ಕಾಂಗ್ರೆಸ್‌ನ HM ರೇವಣ್ಣ ವಿರುದ್ಧ ಮಹಿಳೆ ದೂರು, ಕುಮಾರಕೃಪಾ ಗೆಸ್ಟ್‌ಹೌಸ್‌ನಲ್ಲಿ ನಡೆದಿದ್ದೇನು?
ಕಾಂಗ್ರೆಸ್‌ನ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಹೆಚ್.ಎಂ.ರೇವಣ್ಣ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ತಮ್ಮದೇ ಪಕ್ಷದ ಮಹಿಳೆಯೊಬ್ಬರು ರೇವಣ್ಣ ವಿರುದ್ಧ ಶಾಕಿಂಗ್ ಆರೋಪಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು ರೇವಣ್ಣ ಅವರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕುಮಾರಕೃಪಾ ಅತಿಥಿಗೃಹದಲ್ಲಿ ನಡೆದ ಘಟನೆ ಸಂಬಂಧ ಮಹಿಳೆ ರೇವಣ್ಣ ವಿರುದ್ಧ ಕೇಸ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ರೇವಣ್ಣ ಅವರನ್ನು ಭೇಟಿಯಾಗಲು ಈ ಮಹಿಳೆಯು ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹಕ್ಕೆ ತೆರಳಿದ್ದರು. ಈ ವೇಳೆ ರೇವಣ್ಣ ಅವರು ನನ್ನ ಮೇಲೆ ಹಲ್ಲೆ ಯತ್ನ ನಡೆಸಿದ್ದಲ್ಲದೆ, ಜಾತಿ ನಿಂದನೆಯೂ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತೆ ನಂದಿನಿ ನಾಗರಾಜ್ ಎಂಬುವವರು ರೇವಣ್ಣ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ತೆರಳಿ ದೂರು ಕೊಟ್ಟಿದ್ದಾರೆ. ಮಹಿಳೆ ಆರೋಪದ ಮೇರೆಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಈ ಘಟನೆ ಸಂಬಂಧ ಸಾಕ್ಷಿ ಒದಗಿಸುವಂತೆ ಕೇಳಿದ್ದಾರೆ ಎನ್ನಲಾಗಿದೆ.

ಕುಮಾರಕೃಪಾ ಗೆಸ್ಟ್ ಹೌಸ್‌ನಲ್ಲಿ ಸೋಮವಾರ ಮಧ್ಯಾಹ್ನ ರೇವಣ್ಣ ಅವರನ್ನು ಭೇಟಿ ಮಾಡಲು ನಾನು ಅಲ್ಲಿಗೆ ತೆರಳಿದ್ದೆ. ಆಗ ಅವರು ಊಟ ಮಾಡುತ್ತಿದ್ದರು. ಈ ವೇಳೆ ಅವರು ನನ್ನ ಮೊಬೈಲ್ ಕಿತ್ತುಕೊಂಡು ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ಅಲ್ಲದೆ ನಾನೊಬ್ಬ ದಲಿತ ಸಮುದಾಯದ ಹೆಣ್ಣು ಮಗಳು. ಆದರೂ ನನ್ನನ್ನು ಜಾತಿ ನಿಂದನೆ ಮಾಡಿ, ಕೊನೆಗೆ ಹಲ್ಲೆ ಯತ್ನ ನಡೆಸಿದರು ಎಂದು ಮಹಿಳೆ ಆರೋಪಿಸಿದ್ದಾರೆ. ರೇವಣ್ಣ ಅವರು ಈ ಮಹಿಳೆಯ ಮೊಬೈಲ್ ಕಸಿಯುವ ವಿಡಿಯೋ ಕೂಡ ವೈರಲ್ ಆಗಿದೆ.
ಈ ಘಟನೆಯಲ್ಲಿ ಮಹಿಳೆಗೆ ತುಸು ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮಹಿಳೆ, ಮಹಿಳೆಯರಿಗಾಗಿ ಕಾಂಗ್ರೆಸ್ ಜಾರಿ ಮಾಡಿರುವ ಗ್ಯಾರಂಟಿ ಅನುಷ್ಠಾನ ಸಮಿತಿಗೆ ಇವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಆದರೆ, ಇವರೇ ಮಹಿಳೆಯನ್ನು ನಿಂದಿಸಿ, ಹಲ್ಲೆಯೂ ಮಾಡ್ತಾರೆ ಎಂದು ಆರೋಪ ಮಾಡಿದ್ದಾರೆ.
ಅವರನ್ನು ಯಾವಾಗ ಭೇಟಿಯಾಗಲು ಹೋದಾಗಲೂ ಇದೇ ರೀತಿ ಕೋಪದಿಂದ ನಡೆದುಕೊಳ್ತಾರೆ. ಅವರು ರಾಜಕಾರಣಿಯಾಗಲು ನಾಲಾಯಕ್. ಒಬ್ಬ ದಲಿತ ಹೆಣ್ಣುಮಗಳಾದ ನನ್ನ ಮೇಲೆ ಅವರು ದೌರ್ಜನ್ಯ ಮಾಡಿರುವ ಅವರು ಮಹಿಳಾ ನಿಂದಕ. ನಾನು ಕೂಡ ಕಾಂಗ್ರೆಸ್ ಕಾರ್ಯಕರ್ತೆ. ನನ್ನ ಮೇಲೆಯೇ ಈ ರೀತಿಯ ಹಲ್ಲೆಯಾಗುತ್ತೆ ಎಂದರೆ ಸಾಮಾನ್ಯ ಹೆಣ್ಣುಮಕ್ಕಳ ಕಥೆಯೇನು? ಎಂದು ಪ್ರಶ್ನಿಸಿದ್ದಾರೆ.

ಹಲ್ಲೆ ಮಾಡಿದ್ದು ಸುಳ್ಳು ಎಂದ ರೇವಣ್ಣ:
ಈ ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಹೆಚ್.ಎಂ.ರೇವಣ್ಣ ಅವರು, ಆ ಮಹಿಳೆ ಯಾರೂ ಅನ್ನೋದೆ ನನಗೆ ಗೊತ್ತಿಲ್ಲ. ಅಲ್ಲಿಗೆ ಬಂದು ನನಗೆ ಕಿರಿಕಿರಿ ಮಾಡಿದ್ದಲ್ಲದೆ ಗಲಾಟೆ ಮಾಡುತ್ತಿದ್ದರು, ರಾಹುಲ್ ಗಾಂಧಿ ಎಂದು ಕಿರುಚುತ್ತಿದ್ದರು. ಆಕೆ ಮೊಬೈಲ್‌ನಲ್ಲಿ ವಿಡಿಯೋ ಮಾಡಲು ಮುಂದಾದಾಗ ನಾನು ವಿಡಿಯೋ ಮಾಡೋದು ಬೇಡ ಎಂದು ಮೊಬೈಲ್ ಅನ್ನು ತಳ್ಳಿದ್ದು ನಿಜ. ಆದರೆ, ಹಲ್ಲೆ ಯತ್ನ, ಹೊಡೆದಿದ್ದು ಎಂದು ಹೇಳಿರುವುದು ಸರಿಯಲ್ಲ. ಆ ಮಹಿಳೆ ಮೇಲೆ ನಾವು ಯಾರೂ ಹಲ್ಲೆ ಮಾಡಿಲ್ಲ ಎಂದು ರೇವಣ್ಣ ಹೇಳಿದ್ದಾರೆ.












Click it and Unblock the Notifications