ಕನ್ನಡ ಸಾಹಿತ್ಯ ಡಿಜಿಟಲೀಕರಣ ಮಾಡಲು ಸರ್ಕಾರ ಬದ್ಧ: ಅಶ್ವಥ್ ನಾರಾಯಣ
ಬೆಂಗಳೂರು, ಡಿಸೆಂಬರ್ 18: ಕನ್ನಡ ಇತಿಹಾಸ, ಪರಂಪರೆ ಮತ್ತು ಸಾಹಿತ್ಯವನ್ನು ಪರಿಚಯಿಸಲು ಡಿಜಿಟಲೀಕರಣ ವ್ಯೆವಸ್ಥೆ ಜಾರಿಗೆ ತರಲು ಸರ್ಕಾರ ಬದ್ದವಿರುವುದಾಗಿ ಉಪ ಮುಖ್ಯಮಂತ್ರಿ ಹಾಗೂ ಐಟಿ,ಬಿಟಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಹೇಳಿದ್ದಾರೆ.
ಜ್ಞಾನ ಮತ್ತು ತಂತ್ರಜ್ಞಾನಗಳ ಅಭಿವೃದ್ದಿಗೆ ಕೈಗಾರಿಕಾ ಸಂಸ್ಥೆಗಳ ಸಹಯೋಗದಲ್ಲಿ 'ಕರ್ನಾಟಕ ತಂತ್ರಜ್ಞಾನ ಅಭಿವೃದ್ದಿ ಮಂಡಳಿ' ಸ್ಥಾಪನೆ ಮಾಡಲಾಗುವುದು, ಅದಕ್ಕಾಗಿ 'ಕಾನ್ ಟೆಕ್' ಯೋಜನೆಗೆ ಚಾಲನೆ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದರು.
ಐಟಿ, ಬಿಟಿ ಸಚಿವರಾಗಿ ನೂರು ದಿನ ಪೂರೈಸಿದ ಸಲುವಾಗಿ ಮಂಗಳವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ಜಗತ್ತಿನಲ್ಲಿಯೇ ಮುಂಚೂಣಿಯಲ್ಲಿದೆ ಎಂದರು.

10 ವರ್ಷಗಳ ಹಿಂದೆ ಪ್ರಾರಂಭವಾದ ನವೋದ್ಯಮ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಸದ್ಯ ನಗರದಲ್ಲಿ ನಾಲ್ಕು ಸಾವಿರ ನವೋದ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉದ್ಯಮಗಳ ಸ್ಥಾಪನೆಗೆ ಒತ್ತು ಕೊಡುವುದಾಗಿ ಹೇಳಿದರು.
ಅತ್ಯುನ್ನತ ಮಟ್ಟದ ಸಂಶೋಧನೆ ಮತ್ತು ಆವಿಷ್ಕಾರ ಯೋಜನೆಗಳನ್ನು ಉತ್ತೇಜನಗೊಳಿಸಲು ಧನಸಹಾಯ ನೀಡುವುದಾಗಿ ಹೇಳಿದರು. ಇದಕ್ಕಾಗಿ ಕರ್ನಾಟಕ ಸಂಶೋಧನಾ ನಿಧಿ ಹಾಗೂ ಕರ್ನಾಟಕ ಸಂಶೋಧನಾ ಕೇಂದ್ರ ತೆರೆಯುವುದಾಗಿ ಐಟಿ, ಬಿಟಿ ಸಚಿವರೂ ಕೂಡಾ ಆಗಿರುವ ಅಶ್ವಥ್ ನಾರಾಯಣ ಅವರು ಮಾಹಿತಿ ನೀಡಿದರು.
ದೇಶದ ಜಿಡಿಪಿಗೆ ಕರ್ನಾಟಕವು ೮.೫ ರಷ್ಟು ಕೊಡುಗೆ ನೀಡುತ್ತದೆ. ಭಾರತದಲ್ಲಿ ಅತಿ ಹೆಚ್ಚು ಕಾರ್ಪೋರೇಟ್ ತೆರಿಗೆ ಕಟ್ಟುವ ರಾಜ್ಯ ಅಂದರೆ ಅದು ಕರ್ನಾಟಕ. ಇದರಲ್ಲಿ ಬೆಂಗಳೂರಿನಲ್ಲೇ ಶೇ. 65 ರಷ್ಟು ತೆರಿಗೆ ಉತ್ಪಾದನೆಯಾಗುತ್ತದೆ ಎಂದರು.
ಬೆಂಗಳೂರಿನಲ್ಲಿ ಶೇ.10 ರಷ್ಟು ಮಹಿಳೆಯರು ನವೋದ್ಯಮಿಗಳಾಗಿದ್ದಾರೆ. ಇದು ಏಷ್ಯಾದಲ್ಲಿಯೇ ಹೆಚ್ಚಾಗಿದ್ದು, ಇನ್ನೂ ಇದರ ಸಂಖ್ಯೆ ಬೆಳೆಯಲಿದೆ. ನಮ್ಮ ಸರ್ಕಾರ ಎರಡು, ಮೂರು ಹಂತಗಳಲ್ಲಿ ಕೈಗಾರಿಕಾ ಅಭಿವೃದ್ದಿಗೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ನವೋದ್ಯಮಗಳನ್ನು ಬೆಂಬಲಿಸಲು ಅದರ ಆವಿಷ್ಕಾರ ಕ್ಷೇತ್ರದ ಉತ್ತೇಜನ ಮಾಡಲು 'ಕರ್ನಾಟಕ ಆವಿಷ್ಕಾರ ಪ್ರಾಧಿಕಾರಕ್ಕೆ ಚಾಲನೆ ನೀಡಲಾಗಿದೆ ಎಂದರು.
ವಿದೇಶಿ ಹೂಡಿಕೆದಾರರು ಕರ್ನಾಟಕದಲ್ಲಿ ಬಂದು ಉದ್ಯಮ ಸ್ಥಾಪಿಸುವಂತೆ ಅವರ ಗಮನ ಸೆಳೆಯಲು ಸರ್ಕಾರದಿಂದ ಜಾಗತಿಕ ಮಾಹಿತಿ ಕೇಂದ್ರ ತೆರೆಯುವುದಾಗಿ ಮಾಹಿತಿ ನೀಡಿದರು.












Click it and Unblock the Notifications