CM vs PM: ರಾಜಕೀಯ ಪುಡಾರಿಯಂತೆ ಪ್ರಧಾನಿ ಮೋದಿ ಆರೋಪ: ಚರ್ಚೆಗೆ ಆಹ್ವಾನಿಸಿದ ಸಿದ್ದರಾಮಯ್ಯ
ಬೆಂಗಳೂರು, ನವೆಂಬರ್ 01: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಐದು ಗ್ಯಾರೆಂಟಿ ಯೋಜನೆಗಳ ಬಗ್ಗೆ ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ಕೊಟ್ಟಿದ್ದಾರೆ. ಗ್ಯಾರೆಂಟಿಗಳಿಗೆ ಹಾಗೂ ಅಭಿವೃದ್ಧಿಗೆ ಅನುದಾನ ನೀಡಿದ್ದೇವೆ. ಮೊದಲು ನಿಮ್ಮ ಬಿಜೆಪಿ ಕಡೆಗೂ ನೋಡಿ, ಬೇಕಾದರೆ ಈ ಬಗ್ಗೆ ಸಾರ್ವಜನಿಕ ಚರ್ಚೆ ಮಾಡೋಣ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮೋದಿ ಟ್ವೀಟ್ ಅನ್ನು ಹಂಚಿಕೊಂಡಿರುವ ಸಿದ್ದರಾಮಯ್ಯ ಅವರು, ನಮ್ಮ 5 ಗ್ಯಾರಂಟಿ ಯೋಜನೆಗಳನ್ನು ₹52,000 ಕೋಟಿಗಳಷ್ಟು ಅಧಿಕ ಅನುದಾನದಲ್ಲಿ ಅನುಷ್ಠಾನಕ್ಕೆ ಕೊಟ್ಟಿದ್ದೇವೆ, ಇದರ ಜೊತೆಗೆ ನಾಡಿನ ಭವಿಷ್ಯ ರೂಪಿಸಲು ₹52,903 ಕೋಟಿ ಅನುದಾನ ಬಳಸಲಾಗುತ್ತಿದೆ.

ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿನ ಯಶಸ್ಸು ಮತ್ತು ಇದರಿಂದಾಗಿ ಏರುಗತಿಯಲ್ಲಿ ಸಾಗುತ್ತಿರುವ ರಾಜ್ಯದ ಆರ್ಥಿಕತೆಯನ್ನು ಕಂಡು ಬೆನ್ನುತಟ್ಟಿ ಪ್ರಧಾನಿ ಮೋದಿಯವರು ಪ್ರೊತ್ಸಾಹಿಸಬೇಕಿತ್ತು. ಆದರೆ ಅವರು ಒಬ್ಬ ರಾಜಕೀಯ ಪುಡಾರಿಯ ರೀತಿಯಲ್ಲಿ ಸುಳ್ಳು ಆರೋಪಗಳ ಮೂಲಕ ಕರ್ನಾಟಕ ರಾಜ್ಯಕ್ಕೆ ಮತ್ತು ಕನ್ನಡಿಗರಿಗೆ ಅವಮಾನ ಮಾಡುತ್ತಿರುವುದು ವಿಷಾದನೀಯ ಎಂದು ಕಿಡಿ ಕಾರಿದರು.
ಕೇಂದ್ರಕ್ಕೆ ಹೆಚ್ಚು ತೆರಿಗೆ ಪಾವತಿಸುವ ಎರಡನೇ ರಾಜ್ಯ
ಇಂದು ಕನ್ನಡ ರಾಜ್ಯೋತ್ಸವದ ದಿನ. 'ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ..' ಎಂದು ಸಾರಿದ ರಾಷ್ಟ್ರಕವಿ ಕುವೆಂಪು ಅವರ ಕಾವ್ಯವನ್ನು ನಾಡಗೀತೆಯಾಗಿ ಸ್ವೀಕರಿಸಿರುವ ಕರ್ನಾಟಕ, ಭಾರತಕ್ಕೆ ತಾಯಿಯ ಸ್ಥಾನವನ್ನು ನೀಡಿದೆ. ಇದೇ ಪ್ರೀತಿ ಮತ್ತು ಬದ್ಧತೆಯಿಂದ ಪ್ರಾಮಾಣಿಕವಾಗಿ ತಮ್ಮ ಬೆವರಗಳಿಕೆ ತೆರಿಗೆಯಾಗಿ ನೀಡಿ ದೇಶದ ಬೊಕ್ಕಸವನ್ನು ತುಂಬಿದವರು ಕನ್ನಡಿಗರು. ದೇಶದಲ್ಲಿ ಮಹಾರಾಷ್ಟ್ರದ ನಂತರ ಅತ್ಯಂತ ಹೆಚ್ಚು ನೇರ ತೆರಿಗೆ (11.9%) ಪಾವತಿಯಾಗಿರುವುದು ಕರ್ನಾಟಕ ರಾಜ್ಯದಲ್ಲಿ ಎನ್ನುವುದನ್ನು ಭಾರತೀಯ ಸ್ಟೇಟ್ ಬ್ಯಾಂಕ್ ವರದಿ ಒಪ್ಪಿಕೊಂಡಿರುವುದನ್ನು ನೀವು ಗಮನಿಸಿರಬಹುದು ಎಂದು ಸಿಎಂ ತಿವಿದಿದ್ದಾರೆ.
