ನೌಕರರ ಡಿಮ್ಯಾಂಡ್: ಬೆಂಗಳೂರಿನಲ್ಲಿ ಮಳೆ ಬರ್ತಿದೆ Work From Home ಕೊಡ್ರಿ!
ಬೆಂಗಳೂರು, ಅಕ್ಟೋಬರ್ 20: ಬೆಂಗಳೂರಿನಲ್ಲಿ ಬುಧವಾರ ಸಂಜೆಯೂ ಸುರಿದ ಭಾರೀ ಮಳೆಗೆ ಮಂದಿ ಕಂಗಾಲ್ ಆಗಿದ್ದಾರೆ. ನಗರದ ಪೂರ್ವ, ದಕ್ಷಿಣ ಮತ್ತು ಮಧ್ಯ ಭಾಗದ ಹಲವು ರಸ್ತೆಗಳು ಜಲಾವೃತಗೊಂಡಿದ್ದು, ಕಚೇರಿಗೆ ಹೋದವರು ಮನೆಗೆ ಹೋಗೋದಕ್ಕೆ ಪರಿತಪಿಸುವಂಥ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ.
ಸಿಲಿಕಾನ್ ಸಿಟಿಯಲ್ಲಿ ಸಂಜೆ ಆಗುತ್ತಿದ್ದಂತೆ ವರುಣನ ಆರ್ಭಟ ಶುರುವಾಗುತ್ತಿದೆ. ಮನೆಯಿಂದ ಜನರು ಹೊರಗೆ ಬರುವುದಕ್ಕೂ ಭಯಪಡುವಂತಹ ಪರಿಸ್ಥಿತಿಯನ್ನು ಮಳೆರಾಯ ಸೃಷ್ಟಿಸಿ ಬಿಟ್ಟಿದ್ದಾನೆ. ನಗರದ ರಸ್ತೆಗಳಲ್ಲಿ ನೀರು ನಿಂತಿದ್ದು, ಯಮಗುಂಡಿಗಳ ಬಗ್ಗೆ ಆತಂಕಗೊಂಡಿದ್ದಾರೆ.
ಕೆಲಸ ಮುಗಿಸಿ ಮನೆಗೆ ಹೋಗುವ ಸಮಯಕ್ಕೆ ಸರಿಯಾಗಿ ಮಳೆ ಶುರುವಾಗುತ್ತಿದೆ. ಇದರಿಂದ ರೋಸಿ ಹೋಗಿರುವ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವುದಕ್ಕೆ ಅವಕಾಶ ಕೊಡಿ ಪ್ಲೀಸ್ ಎನ್ನುವ ಬೇಡಿಕೆಯನ್ನು ಇಡುತ್ತಿದ್ದಾರೆ. ಐಟಿ ಸಿಟಿಯಲ್ಲಿನ ಖಾಸಗಿ ಕಂಪನಿ ಉದ್ಯೋಗಿಗಳು ಈಗ ಮನೆಯಿಂದಲೇ ಕೆಲಸ ಮಾಡುತ್ತೀವಿ ಅನ್ನೋ ಡಿಮ್ಯಾಂಡ್ ಇಡುತ್ತಿದ್ದಾರೆ. ಬೆಂಗಳೂರಿನಲ್ಲಿ ಮಳೆ ಸೃಷ್ಟಿಸಿದ ಅವಾಂತರ ಹಾಗೂ ಉದ್ಯೋಗಿಗಳ ಬೇಡಿಕೆಗಳ ಕುರಿತು ಈ ವರದಿಯಲ್ಲಿ ತಿಳಿದುಕೊಳ್ಳಿರಿ.

ಬೆಂಗಳೂರಿನಲ್ಲಿ ಮಳೆರಾಯನ ಆರ್ಭಟ
ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಬೆಂಗಳೂರು ನಗರದ ಉತ್ತರ ಭಾಗದ ರಾಜಮಹಲ್ ಗುಟ್ಟಹಳ್ಳಿಯಲ್ಲಿ 59 ಮಿಮೀ ಮಳೆ ದಾಖಲಾಗಿದೆ. ಸಂಪಂಗಿ ರಾಮನಗರ 53 ಮಿ.ಮೀ, ದಯಾನಂದ ನಗರದಲ್ಲಿ 50 ಮಿ.ಮೀ, ಬಾಣಸವಾಡಿಯಲ್ಲಿ 47 ಮಿ.ಮೀ, ವೈಟ್ ಫೀಲ್ಡ್ ಸುತ್ತುತ್ತಲಿನ ಪ್ರದೇಶದಲ್ಲಿ 44 ಮಿ.ಮೀ ಮತ್ತು ಕೆಆರ್ ಪುರಂನಲ್ಲಿ 39 ಮಿ.ಮೀ ಮಳೆಯಾಗಿತ್ತು. ಈ ಮಧ್ಯೆ IMD ಸಹ ಹಳದಿ ಎಚ್ಚರಿಕೆಯನ್ನು ನೀಡಿದೆ. ಇದರಿಂದ ನಗರದಲ್ಲಿ ಭಾರೀ ಮಳೆಯಾಗುವ ಸೂಚನೆ ಸಿಕ್ಕಿದ್ದು, ಮುಂದಿನ ಮೂರು ದಿನಗಳವರೆಗೆ ವರುಣನ ಅಬ್ಬರ ಮುಂದುವರಿಯುತ್ತದೆ ಎಂದು ಹೇಳಲಾಗಿದೆ.

