Namma Metro Green Line: ಯಶಸ್ವಿ ಆಯ್ತು ನಾಗಸಂದ್ರ-ಮಾದವರ ವಿಸ್ತರಣೆ ಮಾರ್ಗದ ಸುರಕ್ಷತಾ ತಪಾಸಣೆ
ಬೆಂಗಳೂರು, ಅಕ್ಟೋಬರ್ 04: ಬೆಂಗಳೂರು ನಮ್ಮ ಮೆಟ್ರೋ ಬೈಯಪ್ಪನಹಳ್ಳಿಯಿಂದ ಕೆಆರ್ ಪುರಂವರೆಗೆ, ಮೈಸೂರು ರಸ್ತೆಯಿಂದ ಚಲ್ಲಘಟ್ಟವರೆಗೆ ವಿಸ್ತರಣೆ ಮಾರ್ಗಗಳು ತೆರೆದ ಬಳಿಕ ಇದೀಗ ವಿಸ್ತರಣೆಯ ಮೆಟ್ರೋ ಹಸಿರು ಮಾರ್ಗವು ತೆರೆಯಲು ಸಕಲ ಸಿದ್ಧತೆಗಳು ಆರಂಭವಾಗಿವೆ. ಈ ಸಂಬಂಧ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRS) ನಡೆಸಿದ ತಪಾಸಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಹೌದು, ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ನೀಡಿರುವ ಮಾಹಿತಿ ಪ್ರಕಾರ, ಇದೇ ಅಕ್ಟೋಬರ್ 3 ಮತ್ತು 4 ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRS ದಕ್ಷಿಣ ವೃತ್ತ) ನಾಗಸಂದ್ರದಿಂದ ಮಾದಾವರವರೆಗೆ ವಿಸ್ತರಣೆಗೊಂಡ 3.7 ಕಿಲೋ ಮೀಟರ್ ಮಾರ್ಗವನ್ನು ತಪಾಸಣೆ ಮಾಡಲಿದ್ದಾರೆ ಎಂದು ತಿಳಿಸಿತ್ತು. ಅದರಂತೆ ಮೊದಲ ದಿನ ಅಂದರೆ ಗುರುವಾರ (ಅ.3)ರಂದು ನಡೆಸಿದ ತಪಾಸಣೆ ಯಶಸ್ವಿಯಾಗಿದೆ. ಇಂದು ಶುಕ್ರವಾರ ಮತ್ತೊಂದು ಹಂತ ಸುರಕ್ಷತಾ ತಪಾಸಣೆ ಕೈಗೊಳ್ಳಲಿದ್ದರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ಹಾಗೂ ಅವರ ತಂಡ ನಡೆಸಿದ ನಾಗಸಂದ್ರದಿಂದ ಮಾದವರವರೆಗೆ ಮೂರು ಮೆಟ್ರೋ ನಿಲ್ದಾಣಗಳ ನಡುವೆ ಹೊಸದಾಗಿ ನಿರ್ಮಿಸಲಾದ ಮಾರ್ಗದ ಶಾಸನಬದ್ಧ ಸುರಕ್ಷತಾ ಪರಿಶೀಲನೆಯು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಮೆಟ್ರೋ ವಿಸ್ತರಣೆ ಮಾರ್ಗದಲ್ಲಿ ಹಳಿಗೆ ಇಳಿದು ತಪಾಸಣೆ
ಬೆಂಗಳೂರಿನಲ್ಲಿ ನೇರಳೆ ಮಾರ್ಗದ ಜೊತೆಗೆ ಹಸಿರು ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳು ನಿತ್ಯ ಸಂಚಾರ ಸೇವೆ ನೀಡುತ್ತವೆ. ರೇಷ್ಮೆ ಸಂಸ್ಥೆಯಿಂದ ನಾಗಸಂದ್ರವರೆಗೆ ಹಸಿರು ಮಾರ್ಗ ಇದೆ. ಈ ಮಾರ್ಗವನ್ನು ನಾಗಸಂದ್ರದಿಂದ ಮಾದಾವರವರೆಗೆ 298 ಕೋಟಿ ರೂಪಾಯಿ ವೆಚ್ಚದಲ್ಲಿ ವಿಸ್ತರಣೆ ಮಾಡಲಾಯಿತು.
ಈ ವಿಸ್ತರಣೆ ಮಾರ್ಗದಲ್ಲಿ ಒಟ್ಟು ಮೂರು ಮೆಟ್ರೋ ನಿಲ್ದಾಣಗಳು ಬರುತ್ತವೆ. ಇನ್ಮುಂದೆ ನಾಗಸಂದ್ರವರೆಗೆ ಓಡಾಡುತ್ತಿದ್ದ ರೈಲುಗಳು, ಮುಂದಿನ ದಿನಗಳಲ್ಲಿ ಮಾದಾವರವರೆಗೆ ಓಡಾಡಲಿವೆ. ಅದಕ್ಕಾಗಿಯೇ ಈಗಾಗಲೇ ನಡೆಸಿರುವ ಸಿಗ್ನಲ್ ಟೆಸ್ಟಿಂಗ್, ಮೆಟ್ರೋ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ.
ಸದ್ಯ ಈ ವಿಸ್ತರಣೆ ಮಾರ್ಗವು ವಾಣಿಜ್ಯ ಕಾರ್ಯಾಚರಣೆಗೆ ಎಷ್ಟು ಸುರಕ್ಷಿತ, ಈ ಮಾರ್ಗದಲ್ಲಿ ಪ್ರಯಾಣಿಕರ ಸಹಿತ ರೈಲು ಓಡಿಸಬಹುದೇ ಎಂಬ ಸಿಎಂಆರ್‌ಎಸ್ ಅಧಿಕಾರಿಗಳ ತಂಡ ಪರಿಶೀಲನೆ ಮಾಡಿದೆ. ಮೆಟ್ರೋ ಹಳಿಗೆ ಇಳಿದು ಪರಿಶೀಲಿಸಿದ್ದಾರೆ. ಎರಡು ದಿನದ ತಪಾಸಣೆ ಪೈಕಿ ಮೊದಲ ದಿನ ಸುರಕ್ಷತಾ ತಪಾಸಣೆ ಪೂರ್ಣಗೊಂಡಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಮೂರು ಮೆಟ್ರೋ ಮಾರ್ಗ
ಇತ್ತ ನಮ್ಮ ಮೆಟ್ರೋ ಹಳದಿ ಮಾರ್ಗವೂ ಹಾಲಿ ಎರಡು ಮಾರ್ಗಗಳ ಸಾಲಿಗೆ ಸೇರ್ಪಡೆಗೊಳ್ಳಲಿವೆ. ಈವರೆಗೆ ಇದ್ದ ಎರಡು ಮೆಟ್ರೋವು ಮುಂದಿನ ದಿನಳಲ್ಲಿ ಮೂರು ಮೆಟ್ರೋ ಮಾರ್ಗವಾಗಲಿದೆ. ಅಂದರೆ 19 ಕಿಲೋ ಮೀಟರ್ ಇರುವ ಆರ್.ವಿ. ರಸ್ತೆ ಮತ್ತು ಬೊಮ್ಮಸಂದ್ರ ಮಧ್ಯದ ಹಳದಿ ಮಾರ್ಗವು ಈ ವರ್ಷಾಂತ್ಯಕ್ಕೆ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆ ಇದೆ.












Click it and Unblock the Notifications