ಪ್ರಧಾನಿ ಮೋದಿಯವರೇ, ಎಲ್ಲವನ್ನೂ ಪಕ್ಷ, ರಾಜಕೀಯದ ಹಳದಿ ಕನ್ನಡಕದಿಂದ ನೋಡುವ ಅಭ್ಯಾಸವನ್ನು ಬಿಟ್ಟು ಒಬ್ಬ ಮುತ್ಸದ್ದಿ ರಾಜಕಾರಣಿಯಾಗಿ ಕರ್ನಾಟಕದ ಅಭಿವೃದ್ದಿ ಮಾದರಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದಾಗಿ ಬಡವರ ಕೈಗೆ ದುಡ್ಡು ಸಿಕ್ಕಿ ಅದು ಮಾರುಕಟ್ಟೆಗೆ ಹರಿದುಬಂದು ಅದರಿಂದ ತೆರಿಗೆ ಸಂಗ್ರಹವೂ ಹೆಚ್ಚಾಗಿ, ರಾಜ್ಯದ ಆರ್ಥಿಕತೆಗೆ ಬಲ ಬರಲಿದೆ ಎಂದು ಪ್ರಾರಂಭದಿಂದಲೂ ನಾನು ಹೇಳಿದ್ದೇನೆ.

ಗ್ಯಾರೆಂಟಿಗಳು ಆರ್ಥಿಕತೆ ಬಲ ತರುವ ಮಾತು ಇಂದು ನಿಜವಾಗಿದೆ. ಇದಕ್ಕಾಗಿ ಕರ್ನಾಟಕಕ್ಕೆ ನೀವು ಶಹಾಬಾಸ್ ಗಿರಿ ಕೊಡಬೇಕಿತ್ತು. ಆದರೆ ನೀವು ಸುಳ್ಳಿನ ಬಾಣಗಳ ಮೂಲಕ ಕನ್ನಡಿಗರನ್ನು ಅವಮಾನಿಸುತ್ತಿದ್ದೀರಿ. ಇದು ಖಂಡನೀಯ, ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿನ ಯಶಸ್ಸು ಮತ್ತು ಇದರಿಂದಾಗಿ ಏರುಗತಿಯಲ್ಲಿ ಸಾಗುತ್ತಿರುವ ರಾಜ್ಯದ ಆರ್ಥಿಕತೆಯನ್ನು ಕಂಡು ಬೆನ್ನುತಟ್ಟಿ ಪ್ರೊತ್ಸಾಹ ನೀಡಬೇಕಾಗಿದ್ದ ದೇಶದ ಪ್ರಧಾನಿ @narendramodi ಅವರು ಒಬ್ಬ ರಾಜಕೀಯ ಪುಡಾರಿಯ ರೀತಿಯಲ್ಲಿ ಸುಳ್ಳು ಆರೋಪಗಳ ಮೂಲಕ ಕರ್ನಾಟಕ ರಾಜ್ಯಕ್ಕೆ ಮತ್ತು ಕನ್ನಡಿಗರಿಗೆ ಅವಮಾನ ಮಾಡುತ್ತಿರುವುದು… https://t.co/vyPiGwBNMB
— Siddaramaiah (@siddaramaiah) November 1, 2024
ಬಿಜೆಪಿ ಲೂಟಿಯಲ್ಲಿ ನಿಮಗೂ ಪಾಲಿದೆಯೆ?
ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ, ರಾಜ್ಯದ ಸರ್ಕಾರದ ಕಡೆಗೆ ಬೆರಳು ಮಾಡುವ ಮುನ್ನ ಬಿಜೆಪಿ ಕರ್ನಾಟಕ ಪಕ್ಷದ ವಿನಾಶಕಾರಿ ಇತಿಹಾಸದ ಮೇಲೊಮ್ಮೆ ಕಣ್ಣಾಯಿಸಿ. ನಾವು ಜನರಿಗೆ ನೀಡಿದ್ದ ಪ್ರತಿ ಭರವಸೆಯನ್ನು ಈಡೇರಿಸಿದ್ದೇವೆ.
ರಾಜ್ಯದಲ್ಲಿ ಅಧಿಕಾರದಲ್ಲಿದ್ದ ನಿಮ್ಮ ಪಕ್ಷದ ಸಾಧನೆ ಏನು? ಏಳು ಕೋಟಿ ಕನ್ನಡಿಗರ ಅಭಿವೃದ್ಧಿಗಾಗಿ ವ್ಯಯವಾಗಬೇಕಾಗಿದ್ದ ಜನರ ಬೆವರ ಗಳಿಕೆಯ ತೆರಿಗೆ ಹಣವನ್ನು 40% ಕಮಿಷನ್ ರೂಪದಲ್ಲಿ ತೆಗಲಾಗಿದೆ. ಆದಾಯದ ಮೂಲಗಳನ್ನೆಲ್ಲ ಬರಿದು ಮಾಡಿ ರಾಜ್ಯವನ್ನು ಆರ್ಥಿಕವಾಗಿ ದಿವಾಳಿಯ ಅಂಚಿಗೆ ತಳ್ಳಲಾಗಿದೆ. ಈ ರೀತಿ ಲೂಟಿ ಮಾಡಿದ್ದ ಹಣದಲ್ಲಿ ನಿಮಗೂ ಪಾಲು ಸಂದಾಯವಾಗಿದೆ ಎಂದು ಪ್ರಶ್ನಿಸಿದರು.
ಪಿಎಂಗೆ ಸಿಎಂ ಸಾಲು ಸಾಲು ಪ್ರಶ್ನೆ
ನಿಮ್ಮ ನಾಯಕರು ಲೂಟಿ ಮಾಡುತ್ತಿದ್ದ 40% ಕಮಿಷನ್ ಹಣವನ್ನು ನಾವು ನೇರವಾಗಿ ಜನರಿಗೆ ತಲುಪಿಸುತ್ತಿದ್ದೇವೆ. ನಾವು ನುಡಿದಂತೆ ನಡೆದಿದ್ದೇವೆ, ನಿಮ್ಮ ಭರವಸೆಗಳೇನಾಯಿತು? ಪ್ರತಿಯೊಬ್ಬನ ಖಾತೆಗೆ ಹದಿನೈದು ಲಕ್ಷ ರೂಪಾಯಿ ಜಮೆ ಆಯಿತೇ? ಕಪ್ಪು ಹಣ ಮಾಯವಾಯಿತೇ? ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯಾಯಿತೇ? ರೈತರ ಆದಾಯ ದುಪ್ಪಟ್ಟಾಯಿತೇ? ಎಲ್ಲಿದೆ ನಿಮ್ಮ ಸ್ಮಾರ್ಟ್ ಸಿಟಿ? ಎಲ್ಲಿದೆ ನಿಮ್ಮ ಮೇಕ್ ಇನ್ ಇಂಡಿಯಾ? ನಿಮ್ಮ ಸಾಧನೆಗಳಾದರೂ ಏನು? ನಾಡನ್ನು ಸಾಲದ ಕೂಪಕ್ಕೆ ತಳ್ಳಿದ್ದೆ? ಸುಳ್ಳು ಮತ್ತು ಅಪಪ್ರಚಾರದ ಮೂಲಕ ನಿಮ್ಮ ವೈಫಲ್ಯಗಳನ್ನು ಮುಚ್ಚಿಹಾಕಿದ್ದೀರಿ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಭಾರತವನ್ನು ಸಾಲಗಾರ ದೇಶವನ್ನಾಗಿ ಮಾಡಿದ್ದೇ ನಿಮ್ಮ ಸಾಧನೆ. ನಿಮ್ಮ ಆಡಳಿತದಲ್ಲಿ 2024-25ರ ಆರ್ಥಿಕ ವರ್ಷದ ಅಂತ್ಯಕ್ಕೆ ದೇಶದ ಸಾಲ ₹185.27 ಲಕ್ಷ ಕೋಟಿಯ ಗಡಿ ಮುಟ್ಟಲಿದೆ ಎಂದು ಅಂದಾಜಿಸಲಾಗಿದೆ. ಇದು ಜಿಡಿಪಿ 56.8% ಆಗಲಿದೆ. ಇದು ನಿಮ್ಮ ದುರಾಡಳಿತ ಮಾತ್ರವಲ್ಲ, ನೀವು ಪ್ರತಿಯೊಬ್ಬ ಭಾರತೀಯನ ಮೇಲೆ ಹೊರಿಸುತ್ತಿರುವ ಸಾಲದ ಹೊರೆಯೂ ಹೌದು ಎಂದು ಅವರು ವಿವರಿಸಿದರು.
