಮಾಡುತ್ತದೆಯೇ?
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು ಎರಡು ತಿಂಗಳ ಕಳೆಯುತ್ತಾ ಬಂದಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ವಿಪಕ್ಷ ಸ್ಥಾನದಲ್ಲಿದ್ದ ಕಾಂಗ್ರೆಸ ನಾಯಕರು, ಬಿಜೆಪಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದರು. ಬಿಟ್ ಕಾಯಿನ್, ಚಾಮರಾಜನಗರ ಆಕ್ಸಿಜನ್ ದರುಂತ, 40ಪರ್ಸೆಂಟ್ ಸರ್ಕಾರ, ಜನರ ತೆರಿಗೆ ಹಣ ಲೂಟಿ ಹೊಡೆದಿದೆ ಎಂದೆಲ್ಲ ಹೇಳಿತ್ತು. ಇದೀಗ ಆ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಎಸ್‌ಐಟಿ ತಂಡ ರಚಿಸುತ್ತಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ, ಸಚಿವ ಡಾ.ಜಿ.ಪರಮೇಶ್ವರ ಸಹ ಹೇಳಿದ್ದರು.
ಇದೀಗ ಎಸ್‌ಐಟಿ ರಚನೆಗೆ ವಿರೋಧ ವ್ಯಕ್ತವಾಗುತ್ತಿದೆ. ಎಸ್‌ಐಟಿ ರಚನೆ ಮೂಲಕ ಯಾವ ಪ್ರಕರಣ ಹೊರ ಬರದಂತೆ ಕಾಂಗ್ರೆಸ್ ನೋಡಿಕೊಳ್ಳಲು, ವಿಪಕ್ಷದವರನ್ನು ಬೆದರಿಸಲು ಮಾತ್ರವೇ ಈ ತನಿಖಾ ತಂಡ ಬಳಸಿಕೊಳ್ಳಲಿದೆ. ಆ ಮೂಲಕ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.












Click it and Unblock the Notifications