ಕೇಂದ್ರದಿಂದ ರಾಜ್ಯಕ್ಕೆ ಭಾರಿ ಅನ್ಯಾಯ: ಲೆಕ್ಕ ಕೊಟ್ಟ ಸಿದ್ದರಾಮಯ್ಯ
ಕರ್ನಾಟಕದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕ್ಯಾಬಿನೆಟ್ ಸಭೆ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯಕ್ಕೆ ಭಾರಿ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ನೀಡಿರುವ 5 ಗ್ಯಾರಂಟಿಗಳನ್ನು ಈಡೇರಿಸಲು ಸುಮಾರು 50 ಸಾವಿರ ಕೋಟಿ ರುಪಾಯಿ ಬೇಕಾಗಬಹುದು. ಕೇಂದ್ರದಿಂದ ಈ ವರ್ಷ 50 ಸಾವಿರ ಕೋಟಿ ರುಪಾಯಿ ಬಾಕಿ ಬರಬೇಕಿದೆ. ರಾಜ್ಯದಿಂದ 4 ಲಕ್ಷ ಕೋಟಿ ರುಪಾಯಿ ತೆರಿಗೆ ಕಟ್ಟುತ್ತಿದ್ದೇವೆ. ರಾಜ್ಯದ ಬಜೆಟ್ ಗಾತ್ರ 3.10 ಲಕ್ಷ ಕೋಟಿ ರುಪಾಯಿ ಇದೆ. ನಮ್ಮ ರಾಜ್ಯದ ಬಗ್ಗೆ ಕೇಂದ್ರ ಮಲತಾಯಿ ಧೋರಣೆ ತೋರಿಸುತ್ತಿದೆ, ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯಕ್ಕೆ ಕಡಿಮೆ ಅನುದಾನ ನೀಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಜಿಎಸ್‌ಟಿ ಕೌನ್ಸಿಲ್ ಸದಸ್ಯರಾಗಿದ್ದರೂ ರಾಜ್ಯಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ನಾವು ಕಟ್ಟುವ ತೆರಿಗೆಯನ್ನೇ ಕೇಂದ್ರ ವಾಪಸ್ ನೀಡುವುದು, ಕಾಂಗ್ರೆಸ್ ಘೋಷಣೆ ಮಾಡಿರುವ 5 ಗ್ಯಾರಂಟಿ ಯೋಜನೆ ಜಾರಿಯಾದರೆ ರಾಜ್ಯ ದಿವಾಳಿ ಆಗುತ್ತದೆ ಅಂತ ಬಿಜೆಪಿಯವರು ಹೇಳಿದ್ದಾರೆ. ಆದರೆ ದೇಶವನ್ನು ಸಾಲಕ್ಕೆ ದೂಡಿದ್ದು ಯಾರು? ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶದ ಸಾಲ 53 ಲಕ್ಷ ಕೋಟಿ ರುಪಾಯಿ ಇತ್ತು. ಈಗ ದೇಶದ ಸಾಲಕ 155 ಕೋಟಿ ರುಪಾಯಿ ಆಗಿದೆ, ರಾಜ್ಯದ ಸಾಲ 3.22 ಲಕ್ಷ ಕೋಟಿ ರುಪಾಯಿ ಇದೆ ಎಂದು ಮಾಹಿತಿ ನೀಡಿದರು.
ಎಷ್ಟೇ ಕಷ್ಟವಾದರೂ ಕೊಟ್ಟ ಭರವಸೆ ಈಡೇರಿಸುತ್ತೇವೆ
ಚುನಾವಣೆಗೆ ಮುನ್ನ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು, 10 ಕೆಜಿ ಅಕ್ಕಿ, ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 3,000 ರುಪಾಯಿ ಭತ್ಯೆ, ನಿರುದ್ಯೋಗಿ ಡಿಪ್ಲೋಮಾ ಪದವೀಧರರಿಗೆ ತಿಂಗಳಿಗೆ 1500 ರು, ಬಡ ಕುಟುಂಬದ ಮನೆಯೊಡತಿಗೆ ಪ್ರತಿ ತಿಂಗಳು 2000 ರುಪಾಯಿ ಹಣ, ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣದ ಭರವಸೆ ನೀಡಿತ್ತು.
ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಐದು ಗ್ಯಾರಂಟಿಗಳನ್ನು ಅನುಷ್ಠಾನ ಮಾಡಲು ತಾತ್ವಿಕ ಅನುಮೋದನೆ ಪಡೆಯಲಾಗಿದೆ ಎಂದು ಸಿದ್ದರಾಮಯ್ಯ ಮಾಧ್ಯಮ ಗೋಷ್ಠಿಯಲ್ಲಿ ಘೋಷಿಸಿದರು. ಮುಂದಿನ ಸಭೆಗಳಲ್ಲಿ ಚರ್ಚೆ ಮಾಡಿದ ಬಳಿಕ ಹೆಚ್ಚಿನ ವಿವರ ನೀಡುವುದಾಗಿ ಅವರು ಹೇಳಿದರು.












Click it and Unblock the Notifications