ಸಾರ್ವಜನಿಕ ಚರ್ಚೆಗೆ ಬನ್ನಿ ಪ್ರಧಾನಿ: ಸಿಎಂ ಸವಾಲು
ಪ್ರಧಾನಿಯವರೇ ಆಗಾಗ ನೀವು ಸುಳ್ಳು ಸಂಗತಿಗಳನ್ನು ಪೋಣಿಸಿಕೊಂಡು ಕರ್ನಾಟಕ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಾ ಬಂದಿದ್ದೀರಿ. ಈ " ತೂ ತೂ ಮೈ ಮೈ.." ಚರ್ಚೆಗೆ ತಾರ್ಕಿಕವಾದ ಅಂತ್ಯ ಹಾಡಿಯೇ ಬಿಡೋಣ.
ಕಳೆದ ಎರಡು ಲೋಕಸಭಾ ಚುನಾವಣೆಯ ಮುನ್ನ ನಿಮ್ಮ ಪಕ್ಷ ಬಿಡುಗಡೆಗೊಳಿಸಿದ್ದ ಪ್ರಣಾಳಿಕೆಯನ್ನು ಇಟ್ಟುಕೊಂಡು ಒಂದು ಸಾರ್ವಜನಿಕ ಚರ್ಚೆಯನ್ನು ಹಮ್ಮಿಕೊಳ್ಳೋಣ. ಪ್ರಣಾಳಿಕೆಯಲ್ಲಿ ನೀವು ಕೊಟ್ಟಿರುವ ಭರವಸೆಗಳಲ್ಲಿ ಎಷ್ಟನ್ನು ನೀವು ಈಡೇರಿಸಿದ್ದೀರಿ? ಎನ್ನುವುದನ್ನು ಸಾರ್ವಜನಿಕವಾಗಿಯೇ ಚರ್ಚೆ ಮಾಡೋಣ. ದೇಶದ ಪ್ರಜ್ಞಾವಂತ ಜನರೇ ಯಾರದ್ದು ಎಷ್ಟು ಸತ್ಯ? ಎಷ್ಟು ಸುಳ್ಳು? ಎನ್ನುವುದನ್ನು ತೀರ್ಮಾನಿಸಲಿ ಎಂದು ಸವಾಲು ಹಾಕಿದ್ದಾರೆ.
ಪ್ರಧಾನಿ ಮೋದಿ ಹೇಳಿದ್ದೇನು?
ಅವಾಸ್ತವಿಕ ಭರವಸೆಗಳನ್ನು ನೀಡುವುದು ಸುಲಭ ಆದರೆ ಅವುಗಳನ್ನು ಸರಿಯಾಗಿ ಜಾರಿಗೊಳಿಸುವುದು ಕಠಿಣ ಅಥವಾ ಅಸಾಧ್ಯ ಎಂಬ ಕಠಿಣ ಮಾರ್ಗವನ್ನು ಕಾಂಗ್ರೆಸ್ ಪಕ್ಷ ಅರಿತುಕೊಳ್ಳಬೇಕಿದೆ. ಪ್ರಚಾರದ ನಂತರ ಅವರು ಜನರಿಗೆ ವಿಷಯಗಳನ್ನು ಭರವಸೆ ನೀಡುತ್ತಾರೆ, ಆದರೆ ಅವುಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಸುಳ್ಳು ಭರವಸೆ ನೀಡಲಿದೆ ಎಂದು ಹೇಳಿದ್ದರು. ಆ ಟೀಕೆಗೆ ಸಿಎಂ ತಿರುಗೇಟು ನೀಡಿದ್ದಾರೆ.












Click it and Unblock the Notifications