ಬೆಂಗಳೂರು ನಗರ ಪ್ರದಕ್ಷಿಣೆ ಮಾಡಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಫೆ.7 : ಸಿಎಂ ಸಿದ್ದರಾಮಯ್ಯ ಶುಕ್ರವಾರ ಬೆಂಗಳೂರು ನಗರ ಪ್ರದಕ್ಷಿಣೆ ಕೈಗೊಂಡಿದ್ದರು. ತಮ್ಮ ನಗರ ಪ್ರದಕ್ಷಿಣೆ ವೇಳೆ ಸುಮಾರು 380 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಸಿಎಂ, 90 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿದರು. 2014-15ರ ಬಜೆಟ್ ನಲ್ಲಿ ಬೆಂಗಳೂರಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಘೋಷಿಸಿದರು.
ಶುಕ್ರವಾರ ಸಿಎಂ ಸಿದ್ದರಾಮಯ್ಯ, ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಸಚಿವರಾದ ರೋಷನ್ ಬೇಗ್, ಕೆಜೆ ಜಾರ್ಜ್ ಮುಂತಾದವರೊಂದಿಗೆ ನಗರ ಪ್ರದಕ್ಷಿಣೆ ನಡೆಸಿದರು. ಪ್ರದಕ್ಷಿಣೆ ವೇಳೆ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಹಲವಾರು ಕಾಮಗಾರಿಗಳನ್ನು ಉದ್ಘಾಟಿಸಿದರು.

ಒಂದು ವಾರದಲ್ಲಿ ಉದ್ಘಾಟನೆಗೆ ಸೂಚನೆ : ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ಸಿಎನ್‌ಆರ್ ವೃತ್ತದ ಅಂಡರ್ ಪಾಸ್ ಕಾಮಗಾರಿಯ ಒಂದು ಭಾಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಒಂದು ವಾರದೊಳಗೆ ಉದ್ಘಾಟನೆ ಮಾಡಲು ಸಿದ್ಧತೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉದ್ಘಾಟನೆಗಳು : ಸಿಎಂ ಸಿದ್ದರಾಮಯ್ಯ ತಮ್ಮ ನಗರ ಪ್ರದಕ್ಷಿಣೆ ವೇಳೆ 40 ಕೋಟಿ ರೂ. ವೆಚ್ಚದ ಬಿಇಎಲ್ ಮತ್ತು ಕುವೆಂಪು ವೃತ್ತದ ಕೆಳಸೇತುವೆ, 20 ಕೋಟಿ ರೂ. ವೆಚ್ಚದ ಭದ್ರಪ್ಪ ಜಂಕ್ಷನ್‌ನಲ್ಲಿ ಹೊರವರ್ತುಲ ರಸ್ತೆಯ ಮೇಲ್ಸೇತುವೆ ಸೇರಿದಂತೆ ಒಟ್ಟು 90 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಉದ್ಘಾಟಿಸಿದರು.
ಭರವಸೆ : ಹೆಣ್ಣೂರು ಬಳಿ ಇರುವ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿ ಪರಿವರ್ತಿಸಲು 2014-15ರ ಬಜೆಟ್ ನಲ್ಲಿ ವಿಶೇಷ ಅನುದಾನ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು. [ಸಿದ್ದರಾಮಯ್ಯ ಬೆಂಗಳೂರು ಪ್ರದಕ್ಷಿಣೆ]
ಕಾಮಗಾರಿಗಳಿಗೆ ಶಂಕು ಸ್ಥಾಪನೆ : ಸಿಎಂ ಸಿದ್ದರಾಮಯ್ಯ ತಮ್ಮ ಬೆಂಗಳೂರು ನಗರ ಪ್ರದಕ್ಷಿಣೆ ವೇಳೆ ಸುಮಾರು 380 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಗೊರಗುಂಟೆ ಪಾಳ್ಯ ಜಂಕ್ಷನ್‌ನಲ್ಲಿ ತುಮಕೂರು ರಸ್ತೆಗೆ ಅಡ್ಡಲಾಗಿ ಕೆಳ ಸೇತುವೆ ನಿರ್ಮಿಸುವ ಕಾಮಗಾರಿ, ಕಂಠೀರವ ಸ್ಟುಡಿಯೋ ಜಂಕ್ಷನ್‌ನಿಂದ ಎಎಲ್‌ಎಸ್‌ಐಡಿಎವರೆಗೆ ಹೊರವರ್ತುಲ ರಸ್ತೆ ಉನ್ನತೀಕರಣ ಕಾಮಗಾರಿ, ಯಶವಂತಪುರ-ತುಮಕೂರು ರೈಲ್ವೆ ಹಳಿಯ ಮೇಲೆ ಎಲಿವೇಟೆಡ್ ರಸ್ತೆ ನಿರ್ಮಾಣ ಮುಂತಾದ ಕಾಮಗಾರಿಗಳಿಗೆ ಸಿಎಂ ಶಂಕುಸ್ಥಾಪನೆ ನೆರವೇರಿಸಿದರು.
ಕೆಂಪೇಗೌಡ ಬಡಾವಣೆ : ಕೆಂಪೇಗೌಡ ಬಡಾವಣೆಯಲ್ಲಿನ ನಿವೇಶನ ಹಂಚಿಕೆ ವಿಚಾರದ ಕುರಿತು ಮಾತನಾಡಿದ ಸಿಎಂ, ಕಳೆದ 10 ವರ್ಷದಿಂದ ಹಂಚಿಕೆಯಾಗದ ನಿವೇಶನಗಳನ್ನು 2014ರ ಮಾರ್ಚ್ ಒಳಗೆ ಹಂಚಿಕೆ ಮಾಡಲಾಗುವುದು. 5 ಸಾವಿರ ನಿವೇಶನ ಹಂಚಿಕೆಗೆ ಅರ್ಜಿ ಆಹ್ವಾನಿಸಲಾಗುವುದು ಎಂದು ಹೇಳಿದರು.












Click it and Unblock the Notifications