ಕೆಂಗೇರಿ-ಚಲ್ಲಘಟ್ಟ ಮೆಟ್ರೋ ಮಾರ್ಗ ಕಾರ್ಯಾಚರಣೆಗೆ ಅಸ್ತು ಎಂದ ಸಿಎಂಆರ್‌ಎಸ್
ಬೆಂಗಳೂರು, ಅಕ್ಟೋಬರ್ 03: ಬಹುನಿರೀಕ್ಷಿತ ಕೆಂಗೇರಿ ಚಲ್ಲಘಟ್ಟ ಮೆಟ್ರೋ ಮಾರ್ಗವನ್ನು ವಾಣಿಜ್ಯ ಕಾರ್ಯಾಚರಣೆಗಾಗಿ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್) ಅನುಮೋದಿಸಿದ್ದಾರೆ.
ಈ ಸಂಬಂಧ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್, ಕೆಂಗೇರಿ ಚಲ್ಲಘಟ್ಟ ಮೆಟ್ರೋ ಮಾರ್ಗ ವಿಸ್ತರಣೆಗೆ ಆಯುಕ್ತರ ಅನುಮತಿಯನ್ನು ಪಡೆಯಲಾಗಿದೆ. 1.69 ಕಿಮೀ ಮೆಟ್ರೋ ವಿಸ್ತರಿತ ನೇರಳೆ ಮಾರ್ಗವು ಬೆಂಗಳೂರಿನ ಪಶ್ಚಿಮ ತುದಿಯಲ್ಲಿದೆ ಎಂದು ತಿಳಿಸಿದ್ದಾರೆ.

ಮೆಟ್ರೋ ರೈಲು ಸುರಕ್ಷತಾ ಆಯುಕ್ತ ಎಎಂ ಚೌಧರಿ ಕೆಂಗೇರಿ ಚಲ್ಲಘಟ್ಟ ನಡುವಿನ ಮಾರ್ಗದ ಸುರಕ್ಷತಾ ಪರಿಶೀಲನೆಯನ್ನು ಸೆಪ್ಟೆಂಬರ್ 29 ರಂದು ನಡೆಸಿದ್ದರು. ಈ ಮೆಟ್ರೋ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ಅನುಮೋದನೆಯನ್ನು ಈಗ ನೀಡಿದ್ದಾರೆ. ಕಳೆದ ಸೆಪ್ಟೆಂಬರ್ 25 ರಂದು ಸಿಎಂಆರ್‌ಎಸ್ 2.1 ಕಿಮೀ ಬೈಯಪ್ಪನಹಳ್ಳಿ- ಕೆಆರ್ ಪುರ ಮೆಟ್ರೋ ಮಾರ್ಗವನ್ನು ವಾಣಿಜ್ಯ ಕಾರ್ಯಾಚರಣೆಗಾಗಿ ಅನುಮೋದನೆ ಮಾಡಿತ್ತು. ಈ ವಿಭಾಗವು ಬೆನ್ನಿಗನಹಳ್ಳಿಯಲ್ಲಿ (ಟಿನ್ ಫ್ಯಾಕ್ಟರಿ) ಹೊಸ ನಿಲ್ದಾಣವನ್ನು ಹೊಂದಿದೆ.
