ಮಲ ಹೊರುವ ಪದ್ಧತಿ ಜೀವ ವಿರೋಧಿ: ರಾಜ್ಯದಲ್ಲಿ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಸಿಎಂ ಸಿದ್ದರಾಮಯ್ಯ
"ಮಲ ಹೊರುವ ಪದ್ಧತಿ ಜೀವ ವಿರೋಧಿ ಮಾತ್ರವಲ್ಲ ಮಾನವ ಹಕ್ಕುಗಳ ಉಲ್ಲಂಘನೆ ಕೂಡ ಹೌದು. ಈ ಕೆಲಸ ಮಾಡಿಸಲು ನಮ್ಮ ರಾಜ್ಯದಲ್ಲಿ ಅವಕಾಶವನ್ನೇ ನಾವು ನೀಡುವುದಿಲ್ಲ. ರಾಜ್ಯದಲ್ಲಿ ಮಲ ಹೊರುವ ಪದ್ಧತಿ ಕಂಡು ಬಂದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
''ಪೌರಕಾರ್ಮಿಕರು ಗೌರವಯುತವಾಗಿ ಬದುಕಬೇಕು ಎಂಬುದು ನಮ್ಮ ಪಕ್ಷ ಹಾಗೂ ಸರ್ಕಾರದ ಬದ್ಧತೆಯಾಗಿದ್ದು, ಪ್ರಥಮ ಬಾರಿಗೆ ಮುಖ್ಯಮಂತ್ರಿಯಾದ ತಕ್ಷಣ ಸಫಾಯಿ ಕರ್ಮಚಾರಿಗಳ ವೇತನವನ್ನು 7 ಸಾವಿರದಿಂದ 17 ಸಾವಿರಕ್ಕೆ ಏರಿಸಿದ್ದೇನೆ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿ ಗುರುತಿಸಲಾದ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳಿಗೆ ಪುನರ್ವಸತಿ ಹಾಗೂ ಸಹಾಯಧನ ವಿತರಣೆ ಹಾಗೂ ತಲಾ 40 ಸಾವಿರ ಸಹಾಯಧನ ವಿತರಿಸಿದ್ದಾರೆ. ಸಮಾವೇಶದಲ್ಲಿ 4000ಕ್ಕೂ ಹೆಚ್ಚು ಸಫಾಯಿ ಕರ್ಮಚಾರಿಗಳಿಗೆ ಆರ್ಥಿಕ ನೆರವು ನೀಡಲಾಗಿದೆ.
ಇದೇ ವೇಳೆ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಗೆ ಅವಕಾಶ ನೀಡುವುದಿಲ್ಲ. ಒಂದು ವೇಳೆ ಆ ರೀತಿ ನಡೆದುಕೊಂಡರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
"ಕಟ್ಟಡ ಕಾರ್ಮಿಕರಿಗೆ ಮನೆ ನಿರ್ಮಿಸಿಕೊಳ್ಳಲು 7.5 ಲಕ್ಷ ನೆರವು ನೀಡುವ ಯೋಜನೆ ಜಾರಿಗೊಳಿಸಿದ್ದು ನಮ್ಮ ಸರ್ಕಾರ. ನಾನು ಮುಖ್ಯಮಂತ್ರಿಯಾಗಿ ಈ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇನೆ. ಅಂಬೇಡ್ಕರ್ ಸಂವಿಧಾನ ನೀಡದೇ ಇದ್ದಿದ್ದರೆ ನಾನು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಹಾಗಾಗಿ ಸಂವಿಧಾನದ ವಿರೋಧಿಗಳು ನಮ್ಮ ವಿರೋಧಿಗಳೂ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಸಂವಿಧಾನ ವಿರೋಧಿಗಳನ್ನು ಸಾರಾಸಗಟಾಗಿ ತಿರಸ್ಕರಿಸಬೇಕು" ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಪೌರ ಕಾರ್ಮಿಕರ ಹಿತಕಾಯಲು ನಾವು ಈಗಲೂ ಬದ್ಧರಿದ್ದೇವೆ: ಸಿದ್ದರಾಮಯ್ಯ
ಈ ಬಗ್ಗೆ ಟ್ವಿಟ್ ಮಾಡಿರುವ ಸಿದ್ದರಾಮಯ್ಯ ಅವರು, "ಮಲ ಹೊರುವ ಪದ್ಧತಿ ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಈ ಪದ್ಧತಿ ಜೀವ ವಿರೋಧಿ ಮಾತ್ರವಲ್ಲ ಮಾನವ ಹಕ್ಕುಗಳ ಉಲ್ಲಂಘನೆ ಕೂಡ ಹೌದು. ಈ ಕೆಲಸ ಮಾಡಿಸಲು ನಮ್ಮ ರಾಜ್ಯದಲ್ಲಿ ಅವಕಾಶವನ್ನೇ ನಾವು ನೀಡುವುದಿಲ್ಲ" ಎಂದಿದ್ದಾರೆ.
"ಪೌರಕಾರ್ಮಿಕರು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಮತ್ತು ಘನತೆಯಿಂದ ಬದುಕಬೇಕೆಂಬ ಉದ್ದೇಶದಿಂದ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದೆ. ಅವರ ಸಂಬಳವನ್ನು 7,000 ದಿಂದ ₹17,000 ಕ್ಕೆ ಏರಿಸಿದ್ದೆವು, ಮನೆಕಟ್ಟಿಕೊಳ್ಳಲು 7.5 ಲಕ್ಷ ನೆರವು ನೀಡುವ ಕಾರ್ಯಕ್ರಮ ಜಾರಿ ಮಾಡಿದ್ದೆವು. ಪೌರ ಕಾರ್ಮಿಕರ ಹಿತಕಾಯಲು ನಾವು ಈಗಲೂ ಬದ್ಧರಿದ್ದೇವೆ" ಎಂದು ಭರವಸೆ ನೀಡಿದ್ದಾರೆ.












Click it and Unblock the Notifications