ಅಣ್ಣಾಮಲೈ ಬಿಜೆಪಿ ಸೇರುತ್ತಿರುವುದು ನನಗೆ ಗೊತ್ತಿಲ್ಲ: ಬಿಎಸ್‌ವೈ
ಬೆಂಗಳೂರು, ಆ. 25: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಬಿಜೆಪಿ ಸೇರುವ ವಿಚಾರವಾಗಿ ಬಿಜೆಪಿಯಲ್ಲಿ ಒಮ್ಮತದ ಅಭಿಪ್ರಾಯ ಇಲ್ಲವಾ? ಇಂಥದೊಂದು ಚರ್ಚೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ ಹುಟ್ಟುಹಾಕಿದೆ.
Recommended Video
ಕರ್ನಾಟಕ ಕೇಡರ್‌ನ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಇಂದು ದೆಹಲಿಯಲ್ಲಿ ಬಿಜೆಪಿ ಸೇರಲಿದ್ದಾರೆ. ಅವರು ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಜೊತೆಗೆ ಖಡಕ್ ಅಧಿಕಾರಿ ಎಂದು ಹೆಸರು ಮಾಡಿದ್ದರು. ಕುಟುಂಬದೊಂದಿಗೆ ಕಾಲ ಕಳೆಯಲು ಆಗುತ್ತಿಲ್ಲ ಎಂದು ಹೇಳಿಕೆ ಕೊಟ್ಟು ಕಳೆದ ವರ್ಷ ಸ್ವಯಂ ನಿವೃತ್ತಿಯನ್ನು ಅವರು ತೆಗೆದುಕೊಂಡಿದ್ದರು.
ಅಣ್ಣಾಮಲೈ ಅವರು ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ದಕ್ಷತೆಯಿಂದ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದು ಬಿಜೆಪಿ ಸೇರುತ್ತಿದ್ದಾರೆ. ಅವರು ಬಿಜೆಪಿ ಸೇರುತ್ತಿರುವುದು ನನಗೆ ಅತೀವ ಸಂತೋಷ ತಂದಿದೆ. ಅವರಿಗೆ ಹೃದಯಪೂರ್ವಕ ಸ್ವಾಗತ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು ಟ್ವೀಟ್ ಮಾಡಿದ್ದಾರೆ. ಆದರೆ ಇದೇ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ಕೊಟ್ಟಿರುವ ಸಿಎಂ ಯಡಿಯೂರಪ್ಪ ಅವರು, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಿಜೆಪಿ ಸೇರ್ಪಡೆ ವಿಚಾರ ನನಗೆ ಗೊತ್ತಿಲ್ಲ ಎಂದಿದ್ದಾರೆ. ಹೀಗಾಗಿ ಸಿಎಂ ಯಡಿಯೂರಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಬಿಜೆಪಿ ಹೈಕಮಾಂಡ್ ಅಣ್ಣಾಮಲೈ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆಯಾ ಎಂಬ ಚರ್ಚೆ ಹುಟ್ಟುಹಾಕಿದೆ. ಅಣ್ಣಾಮಲೈ ಅವರ ಬಿಜೆಪಿ ಸೇರ್ಪಡೆ ವಿಚಾರದಲ್ಲಿ ಯಡಿಯೂರಪ್ಪ ಅವರನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂಬುದು ಕುತೂಹಲ ಮೂಡಿಸಿದೆ.
ಇದೇ ಸಂದರ್ಭದಲ್ಲಿ ನೆರೆಹಾನಿ ವೈಮಾನಿಕ ಸಮೀಕ್ಷೆ ಬಗ್ಗೆ ಸಿಎಂ ಯಡಿಯೂರಪ್ಪ ಅವರು ಮಾತನಾಡಿದ್ದಾರೆ. ದೇವರ ದಯದಿಂದ ಎಲ್ಲಾ ಜಲಾಶಯಗಳು ತುಂಬಿವೆ. ಮಹಾರಾಷ್ಟ್ರದಲ್ಲಿ ಕೂಡ ಮಳೆ ಕಡಿಮೆಯಾಗಿದೆ. ಇದರಿಂದ ಅನಾಹುತ ಆಗಬಹುದು ಎಂಬ ನಿರೀಕ್ಷೆ ಇತ್ತು, ಅದು ಆಗಿಲ್ಲ. ಇವತ್ತು ಆಲಮಟ್ಟಿವರೆಗೂ ಹೋಗಿ ಬರುತ್ತೇನೆ. ನಾಲ್ಕೈದು ಜಿಲ್ಲೆಗಳ ಸಭೆ ಮಾಡಿ, ವೈಮಾನಿಕ ಸಮೀಕ್ಷೆ ಮಾಡಿ, ಪರಿಸ್ಥಿತಿ ತಿಳಿದುಕೊಂಡು ಬರುತ್ತೇನೆ.

ಮುಂದೆ ಪರಿಹಾರ ಯಾವ ರೀತಿ ಅಂತ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ಬೆಳಗಾವಿಗೆ ಹೋಗುತ್ತಿದ್ದೇನೆ. ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ನಂತರ ಸಂಬಂಧಪಟ್ಟ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕಾಗುತ್ತದೆ ಎಂದು ಯಡಿಯೂರಪ್ಪ ಅವರು ಮಾಹಿತಿ ಕೊಟ್ಟಿದ್ದಾರೆ.












Click it and Unblock the Notifications