ಬೆಂಗಳೂರಿನ ಈ ಎರಡೂ ವಿಸ್ತೃತ ಮಾರ್ಗಗಳು (ಬೈಯಪ್ಪನಹಳ್ಳಿ-ಕೆಆರ್ ಪುರ ಮತ್ತು ಕೆಂಗೇರಿ-ಚಲ್ಲಘಟ್ಟ) ಮುಂದಿನ ಕೆಲವು ದಿನಗಳಲ್ಲಿ ಒಟ್ಟಿಗೆ ತೆರೆಯಲು ನಿರ್ಧರಿಸಲಾಗಿದೆ. ಈ ಮಾರ್ಗಗಳಲ್ಲಿ ಉದ್ಘಾಟನೆಯಲ್ಲಿ ಇದೇ ಅಕ್ಟೋಬರ್ 6ರಂದು ಮಾಡಲಾಗುತ್ತದೆ ಎಂದು ವರದಿಗಳು ತಿಳಿಸಿವೆ. ಮೆಟ್ರೋ ಮಾರ್ಗದ ಆಯಕ್ತರ ಅನುಮೋದನೆ ಯಾವಾಗಲೂ ಷರತ್ತುಬದ್ಧವಾಗಿರುತ್ತದೆ. ವಾಣಿಜ್ಯ ಕಾರ್ಯಾಚರಣೆಗಳನ್ನು ಪ್ರಾರಂಭಿಸುವುದು ಬಿಎಂಆರ್‌ಸಿಎಲ್ ಆದಷ್ಟು ಬೇಗನೆ ಷರತ್ತುಗಳನ್ನು ಮುಗಿಸುತ್ತದೆ. ಅಲ್ಲದೆ ಉದ್ಘಾಟನೆಗೆ ರಾಜಕೀಯ ನಾಯಕರ ವೇಳಾಪಟ್ಟಿಯನ್ನು ಅವಲಂಬಿಸಿರುತ್ತದೆ.
ಉದ್ಘಾಟನೆಗೆ ಸಿದ್ದವಾಗಿರುವ ಈ ಮೆಟ್ರೋ ಮಾರ್ಗ ಕೇವಲ 2.1 ಕಿಮೀ ಉದ್ದವಿದೆ. ಬೈಯಪ್ಪನಹಳ್ಳಿ-ಕೆಆರ್ ಪುರ ಮೆಟ್ರೊ ಮಾರ್ಗವು ಈಗ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ. ಏಕೆಂದರೆ ಇದು ವೈಟ್‌ಫೀಲ್ಡ್‌ನ ಟೆಕ್ ಹಬ್ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಮತ್ತು ಅದರಾಚೆಗೆ ಸಾರಿಗೆ ಸಂಪರ್ಕಕ್ಕೆ ಸಹಾಯ ಮಾಡುತ್ತದೆ. 13.71-ಕಿಮೀ ಕೆಆರ್ ಪುರ-ವೈಟ್‌ಫೀಲ್ಡ್ ಮೆಟ್ರೋ ಮಾರ್ಗವು ಕಾರ್ಯನಿರ್ವಹಿಸುತ್ತಿದೆ.
ಬೆಂಗಳೂರಿನಲ್ಲಿ ಬೈಯಪ್ಪನಹಳ್ಳಿ- ಕೆಆರ್ ಪುರ ಮತ್ತು ಕೆಂಗೇರಿ-ಚಲ್ಲಘಟ್ಟ ಮಾರ್ಗದ ಮೆಟ್ರೋ ಉದ್ಘಾಟನೆಯಾದರೆ ನೇರಳೆ ಮಾರ್ಗವು ಸುಮಾರು 43 ಕಿಮೀಗೆ ವಿಸ್ತರಿಸುತ್ತದೆ. ಅಲ್ಲದೆ ಬೆಂಗಳೂರು ಮೆಟ್ರೋ ಜಾಲವು ಒಟ್ಟು 73 ಕಿಮೀಗೆ ವ್ಯಾಪಿಸುತ್ತದೆ. ಇದು ದೇಶದ ಎರಡನೇ ಅತಿ ದೊಡ್ಡದಾದ ಜಾಲವಾಗಿರುತ್ತದೆ.
ಈ ನೇರಳೆ ಮಾರ್ಗಗಳು ತೆರೆದಾಗ ದೈನಂದಿನ ಪ್ರಯಾಣಿಕರ ಸರಾಸರಿ ಸಂಖ್ಯೆ 7 ಲಕ್ಷವನ್ನು ದಾಟುತ್ತದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿರೀಕ್ಷಿಸುತ್ತದೆ. ಪ್ರಸ್ತುತ ಸರಾಸರಿ ದೈನಂದಿನ ಪ್ರಯಾಣಿಕರ ಸಂಖ್ಯೆ 6.3 ಲಕ್ಷವಾಗಿದೆ.












Click it and Unblock the Notifications