ದರ್ಶನ್ ಕ್ರೌರ್ಯದ ವಿಡಿಯೋ ನೋಡಿದ CM ಸಿದ್ದರಾಮಯ್ಯ: ಸಂಪುಟದಲ್ಲಿ ಪ್ರಕರಣದ ಚರ್ಚೆ ಮಾಡದಂತೆ ವಾರ್ನಿಂಗ್
ಬೆಂಗಳೂರು, ಜೂನ್ 20: ರಾಜ್ಯವ್ಯಾಪಿ ಚರ್ಚೆಗೆ ಮತ್ತು ಖಂಡನೆಗೆ ಕಾರಣವಾಗಿರುವ ರೇಣುಕಸ್ವಾಮಿಯ ಕೊಲೆ ಮತ್ತು ನಟ ದರ್ಶನ್ ಬಂಧನ ಪ್ರಕರಣವು ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲೂ ಭಾರೀ ಸದ್ದು ಮಾಡಿದೆ. 'ಇಂತಹ ಕ್ರೂರತನವನ್ನು ನಾನೆಂದು ನೋಡಿಯೇ ಇಲ್ಲ' ಎಂದು ಕೊಲೆಯ ಬಗ್ಗೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ.
ಸಚಿವ ಸಂಪುಟ ಆರಂಭದಲ್ಲಿಯೇ ಸಿಎಂ ಸಿದ್ದರಾಮಯ್ಯ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣ ಕುರಿತು ಮಾತನಾಡದಂತೆ ಸೂಚಿಸಿದ್ದಾರೆ. ಈ ಬಗ್ಗೆ ಯಾವ ಶಾಸಕರು, ಸಚಿವರುಗಳು ತುಟಿ ಬಿಚ್ಚದಂತೆ ತಾಕೀತು ಮಾಡಿದ್ದಾರೆ.

ಸಚಿವ ಸಂಪುಟ ಸಭೆ ಎಂದಿನಂತೆ ಆರಂಭವಾಗುತ್ತಿದ್ದಂತೆ ದರ್ಶನ್ ಆಂಡ್ ಗ್ಯಾಂಗ್ ಮಾಡಿದ ಹತ್ಯೆ ಪ್ರಕರಣ ಕುರಿತು ಮಾತನಾಡಿದ್ದಾರೆ. ರೇಣುಕಾಸ್ವಾಮಿ ಮೇಲಿನ ಕ್ರೌರ್ಯದ ವಿಡಿಯೋವನ್ನು ಸ್ವತಃ ವಿಡಿಯೋ ನೋಡಿದ್ದಾಗಿ ತಿಳಿಸಿದ್ದಾರೆ. ಇಂತಹ ಕ್ರೌರ್ಯವನ್ನು ನಾನು ಹಿಂದೆಂದೂ ನೋಡಿಯೇ ಇಲ್ಲ ಎಂದು ಆಘಾತ ವ್ಯಕ್ತಪಡಿಸಿದ್ದಾರೆ.
ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅನಗತ್ಯವಾಗಿ ಯಾರೂ ತುಟಿ ಬಿಚ್ಚಬೇಡಿ, ಪರ ವಿರೋಧ ಚರ್ಚೆ ಬೇಡ ಎಂದು ಸಿದ್ದರಾಮಯ್ಯ ಅವರು ಶಾಸಕರು, ಸಚಿವರುಗಳಿಗೆ ಖಡಕ್ ವಾರ್ನಿಂಗ್ ಮಾಡಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆಯೂ ಯಾರೂ ಮಾತನಾಡಬೇಡಿ. ಪ್ರಕರಣ ಸಂಬಂಧ ಕಾನೂನು ತನ್ನ ಕೆಲಸ ಮಾಡಲಿದೆ. ಯಾವುದೇ ಚರ್ಚೆ ಮಾಡಬೇಡಿ ಎಂದು ಸಂಪುಟ ಸಭೆ ಆರಂಭದಲ್ಲಿ ಸಿಎಂ ಸಿದ್ದರಾಮಯ್ಯ ಸದಸ್ಯರಿಗೆ ಸೂಚನೆ ನೀಡಿದ್ದಾರೆ.
ದರ್ಶನ್ ಮತ್ತವನ ಗ್ಯಾಂಗ್ ಮಾಡಿರುವ ಹತ್ಯೆ ಪ್ರಕರಣದ ವಿಡಿಯೋ ಅನ್ನು ಪೊಲೀಸರು ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರಿಗೆ ತೋರಿಸಿದ್ದಾರೆ ಎಂದು ತಿಳಿದು ಬಂದಿದೆ. ಅದನ್ನು ನೋಡಿದ ಸಿಎಂ ಸಿದ್ದರಾಮಯ್ಯನವರೇ ಒಂದು ಕ್ಷಣದಂಗಾಗಿದ್ದಾರೆ. ಹೀಗಾಗಿ ಅವರು ಈ ಪ್ರಕರಣದಲ್ಲಿ ಖಡಕ್ ನಿಲುವು ತೆಗೆದುಕೊಂಡಿದ್ದಾರೆ ಎಂದು ಅನೇಕರು ಅವರ ನಿಲುವನ್ನು ಶ್ಲಾಘಿಸಿದ್ದಾರೆ.
ಪಬ್ಲಿಕ್ ಪ್ರಾಸಿಕ್ಯೂಟರ್ ಬದಲಾವಣೆಯ ವದಂತಿ ಎದ್ದಾಗಲೂ ಸಹ ಮುಖ್ಯಮಂತ್ರಿಗಳು ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಎಸ್‌ಪಿಪಿ ಬದಲಾವಣೆ ಇಲ್ಲ ಎಂದು ಟ್ವೀಟ್ ಮೂಲಕವು ಖಚಿತಪಡಿಸಿದ್ದಾರೆ.

