ಮಂಗಳೂರಿನಲ್ಲಿ ಅಂಧ ವಿದ್ಯಾರ್ಥಿಗಳಿಗೆ ಅವಮಾನ
ಮಂಗಳೂರು, ಮೇ.30: ಎಸ್‌ಎಸ್‌ಎಲ್‌ಸಿಯಲ್ಲಿ ಉನ್ನತ ಅಂಕಗಳಿಸಿ ತೇರ್ಗಡೆಯಾದ ನಾಲ್ವರು ಅಂಧ ವಿದ್ಯಾರ್ಥಿಗಳಿಗೆ ಮಂಗಳೂರಿನ ಎರಡು ಪಿಯು ಕಾಲೇಜುಗಳು ಪ್ರವೇಶ ನೀಡದೆ ಅವಮಾನ ಮಾಡಿದೆ.
ಮಂಗಳೂರಿನ ರೋಮನ್ ಕ್ಯಾಥರೀನ್ ಲೊಬೊ ಅಂಧ ಮಕ್ಕಳ ಶಾಲೆಯ ಬಡ ವಿದ್ಯಾರ್ಥಿಗಳಾದ ಪ್ರದೀಪ್ ಕುಮಾರ್(ಶೇ.91), ನಿತ್ಯಾನಂದ(ಶೇ.90), ಗುರುರಾಜ್(ಶೇ.84) ಅನ್ವಿಥ್(ಶೇ.88) ಅಂಕ ಗಳಿಸಿ ತೇರ್ಗಡೆಯಾಗಿದ್ದು, ಪಿಯು ಪ್ರವೇಶಕ್ಕಾಗಿ ನಗರದ ಗಣಪತಿ ಕಾಲೇಜು ಮತ್ತು ಬೆಸೆಂಟ್ ಕಾಲೇಜಿನಲ್ಲಿ ಅರ್ಜಿ ಹಾಕಿದ್ದರು.
ಈಗ ಎರಡು ಕಾಲೇಜುಗಳು ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನಿರಾಕರಿಸಿದೆ. ಈ ಕಾಲೇಜುಗಳು ಸಾಮಾನ್ಯ ವಿದ್ಯಾರ್ಥಿಗಳಿಗೆ ಇರುವುದು. ಇವರು ಸಾಮಾನ್ಯ ವಿದ್ಯಾರ್ಥಿಗಳಲ್ಲ ಎನ್ನುವ ಕಾರಣ ನೀಡಿ ಕಾಲೇಜಿನಲ್ಲಿ ಇವರಿಗೆ ಪ್ರವೇಶ ನೀಡಲು ಸಾಧ್ಯವಿಲ್ಲ ಹೇಳಿದೆ.
ಸೇವಾ ಭಾರತಿ ಟ್ರಸ್ಟ್ ರೋಮನ್ ಕ್ಯಾಥರೀನ್ ಲೊಬೊ ಅಂಧ ಮಕ್ಕಳ ಶಾಲೆಯನ್ನು ನಡೆಸುತ್ತಿದ್ದು ಈ ಎರಡು ಕಾಲೇಜುಗಳ ವಿರುದ್ದ ಕ್ರಮ ಕೈಗೊಳ್ಳಲು ರಾಜ್ಯ ಪಿಯು ಮಂಡಳಿಗೆ ದೂರು ನೀಡಿದೆ.

ಈ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಸೇವಾ ಭಾರತಿ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಯು.ವಿ ಶೆಣೈ ಈ ಎರಡು ಕಾಲೇಜುಗಳು ಸರ್ಕಾರದ ನಿಯಮವನ್ನು ಉಲ್ಲಂಘಿಸಿದ್ದು ಪ್ರತಿಭಾವಂತ ಅಂಧ ವಿದ್ಯಾರ್ಥಿಗಳಿಗೆ ಅವಮಾನ ಮಾಡಿದೆ. ಈ ಕಾಲೇಜುಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಪಿಯು ಮಂಡಳಿಗೆ ದೂರು ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಬೇರೆ ಕಾಲೇಜಿನಲ್ಲಿ ಪ್ರವೇಶ:
ಗಣಪತಿ ಕಾಲೇಜು ಮತ್ತು ಬೆಸೆಂಟ್ ಕಾಲೇಜುಗಳು ವಿದ್ಯಾರ್ಥಿಗಳಿಗೆ ಪ್ರವೇಶ ನೀಡದಿದ್ದರೂ ನಗರದ ಗೋಕರ್ಣನಾಥ ಕಾಲೇಜು ಈ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದ್ದು ಮಾತ್ರವಲ್ಲದೇ ಶುಲ್ಕದಲ್ಲಿ ವಿನಾಯಿತಿ ನೀಡಿದೆ. ಅದೇ ರೀತಿಯಾಗಿ ಸೈಂಟ್. ಆಗ್ನೆಸ್ ಕಾಲೇಜು ರೋಮನ್ ಕ್ಯಾಥರೀನ್ ಲೊಬೊ ಶಾಲೆಯ ಅಂಧ ವಿದ್ಯಾರ್ಥಿನಿ ಮೇಘನಾಳಿಗೆ ಪ್ರವೇಶ ನೀಡಿದೆ.












Click it and Unblock the Notifications