ಬೆಂಗಳೂರಿನಲ್ಲಿ ಕಚೇರಿಗೆ ದೋಣಿಯಲ್ಲೇ ಹೋಗಬೇಕು
ಸಿಲಿಕಾನ್ ಸಿಟಿಯಲ್ಲಿ ಸುರಿಯುತ್ತಿರುವ ಮಳೆಯಿಂದ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದ್ದು, ಬೇಸತ್ತ ಉದ್ಯೋಗಿಗಳು ಟ್ವಿಟ್ಟರ್‌ನಲ್ಲಿ ಡಿಫೆರೆಂಟ್ ಡಿಮ್ಯಾಂಡ್ ಅನ್ನು ಇಡುತ್ತಿದ್ದಾರೆ. ವೃತ್ತಿಪರರಿಗೆ ಮನೆಯಿಂದಲೇ ಕಾಯಂ ಕೆಲಸ ಮಾಡುವುದಕ್ಕೆ ಅವಕಾಶ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡಲು ಈಗ ದೋಣಿಯನ್ನು ಪಡೆಯಬೇಕಾಗಿದೆ ಎಂದು ಉದ್ಯೋಗಿಯೊಬ್ಬ ಟ್ವೀಟ್ ಮಾಡಿದ್ದಾರೆ.

ಬೆಂಗಳೂರು ಬಿಟ್ಟು ಹೋಗಿ ಎಂದು ಟ್ವೀಟ್!
ನೀವು ಶಾಶ್ವತವಾಗಿ ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ಆರಿಸಿಕೊಳ್ಳಿರಿ, ಮೊದಲು ಬೆಂಗಳೂರು ನಗರವನ್ನು ತೊರೆಯಿರಿ. ಇದನ್ನು ಬಹಳಷ್ಟು ಜನರು ಸ್ವೀಕರಿಸುವುದಕ್ಕೆ ಸಾಧ್ಯವಿಲ್ಲ, ಆದರೆ ಅದು ಪ್ರಕೃತಿ ಸಹಜವಾಗಿದೆ. ಇಂಥ ಪರಿಸರದಲ್ಲಿ ವರ್ಕ್ ಫ್ರಾಮ್ ಹೋಮ್ ಉತ್ತಮ ಆಯ್ಕೆ ಆಗಿರುತ್ತದೆ.
''ಈ ವರ್ಷ ಅತಿಹೆಚ್ಚು ಮಳೆಯಾಗುತ್ತಿದೆ. ಬೆಂಗಳೂರಿನ ಇಂಥ ಹವಾಮಾನದಲ್ಲಿ ಸಾಕಷ್ಟು ಜನರು ವಾಸಿಸುತ್ತಿದ್ದರು. ಏನಾದರೂ ಹೆಚ್ಚಾದಾಗ ನಾವು ನಗರದಿಂದ ಹೊರಗೆ ಹೋಗುವುದನ್ನು ನೋಡಬೇಕು. ನಗರವನ್ನು ಬಿಟ್ಟುಬಿಡಿ. ಮೊದಲು ನೀವು ವಾಸಿಸುವ ಸ್ಥಳವನ್ನು ಗೌರವಿಸಿ,'' ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಬಿಬಿಎಂಪಿಗೆ ಛೀಮಾರಿ
ಕಳೆದ ಬಾರಿ ಬೆಂಗಳೂರಿನಲ್ಲಿ ಸುರಿದ ಮಳೆಯ ನಂತರದಲ್ಲಿ ಬಿಬಿಎಂಪಿಯು ನಡೆಸಿದ ಅತಿಕ್ರಮಣ ತೆರವು ಕಾರ್ಯಾಚರಣೆಯು ನಾಟಕ ಎಂಬುದು ಸಾಬೀತಾಗಿದೆ. ಆಗಿನ ಮಟ್ಟಿಗೆ ಕಾರ್ಯಾಚರಣೆ ನಡೆಸಿದ ಬಿಬಿಎಂಪಿ ಅಧಿಕಾರಿಗಳು ನಂತರದಲ್ಲಿ ಸೈಲೆಂಟ್ ಆಗಿದ್ದಾರೆ. ಇದೀಗ ಬುಧವಾರ ಸುರಿದ 20 ನಿಮಿಷಗಳ ಮಳೆಯು ಮತ್ತೊಮ್ಮೆ ಬೆಂಗಳೂರಿನಲ್ಲಿನ ಅವ್ಯವಸ್ಥೆಯನ್ನು ತೆರೆದಿಟ್ಟಿದೆ," ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.












Click it and Unblock the Notifications