Krishi Mela 2023: ಕೃಷಿಮೇಳಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ: ನಾಲ್ಕು ದಿನ ರೈತರ ಹಬ್ಬ
ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆಯೋಜಿಸಿರುವ 4 ದಿನಗಳ ಕೃಷಿ ಮೇಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್, ಕೃಷಿ ಸಚಿವ ಚಲುವರಾಯಸ್ವಾಮಿ ಕೂಡ ಹಾಜರಿದ್ದರು.
ಕೃಷಿಮೇಳ ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅತ್ಯಂತ ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ, ಕೃಷಿ ಮೇಳ ಉದ್ಘಾಟಿಸಲು ಖುಷಿಯಾಗಿದೆ. ಮೈಸೂರಿನಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮ ಮುಂದಕ್ಕೆ ಹಾಕಿ ಕೃಷಿಮೇಳಕ್ಕೆ ಬರಲು ಕೃಷಿ ಸಚಿವರು ಒತ್ತಾಯ ಮಾಡಿದರು ಎಂದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕರ್ನಾಟಕದಲ್ಲಿ ಸ್ಥಾಪನೆಯಾದ ಮೊದಲ ವಿಶ್ವ ವಿದ್ಯಾಲಯ. ರಾಜ್ಯದ ಜನ ಹೆಚ್ಚಿನದಾಗಿ ಕೃಷಿಯನ್ನು ಅವಲಂಬಿಸಿದ್ದಾರೆ, ರಾಜ್ಯದ ರೈತರ ಅಭಿವೃದ್ದಿಗೆ ಕೃಷಿ ವಿವಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ಕಾರ್ಯಕ್ರಮ ಉದ್ಘಾಟನೆ ಬಳಿಕ ಸಿಎಂ ಸಿದ್ದರಾಮಯ್ಯ ಮತ್ತು ಸಚಿವರು ಬೆಳೆ ಪ್ರಾತ್ಯಕ್ಷಿಕೆ ತಾಕುಗಳು ಹಾಗೂ ವಸ್ತು ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಿದರು.
ನಾಲ್ಕು ದಿನಗಳ ಸಂಭ್ರಮ
ಕೃಷಿ ವಿಶ್ವವಿದ್ಯಾಲಯ ಬೆಂಗಳೂರು, ಕೃಷಿ ಜಲಾಯನ ಅಭಿವೃದ್ಧಿ, ತೋಟಗಾರಿಕೆ, ಪಶುಸoಗೋಪನೆ, ರೇಷ್ಮೆ, ಅರಣ್ಯ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಅಭಿವೃದ್ಧಿ ಇಲಾಖೆಗಳ ಸೇರಿದಂತೆ ಸೆಕೆಂಡರಿ ಕೃಷಿ ನಿರ್ದೇಶನಲಯಗಳ ಸಂಯುಕ್ತಾಶ್ರಯದಲ್ಲಿ "ಕೃಷಿ ಮೇಳ - 2023" ಅನ್ನು ಆಯೋಜಿಸಲಾಗಿದೆ.
ರಾಗಿ ಆಧಾರಿತ ಆಹಾರ ಸೇವನೆಯನ್ನು ಉತ್ತೇಜಿಸುವ ಕ್ರಮದಲ್ಲಿ ಈ ಬಾರಿ ಕೃಷಿ ಮೇಳ ಆಯೋಜನೆ ಮಾಡಲಾಗಿದೆ. 'ಆಹಾರ, ಆರೋಗ್ಯ ಮತ್ತು ಆದಾಯಕ್ಕಾಗಿ ರಾಗಿ' ಎಂಬ ವಿಷಯ ಈ ಬಾರಿ ಕೃಷಿಮೇಳದ ಪ್ರಮುಖ ವಿಚಾರವಾಗಿದೆ.
ಕಾರ್ಯಕ್ರಮದಲ್ಲಿ ರಾಗಿ, ಬಿಳಿ ರಾಗಿ, ಪುಟ್ಟ ರಾಗಿ, ಸೂರ್ಯಕಾಂತಿ ಮತ್ತು ಹಲಸಿನ ಐದು ಹೊಸ ತಳಿಗಳನ್ನು ಅನಾವರಣಗೊಳಿಸಲಾಗಿದೆ. ರಾಜ್ಯದ ಉತ್ತಮ ರೈತರನ್ನು ಗುರುತಿಸಿ ಪ್ರಶಸ್ತಿ ಕೂಡ ವಿತರಣೆ ಮಾಡಲಾಯಿತು. 625 ವಿವಿಧ ಮಳಿಗೆಗಳನ್ನು ಸ್ಥಾಪನೆ ಮಾಡಲಾಗಿದ್ದು. ರಾಗಿ ಆಹಾರ ಮೇಳ ಕೂಡ ಏರ್ಪಡಿಸಲಾಗಿದೆ.
ಬರ ಪರಿಸ್ಥಿತಿಗಳಿಗೆ ನಿರೋಧಕವಾದ ಬೆಳೆಗಳನ್ನು ಬೆಳೆಸುವ ಬಗ್ಗೆ ರೈತರಿಗೆ ಶಿಕ್ಷಣ ನೀಡುವ ಗುರಿಯನ್ನು ಈ ಬಾರಿಯ ಕೃಷಿಮೇಳ ಹೊಂದಿದೆ. ಹನಿ ಮತ್ತು ತುಂತುರು ನೀರಾವರಿ ವ್ಯವಸ್ಥೆಗಳು, ಮಳೆ ಕೊಯ್ಲು ವ್ಯವಸ್ಥೆಗಳು ಮತ್ತು ಇತರ ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಗಳನ್ನು ನೋಡಬಹುದಾಗಿದೆ.
ನವೆಂಬರ್ 20 ರವರೆಗೆ ನಡೆಯಲಿರುವ ಈ ಮೇಳದಲ್ಲಿ ವಿವಿಧ ಕುರಿ ತಳಿಗಳನ್ನು ನೋಡಬಹುದು. ಡಾರ್ಪರ್, ರಾಂಬುಲೆಟ್, ಬನ್ನೂರು, ಎಲಗ, ಸನನ್, ಮತ್ತು ಬೆಂಗಳೂರು ಲಾಂಗ್ ಗೋಟ್ ಮುಂತಾದ ಕುರಿಗಳನ್ನು ಕಾಣಬಹುದು.












Click it and Unblock the Notifications