ವಿಕೃತವಾಗಿ ಸಾಯಿಸಿದ ದರ್ಶನ್ ಗ್ಯಾಂಗ್
ಪವಿತ್ರಾ ಗೌಡಗೆ ಅಶ್ಲೀಲ ಮೆಸೆಜ್ ಮಾಡಿದ್ದ, ತನ್ನ ಮರ್ಮಾಂಗದ ಫೋಟೋ ಕಳುಹಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದಿಂದ ಅಪಹರಿಸಿಕೊಂಡು ಬಂದಿದ್ದ ರೇಣುಕಾಸ್ವಾಮಿಯ ಮರ್ಮಾಂದ ಚರ್ಮ ಸುಲಿದಿದ್ದಾರೆ ಎನ್ನಲಾಗಿದೆ. ಈ ಕುರಿತ ಫೋಟೋಗಳು ಹರಿದಾಡುತ್ತಿವೆ.
ಇದರೊಂದಿಗೆ ಎಲೆಕ್ಟ್ರಿಕ್ ಶಾಕ್, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ. ರೇಣುಕಾಸ್ವಾಮಿ ಮಾಂಸ ತಿನ್ನಿಸಿ ವಿಕೃತಿ ಮೆರೆದಿದ್ದಾರೆ. ಆತನನ್ನು ಲಾರಿ ಮತ್ತು ಗೋಡೆಗೆ ಎಸೆದಿದ್ದಾರೆ. ಮನಬಂದಂತೆ ಥಳಿಸಿದ್ದಾರೆ. ಮರ್ಮಾಂಗಕ್ಕೆ ಒದ್ದು ಹಲ್ಲೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ದರ್ಶನ್ ಗ್ಯಾಂಗ್ ಕ್ರೌರ್ಯದ ವಿಡಿಯೋ ಸಹ ಸೆರೆಯಾಗಿದೆ. ಅದನ್ನು ಮುಖ್ಯಮಂತ್ರಿಗಳಿಗೆ ತೋರಿಸಲಾಗಿದೆ. ಕೃತ್ಯಕ್ಕೆ ಸಂಬಂಧಿಸಿದ 100 ಕ್ಕೂ ಸಾಕ್ಷ್ಯಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದರ್ಶನ್ ಮತ್ತೆ ಪೊಲೀಸ್ ಕಸ್ಟಡಿಗೆ
ಸದ್ಯ ಹತ್ತು ದಿನಗಳ ಪೊಲೀಸ್ ಕಸ್ಟಡಿ ಪೂರ್ಣಗೊಳಿಸಿರುವ ದರ್ಶನ್ ಆಂಡ್ ಗ್ಯಾಂಗ್ ಅನ್ನು ಇಂದು ಮತ್ತೆ ಕೋರ್ಟ್ ಮುಂದೆ ತನಿಖಾಧಿಕಾರಿಗಳು ಹಾಜರುಪಡಿಸಿದರು. ಈ ವೇಳೆ ಪ್ರಮುಖ ಆರೋಪಿಗಳಾದ ದರ್ಶನ್, ರಘು ಸೇರಿದಂತೆ 06 ಜನರನ್ನು ಪೊಲೀಸ್ ಕಸ್ಟಿಡಿಗೆ ನೀಡುವಂತೆ ಕೋರಿದ್ದಾರೆ. ಪವಿತ್ರಾ ಗೌಡಗೆ ಸೇರಿ ಉಳಿದವರಿಗೆ ನ್ಯಾಯಾಂಗ ಬಂಧನವಾಗಿದೆ.












Click it and Unblock the Notifications